More

    ಕಲುಷಿತ ನೀರು ಬಾವಿಗೆ

    | ರವಿ ಗೋಸಾವಿ ಬೆಳಗಾವಿ

    ನಗರೀಕರಣ ಹೆಚ್ಚಾದಂತೆಲ್ಲ ಮೂಲ ಸೌಕರ್ಯ ಸರಿಯಾಗಿ ಒದಗಿಸದೆ ಹೋದರೆ ಏನೆಲ್ಲ ರಾದ್ಧಾಂತಗಳಾಬಹುದು ಎಂಬುದು ಪ್ರತಿ ಮಳೆಗಾಲದಲ್ಲಿ ಸಾಬೀತಾಗುತ್ತಲೇ ಇದೆ. ಆದರೂ ಸ್ಥಳೀಯ ಆಡಳಿತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಇದರಿಂದ ನಗರವಾಸಿಗಳು ಹೆಚ್ಚೆಚ್ಚು ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಿದ್ದಾರೆ. ಅಂಥದ್ದೇ ತೊಂದರೆಯನ್ನು ಓಂ ನಗರ ಹಾಗೂ ಟೀಚರ್ಸ್ ಕಾಲನಿ ನಿವಾಸಿಗಳು ಎದುರಿಸುತ್ತಿದ್ದಾರೆ.

    ಅವೈಜ್ಞಾನಿಕ ಒಳಚರಂಡಿ ನಿರ್ಮಾಣ ಹಾಗೂ ಅಸಮರ್ಪಕ ನಿರ್ವಹಣೆಯ ಪರಿಣಾಮ ಚರಂಡಿಯ ಮಲಿನ ನೀರು ಶುದ್ಧ ಕುಡಿಯುವ ನೀರಿನ ಬಾವಿಗಳಿಗೆ ಸೇರುತ್ತಿದೆ. ಇದರಿಂದ ಬಾವಿಯ ನೀರು ಮಲಿನವಾಗುತ್ತಿದ್ದು, ಕುಡಿಯಲು ಬಳಸುವಂತಿಲ್ಲ.

    ಜಲಮೂಲವೇ ಮಲಿನ: ಹಲವು ವರ್ಷಗಳಿಂದ ಆಧಾರವಾಗಿದ್ದ ನೀರಿನ ಮೂಲವೇ ಮಲಿನಗೊಂಡಿದ್ದು, ಸಾರ್ವಜನಿಕರಲ್ಲಿ ಅನಾರೋಗ್ಯದ ಭೀತಿ ಕಾಡುತ್ತಿದೆ. ಓಂನಗರ ಮತ್ತು ಟೀಚರ್ಸ್ ಕಾಲನಿಯ ವಿವಿಧೆಡೆ ಬಾವಿ ನೀರು ಅಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಪರೀಕ್ಷೆಯಿಂದ ತಿಳಿದುಬಂದಿದೆ. ಬಳಕೆ ಮಾಡದಂತಹ ಕಲುಷಿತ ನೀರು ಒಂದೆಡೆಯಾದರೆ, ಈ ಜಲಮೂಲಗಳು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಅನಾರೋಗ್ಯ ಪ್ರಕರಣ ಕಂಡು ಬರುತ್ತಿವೆ.

    ಅನಾರೋಗ್ಯ ಭೀತಿ: ‘ಡ್ರೈನೇಜ್ ಸರಿಪಡಿಸುವಂತೆ ಅನೇಕ ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮೇಲಿಂದ ಮೇಲೆ ಹೀಗೆ ಬಾವಿಗಳಿಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ದಾರಿ ಇಲ್ಲದೆ ಅದೇ ನೀರನ್ನು ಉಪಯೋಗಿಸುವುದರಿಂದ ಬಡಾವಣೆಯ ಅನೇಕ ನಿವಾಸಿಗಳು ಕಾಯಿಲೆಗಳಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಓಂ ನಗರದ ನಿವಾಸಿ ಪಾರೀಷ ಜೈನರ.

    ಜನರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುನ್ನ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಇತ್ತ ಗಮನಹರಿಸಿ, ಚರಂಡಿ ಹೂಳೆತ್ತುವ ಮೂಲಕ ಡ್ರೈನೇಜ್ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ ನಿವಾಸಿಗರು.

    ಬಾವಿ ಸೇರುತ್ತಿದೆ ಡ್ರೈನೇಜ್‌ನ ಮಲಿನ ನೀರು!: ಪಾತ್ರೆ ಮತ್ತು ಬಟ್ಟೆ ತೊಳೆಯಲು ಹಾಗೂ ಕುಡಿಯುವ ನೀರಿಗಾಗಿ ಬಾವಿ ಆಶ್ರಯಿಸಿದ್ದ ಸ್ಥಳೀಯರು ಈ ಪ್ರದೇಶಗಳಲ್ಲಿ ನಿರ್ಮಿಸಿರುವ ಕಳಪೆ, ಅವೈಜ್ಞಾನಿಕ ಒಳಚರಂಡಿಯಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ. ಮೇಲಿಂದ ಮೇಲೆ ಡ್ರೈನೇಜ್ ತುಂಬಿಕೊಂಡು ಶೌಚದ ನೀರೂ ಸಹ ಶುದ್ಧ ಬಾವಿಗಳನ್ನು ಸೇರುತ್ತಿದೆ. ಇದರಿಂದ ಬಾವಿ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಬರುತ್ತಿದೆ. ಹಾಗಾಗಿ ಕೊಳವೆಬಾವಿ, ತೆರೆದ ಬಾವಿಗಳ ಸುತ್ತಲೂ ನೀರು ನಿಲ್ಲದಂತೆ, ಮಲಿನವಾಗದಂತೆ ನೋಡಿಕೊಳ್ಳಬೇಕು.

    ಕ್ಲೋರಿನೇಷನ್ ಮಾಡಿ 2 ದಿನಗಳ ಅನಂತರ ನೀರನ್ನು ಚೆನ್ನಾಗಿ ಕುದಿಸಿ ಕುಡಿಯಲು ಬಳಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಬಾವಿ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಶುದ್ಧೀಕರಿಸಿದರೂ ಮತ್ತೆ ಮಲಿನ ನೀರು ಬಾವಿಗೆ ಸೇರಿ ಜನರು ನರಕಯಾತನೆ ಅನುಭವಿಸುವಂತಾಗಿದೆ.

    ಒಂದು ವಾರದಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಡ್ರೈನೇಜ್ ಸರಿಪಡಿಸುವಂತೆ ಕರೆ ಮಾಡಿದರೆ ಸಿಬ್ಬಂದಿ ಹಣದ ಬೇಡಿಕೆ ಇಡುತ್ತಾರೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೂ ಮೌಖಿಕ ದೂರು ನೀಡಿದ್ದೇವೆ. ಕುಡಿಯುವ ನೀರಿನ ಪ್ರತಿಯೊಂದು ಮೂಲಗಳಿಗೆ ವಾರಕ್ಕೊಮ್ಮೆ ಕ್ಲೋರಿನೇಷನ್ ಮಾಡಿಸಬೇಕಿದೆ. ನೀರಿನ ಪೈಪ್‌ಗಳು ಒಡೆದಿರುವ ಬಗ್ಗೆ ಪರಿಶೀಲಿಸಿ ತಕ್ಷಣ ದುರಸ್ತಿ ಮಾಡಿಸಬೇಕು.
    | ಮಂಜುನಾಥ ಎಚ್, ನಾಗರಾಜ, ಎನ್.ಪರಿಮಳಾ ಓಂನಗರ ನಿವಾಸಿಗಳು

    ಒಳಚರಂಡಿ ಮತ್ತು ಜಲಮಂಡಳಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕರು ಸಹ ತಮ್ಮ ಬಾವಿಗಳ ಸುತ್ತಮುತ್ತ ನೀರು ನಿಲ್ಲದ ಹಾಗೆ ಮುತುವರ್ಜಿ ವಹಿಸಬೇಕು. ಓಂ ನಗರದಲ್ಲಿ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ, ತೊಂದರೆ ನಿವಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಸೂಚನೆ ನೀಡುತ್ತೇನೆ.
    | ಕೆ.ಎಚ್. ಜಗದೀಶ. ಆಯುಕ್ತ ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts