More

    ಗ್ರಾಹಕರಿಗೆ ತೂಕ, ಅಳತೆಯಲ್ಲಿ ಮೋಸ

    ರಾಣೆಬೆನ್ನೂರ: ಗ್ರಂಥಾಲಯ, ತೂಕ ಮತ್ತು ಅಳತೆ ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳು ಈವರೆಗೆ ಒಂದು ಸಭೆಗೂ ಹಾಜರಾಗಿಲ್ಲ. ಗ್ರಂಥಾಲಯಗಳು ಪಾಳು ಬಿದ್ದಿವೆ. ಮಾರುಕಟ್ಟೆಯಲ್ಲಿ ತೂಕದಲ್ಲಿ ಭಾರಿ ಮೋಸ ನಡೆಯುತ್ತಿದೆ. ಈ ಬಗ್ಗೆ ಯಾರೊಂದಿಗೆ ರ್ಚಚಿಸಬೇಕು ಎಂದು ನೀಲಕಂಠಪ್ಪ ಕೂಸಗೂರ ಪ್ರಶ್ನಿಸಿದರು.

    ನಗರದ ತಾಪಂ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಯಲ್ಲಿ ಮಾತನಾಡಿದ ಅವರು, ತಾಲೂಕಿನ ಯಾವ ಗ್ರಾಮದಲ್ಲೂ ಗ್ರಂಥಾಲಯ ಸಪ್ತಾಹ ಮಾಡಿಲ್ಲ. ಅಧಿಕಾರಿಗಳಿಗೆ ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ನಗರ ಹಾಗೂ ಗ್ರಾಮೀಣ ಭಾಗದ ಬಹುತೇಕ ಮಾರುಕಟ್ಟೆಯಲ್ಲಿ ತೂಕ ಮತ್ತು ಅಳತೆಯಲ್ಲಿ ಗ್ರಾಹಕರಿಗೆ ನಿತ್ಯವೂ ಮೋಸವಾಗುತ್ತಿದೆ. ಈ ಬಗ್ಗೆ ದೂರು ನೀಡಬೇಕು ಎಂದರೆ ಅಧಿಕಾರಿಗಳು ಸಿಗುತ್ತಿಲ್ಲ. ಸಭೆಗೂ ಆಗಮಿಸುತ್ತಿಲ್ಲ. ಇಂಥವರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂಬುದನ್ನು ಸ್ಪಷ್ಟ ಪಡಿಸಿ, ಸಭೆ ಮುಂದುವರಿಸಬೇಕು ಎಂದು ತಾಪಂ ಇಒಗೆ ಒತ್ತಾಯಿಸಿದರು.

    ಪ್ರತಿಕ್ರಿಯಿಸಿದ ಇಒ ಟಿ.ಆರ್. ಮಲ್ಲಾಡದ, ಈವರೆಗೂ ಸಭೆಗೆ ಬಾರದ ಎಲ್ಲ ಅಧಿಕಾರಿಗಳಿಗೆ ಕೂಡಲೆ ನೋಟಿಸ್ ಜಾರಿ ಮಾಡಬೇಕು. ಸಮರ್ಪಕ ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

    ಅಧ್ಯಕ್ಷೆ ಗೀತಾ ಲಮಾಣಿ ಮಾತನಾಡಿ, ಗಂಗಾಜಲ ಹಾಗೂ ಪದ್ಮಾವತಿಪುರ ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿ ಹಲವು ತಿಂಗಳುಗಳೇ ಕಳೆದಿವೆ. ಈವರೆಗೂ ದುರಸ್ತಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾಲತೇಶ ಪಿ., ‘ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವರು 1 ರೂ. ಬದಲು ಕಲ್ಲು ಅಥವಾ ಪ್ಲಾಸ್ಟಿಕ್ ಹಾಕುತ್ತಿದ್ದಾರೆ. ಹೀಗಾಗಿ ಘಟಕಗಳು ಬಂದ್ ಆಗಿವೆ. ಈ ಬಗ್ಗೆ ಬೀಟ್ ಪೊಲೀಸರಿಗೂ ದೂರು ನೀಡಿದ್ದೇವೆ. ಮುಂದಿನ ದಿನದಲ್ಲಿ ಸರಿಪಡಿಸಲಾಗುವುದು’ ಎಂದರು.

    ಚೈತ್ರಾ ಮಾಗನೂರ ಮಾತನಾಡಿ, ಕೋಟಿಹಾಳ-ನಿಟಪಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಆರು ತಿಂಗಳು ಕಳೆದಿದೆ. ಆದರೆ, ಇಂದಿಗೂ ಕಾಮಗಾರಿ ಆರಂಭಿಸಿಲ್ಲ. ರಸ್ತೆ ನೋಡಿದರೆ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಕೂಡಲೆ ದುರಸ್ತಿಪಡಿಸಿ ಎಂದು ತಾಕೀತು ಮಾಡಿದರು. ಪಿಬ್ಲ್ಯುಡಿ ಎಇಇ ಆರ್. ಮಂಜುನಾಥ ಉತ್ತರಿಸಿ, ‘ಆ ಭಾಗ ನೀರಾವರಿ ಏರಿಯಾ ಇರುವುದರಿಂದ ರಸ್ತೆಯನ್ನು ಎತ್ತರ ಮಾಡಿ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅನುಮೋದನೆ ದೊರೆತ ಕೂಡಲೆ ಕಾಮಗಾರಿ ಆರಂಭಿಸುತ್ತೇವೆ’ ಎಂದರು.

    ನೀಲಕಂಠಪ್ಪ ಕೂಸಗೂರ ಮಾತನಾಡಿ, ಶಾಲೆಗಳಲ್ಲಿ ಶೌಚಗೃಹ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಮಕ್ಕಳು ಶಾಲೆ ಬಿಟ್ಟು ದೂರ ಹೋಗಿ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ಗಂಜಾಮದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

    ಅಧಿಕಾರಿಗಳ ನಡುವೆ ಜಟಾಪಟಿ

    ಕರ್ಲಗೇರಿ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಪದೇಪದೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಜನತೆಗೆ ನೀರು ಸರಬರಾಜು ಮಾಡಲು ತೊಂದರೆಯಾಗುತ್ತಿದೆ. ಮಷಿನ್​ಗಳು ಹಾಳಾಗುತ್ತಿವೆ. ಎಕ್ಸ್​ಪ್ರೆಸ್ ವಿದ್ಯುತ್ ಲೈನ್ ಇದ್ದರೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಕೊಟ್ಟರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾಲತೇಶ ಪಿ., ಹೆಸ್ಕಾಂ ಎಇಇ ಪ್ರಕಾಶ ಬುಳ್ಳಾಪುರ ವಿರುದ್ಧ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ ಬುಳ್ಳಾಪುರ, ಅದು ಎಕ್ಸ್​ಪ್ರೆಸ್ ಲೈನ್ ಅಲ್ಲ. ತುರ್ತು ಕಾಮಗಾರಿ ಇದ್ದಾಗ ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯ. ನೀವು ಬರೆದ ಪತ್ರಕ್ಕೆ ಉತ್ತರ ನೀಡಲಾಗಿದೆ ಎಂದರು. ಮಧ್ಯ ಪ್ರವೇಶಿಸಿದ ಇಒ ಟಿ.ಆರ್. ಮಲ್ಲಾಡದ, ಸಮಸ್ಯೆ ಏನಿದೆ ಎಂಬುದನ್ನು ರ್ಚಚಿಸಿ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts