More

    ಏಜೆಂಟರ ತಪ್ಪಿಗೆ ವಿಮಾ ಕಂಪನಿಗೆ ದಂಡದ ಬಿಸಿ; 15 ಲಕ್ಷ ರೂ. ಪಾವತಿಸಲು ಆದೇಶ

    ಹಾವೇರಿ: ಪಾಲಿಸಿದಾರರ ವಯಸ್ಸನ್ನು ಏಜೆಂಟರು 65ರ ಬದಲು 55 ಎಂದು ನಮೂದಿಸುವ ಮೂಲಕ ಅವರ ಕುಟುಂಬಕ್ಕೆ ಬರಬೇಕಾದ ವಿಮೆ ಹಣಕ್ಕೆ ಅಡ್ಡಿ ಉಂಟುಮಾಡಿದ ಏಜೆಂಟರ ತಪ್ಪಿಗಾಗಿ ಬಡ್ಡಿಸಮೇತ 15 ಲಕ್ಷ ರೂ. ಪಾವತಿಸುವಂತೆ ಜೀವ ವಿಮಾ ನಿಗಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ ಹೊರಡಿಸಿದೆ.
    ಹಾನಗಲ್ಲ ತಾಲೂಕು ಬೊಮ್ಮನಹಳ್ಳಿ ಗ್ರಾಮದ ಸೋಮಪ್ಪ ಕ್ಯಾಲಕೊಂಡ ಅವರು ಎಲ್.ಐ.ಸಿ. ಏಜೆಂಟ್ ಸಂಜಯ ಟೋಪೋಜಿ ಮೂಲಕ ಮೇ 7, 2015ರಂದು ಧಾರವಾಡ ಜೀವ ವಿಮಾ ನಿಗಮದ 10 ಲಕ್ಷ ರೂ. ಹಾಗೂ 5 ಲಕ್ಷ ರೂ.ಯ 16 ವರ್ಷಗಳ ಅವಧಿಯ ಎರಡು ಎಂಡೋಮೆಂಟ್ ಪಾಲಿಸಿಗಳನ್ನು ಪಡೆದಿದ್ದರು. ಮಹೇಶ ಕ್ಯಾಲಕೊಂಡ ಅವರನ್ನು ನಾಮಿನಿ ಮಾಡಿದ್ದರು. 2015ರಿಂದ 2018ರವರೆಗೆ ಪಾಲಿಸಿ ಪ್ರೀಮಿಯಂ ಮೊತ್ತ ಪಾವತಿಸಿದ್ದರು.
    ಸೋಮಪ್ಪ ನವೆಂಬರ್ 3, 2018ರಂದು ನಿಧನರಾದರು. ಹಾಗಾಗಿ, ನಾಮಿನಿ ಆಗಿದ್ದ ಮಹೇಶ ಅವರು ಪಾಲಿಸಿ ಹಣಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಧಾರವಾಡ ಜೀವ ವಿಮಾ ನಿಗಮಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು. ‘ಪಾಲಿಸಿದಾರರಿಗೆ 65 ವರ್ಷವಾಗಿದ್ದು, 55 ವರ್ಷ ಎಂದು ತಪ್ಪು ಮಾಹಿತಿ ನೀಡಿ ಪಾಲಿಸಿ ಮಾಡಿಸಿದ್ದರಿಂದ ಪಾಲಿಸಿ ಮೊತ್ತ ಕ್ಲೇಮ್ ಮಾಡಲು ಬರುವುದಿಲ್ಲ’ ಎಂದು ನಿಗಮ ಅರ್ಜಿಯನ್ನು ತಿರಸ್ಕರಿಸಿತ್ತು. ಮಹೇಶ ಅವರು ಪಾಲಿಸಿ ಮೊತ್ತಕ್ಕಾಗಿ ಧಾರವಾಡ ಜೀವ ವಿಮಾ ನಿಗಮ ಹಾಗೂ ಎಲ್.ಐ.ಸಿ.ಏಜೆಂಟರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರಿ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ ಎರಡು ಪಾಲಿಸಿ ಮೊತ್ತ 10 ಲಕ್ಷ ರೂ. ಹಾಗೂ ಐದು ಲಕ್ಷ ರೂ. ಅನ್ನು ಶೇ.6ರ ಬಡ್ಡಿ ಸಮೇತ 30 ದಿನದೊಳಗಾಗಿ ಪಾವತಿಸಲು ಆದೇಶಿಸಿದ್ದಾರೆ ಮಾನಸಿಕ ಮತ್ತು ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಎರಡು ಸಾವಿರ ರೂ. ಪಾವತಿಸಬೇಕು. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts