More

    ಬೆಂಗಳೂರಿನಲ್ಲಿ ಕುವೆಂಪು ಸ್ಮಾರಕ ನಿರ್ಮಾಣ

    ಶಿವಮೊಗ್ಗ: ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರಕವಿ ಕುವೆಂಪು ಸ್ಮಾರಕ ನಿರ್ಮಾಣ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ಸ್ಮಾರಕ ದೇಶದ ಗಮನಸೆಳೆಯುವ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

    ತೀರ್ಥಹಳ್ಳಿ ತಾಲೂಕು ಕುಪ್ಪಳಿಯ ಹೇಮಾಂಗಣದಲ್ಲಿ ಕುವೆಂಪು ಅವರ 119ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ವಿಶ್ವಮಾನವ ದಿನಚರಣೆ ಹಾಗೂ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನ ಜಾಗ ಖರೀದಿ ಮಾಡಿದೆ. ಇದರಲ್ಲಿ ಕುವೆಂಪು ಸ್ಮಾರಕ ಹಾಗೂ ಸಭಾಂಗಣ ನಿರ್ಮಿಸಲಾಗುವುದು ಎಂದರು.
    ಕುವೆಂಪು ಪ್ರತಿಷ್ಠಾನದ ಯಾವುದೇ ಪ್ರಯತ್ನಕ್ಕೂ ಇದುವರೆಗಿನ ಎಲ್ಲ ಸರ್ಕಾರಗಳೂ ಕೈ ಜೋಡಿಸಿವೆ. ಕುವೆಂಪು ಅವರಿಗೆ ಸಂಬಂಧಿಸಿದ ಕೆಲಸವಾದ್ದರಿಂದ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೇವಲ 30 ಗುಂಟೆ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಬದಲು ದೇಶವೇ ಕಣ್ಣರಳಿಸಿ ನೋಡುವಂತೆ ಭವ್ಯ ಸ್ಮಾರಕ ನಿರ್ಮಿಸೋಣ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.
    ಕುವೆಂಪು ಇಂದಿಗೂ ಪ್ರಸ್ತುತರಾಗಿದ್ದಾರೆ. ಅವರ ಸಾಹಿತ್ಯದ ಉಲ್ಲೇಖವಿಲ್ಲದೇ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳು ಮುಕ್ತಾಯವಾಗುವುದೇ ಇಲ್ಲ. ವೈಜ್ಞಾನಿಕ ಮನೋಭಾವ ಬೆಳೆಸಲು ಅವರ ಸಾಹಿತ್ಯಗಳು ಪೂರಕವಾಗಿವೆ. ಬರೆದಂತೆ ಬದುಕಿದ ಕೆಲವೇ ಮಂದಿಯಲ್ಲಿ ಕುವೆಂಪು ಕೂಡಾ ಒಬ್ಬರು ಎಂದು ಬಣ್ಣಿಸಿದರು.
    ಬಂಗಾಳಿಯ ಖ್ಯಾತ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರಿಗೆ 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಪುರಸ್ಕಾರವು ಐದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
    ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts