More

    ಎಲ್ಲರಿಗೂ ಸಮಾನತೆ ನೀಡಿರುವುದು ಸಂವಿಧಾನ

    ಕಡೂರು: ಭಾರತದ ಪ್ರತಿ ಪ್ರಜೆಗೂ ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ನೀಡಿದ್ದಾರೆ. ಅವರನ್ನು ಎಲ್ಲರೂ ಸ್ಮರಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

    ಪಟ್ಟಣಕ್ಕೆ ಶನಿವಾರ ಆಗಮಿಸಿದ ಸಂವಿಧಾನ ಜಾಗೃತಿ ರಥಯಾತ್ರೆ ಸ್ವಾಗತಿಸಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಮಹಿಳೆಯರಿಗೂ ಸಮಾನ ಹಕ್ಕು ಸಿಗಲು ಸಂವಿಧಾನವೇ ಕಾರಣ ಎಂದರು.
    ಪ್ರಸ್ತುತ ಅನೇಕ ಅನಪೇಕ್ಷಿತ ವಿದ್ಯಮಾನಗಳಿಂದ ಜನರಲ್ಲಿ ಮೂಡಿರುವ ಆತಂಕ ದೂರವಾಗಬೇಕು. ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಲು ರಾಜ್ಯ ಸರ್ಕಾರ ರಥಯಾತ್ರೆ ಆರಂಭಿಸಿದೆ. ಬಹಳಷ್ಟು ಜನ ಸಂವಿಧಾನದ ಬಗ್ಗೆ ಅಸೂಯೆ ಪಡುತ್ತಿದ್ದಾರೆ. ಅಂಥವರಿಂದ ಸಂವಿಧಾನವನ್ನು ಉಳಿಸುವ ಜವಾಬ್ದಾರಿ ಎಲ್ಲರದು. ತಾಲೂಕು ಆಡಳಿತ, ಪುರಸಭೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದಿಂದಾಗಿ ಜಾಥಾ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
    ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಮಾತನಾಡಿ, ಪವಿತ್ರವಾದ ಸಂವಿಧಾನದ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ಬಡತನ, ನಿರುದ್ಯೋಗ ನಿವಾರಣೆಯಾಗಬೇಕು ಎಂದು ತಿಳಿಸಿದರು.
    ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮುಂದಿನ ಪೀಳಿಗೆಗೆ ಸಂವಿಧಾನದ ಮಹತ್ವ ತಿಳಿಸಬೇಕಿದೆ ಎಂದರು.
    ಕೆ.ಹೊಸಳ್ಳಿ ಶ್ರೀ ಗಂಗಾಂಬಿಕಾ ಸಮುದಾಯಭವನದಲ್ಲಿ ಸಂವಿಧಾನ ಜಾಥಾ ಪ್ರಾರಂಭವಾಗಿ ಎಮ್ಮೆದೊಡ್ಡಿ ರಸ್ತೆ ಕೆಎಂ ರಸ್ತೆಯಿಂದ ಕನಕವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಪುರಸಭೆ ರಸ್ತೆ, ಕದಂಬ ವೃತ್ತ, ಜೈನ್ ಟೆಂಪಲ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ 20ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭದ ಸ್ವಾಗತ ಕೋರಿದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್, ಅಧಿಕಾರಿಗಳಾದ ಸಿ.ಆರ್.ಪ್ರವೀಣ್, ಎಚ್.ಡಿ.ರೇವಣ್ಣ, ಕೆ.ಎಸ್.ಮಂಜುನಾಥ್, ಶಿವಪ್ರಕಾಶ್, ಸಿದ್ದರಾಜುನಾಯ್ಕ, ಮಂಜುನಾಥ್, ರವಿಶಂಕರ್, ಡಾ. ರವಿಕುಮಾರ್, ಶ್ರೀನಿವಾಸ್, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಯಾಸೀನ್, ಡಿಎಸ್‌ಎಸ್ ಮುಖಂಡರಾದ ಶ್ರೀಕಾಂತ್, ಬಳ್ಳೇಕೆರೆ ಸಂತೋಷ್, ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts