More

    ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ತರುವ ಷಡ್ಯಂತ್ರ: ಮಾವಳ್ಳಿ ಶಂಕರ್ ಕಳವಳ

    ಶಿವಮೊಗ್ಗ: ದೇಶದ ಬಲಿಷ್ಠ ಸಂವಿಧಾನದ ಹೊರತಾಗಿಯೂ ಕೋಮುವಾದಿ ಶಕ್ತಿಗಳು ದೇಶವನ್ನು ಆಳುತ್ತಿದ್ದು ಜಾತಿ-ಜಾತಿಗಳು ಮತ್ತು ಧರ್ಮ-ಧರ್ಮಗಳ ನಡುವೆ ಗಲಭೆಗಳನ್ನು ಸೃಷ್ಟಿಸಿ ಉತ್ಕೃಷ್ಟ ಸಂವಿಧಾನವನ್ನೇ ಇಲ್ಲವಾಗಿಸುವ ಷಡ್ಯಂತ್ರ ನಡೆದಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಳವಳ ವ್ಯಕ್ತಪಡಿಸಿದರು.

    ಕುವೆಂಪು ರಂಗಮಂದಿರದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಜಾಗೃತಿ ಸಮಾವೇಶ ಉದ್ಘಾಟಿಸಿದ ಅವರು, ದೇಶ ವಿರೋಧಿ ಕೆಲಸಗಳನ್ನು ಮಾಡುವ ಮೂಲಕ ನಮ್ಮ ಸಂವಿಧಾನಕ್ಕೆ ಗಂಡಾಂತರ ಬಂದೊದಗಿದೆ ಎಂದು ದೂರಿದರು.
    ಧರ್ಮವನ್ನು ಯಾರೊಬ್ಬರೂ ರಕ್ಷಿಸಬೇಕಾಗಿಲ್ಲ. ಒಳ್ಳೆಯತನ ಇದ್ದರೆ ಧರ್ಮ ಅದಾಗಿಯೇ ಉಳಿಯುತ್ತದೆ. ಸಂವಿಧಾನ ಉಳಿದರೆ ದೇಶವೂ ಉಳಿಯುತ್ತದೆ. ಜನರ ಬದುಕು ಉಳಿಯುತ್ತದೆ. ಸಂವಿಧಾನವು ಅಂಬೇಡ್ಕರ್ ಅವರ ಹೋರಾಟದ ಫಲವಾಗಿದೆ. ವಿದ್ಯಾವಂತ ಹಿಂದುಳಿದ ಮತ್ತು ದಲಿತರು ಸಂವಿಧಾನಕ್ಕೆ ಎದುರಾಗಿರುವ ಗಂಡಾಂತರ ಮತ್ತು ಪ್ರಜಾಪ್ರಭುತ್ವಕ್ಕೆ ಒದಗಿರುವ ಅಪಾಯವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿಲ್ಲ. ಹಿಂದುಳಿದ, ದಲಿತ ಸಮುದಾಯಗಳ ವಿದ್ಯಾವಂತರ ಸ್ವಾರ್ಥದಿಂದ ಈ ಸಮುದಾಯಗಳು ಇಂದಿಗೂ ನರಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ಉಪನ್ಯಾಸಕ ಡಾ. ಮಹಾದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಟಿ.ಎಚ್.ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಎಣ್ಣೆಗೆರೆ ವೆಂಕಟರಾಮಯ್ಯ ಉಪಸ್ಥಿತರಿದ್ದರು.

    ಸುಪ್ರೀಂ ನ್ಯಾಯಾಧೀಶರ ಹೇಳಿಕೆ ನಿಜ
    ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರು ದೇಶದಲ್ಲಿ ಸಂವಿಧಾನಕ್ಕೆ ಗಂಡಾಂತರವಿದೆ ಎಂದು ಮಾಧ್ಯಮಗಳ ಮುಂದೆ ಬಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ ಅದನ್ನು ನಾವೆಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇಂದು ಸಂವಿಧಾನಕ್ಕೆ ಎದುರಾಗಿರುವ ಅಡ್ಡಿ ಆತಂಕಗಳನ್ನು ಗಮನಿಸಿದರೆ ಅಂದು ಅವರ ಮಾತುಗಳು ನಿಜವೆನಿಸುತ್ತಿದೆ. ಸಂವಿಧಾನವನ್ನು ಬದಲಾಯಿಸಲು ನಾವು ಬಂದಿದ್ದೇವೆಂದು ಸಂಸದರೊಬ್ಬರು ಹೇಳುತ್ತಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನದ ಪ್ರತಿಗಳನ್ನು ಸುಡಲಾಗುತ್ತದೆ. ಇದೆಲ್ಲಾ ಯಾಕೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾವಳ್ಳಿ ಶಂಕರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts