More

    ಚುನಾವಣಾ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ

    ಬಾಗಲಕೋಟೆ: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದು, ಎಲ್ಲರೂ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಅಂಚೆ ಇಲಾಖೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತ, ನಮ್ಮ ಹಕ್ಕು ಪ್ರತಿಯೊಬ್ಬರು ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ಕರ್ತವ್ಯ ನಿಭಾಯಿಸಬೇಕು. ಪ್ರತಿಶತ ನೂರರಷ್ಟು ಮತದಾನ ಆಗಬೇಕು. ನಿಮ್ಮ ಮೂಲಕ ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸುವಂತೆ ಮಾಡಬೇಕು ಎಂದರು.

    ಮೇ 7 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಬಗೆಯ ವಿಶೇಷ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ಆಯೋಜನೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಉದ್ದೇಶದೊಂದಿಗೆ ಸ್ವೀಪ್ ಕಾರ್ಯ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸ್ವೀಪ್ ಸಮಿತಿ ಮೂಲಕ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಮತದಾನ ಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ನಮ್ಮದು ಪ್ರಜಾಪ್ರಭುತ್ವ ದೇಶ, ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದರು.

    ಜಿಲ್ಲಾ ಅಂಚೆ ಅಧೀಕ್ಷಕ ಎಚ್.ಬಿ. ಹಸಬಿ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಅಂಚೆ ಇಲಾಖೆಯು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ. ಅಂಚೆ ಕಚೇರಿಯಲ್ಲಿ ಸ್ವೀಕರಿಸುವ ಹಾಗೂ ರವಾನಿಸುವ ಪತ್ರಗಳ ಮುಖಾಂತರ ಮತದಾನ ಮಾಡುವ ಕುರಿತಾಗಿ ಮತದಾರರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಸ್ವೀಪ್ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಕುರೇರ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶಿಶಕಾಂತ ಶಿವಪುರೆ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಬಾಗಲಕೋಟೆ ಸಹಾಯಕ ಅಂಚೆ ಅಧಿಕ್ಷಕರಾದ ಸಿ.ಜಿ. ಕಾಂಬಳೆ, ಎಂ.ಎ. ಬಗವಾನ, ಪೋಸ್ಟ್‌ಮಾಸ್ಟರ್ ಎಸ್.ಎಂ. ಜೋಶಿ, ಎನ್.ಆರ್. ಮೋರೆ ಜಿಲ್ಲಾ ಪಂಚಾಯತಿ ಹಾಗೂ ಅಂಚೆ ಇಲಾಖೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ಮತದಾನ ಜಾಗೃತಿ ಅಭಿಯಾನವು ಅಂಚೆ ಕಚೇರಿ ಮೂಲಕ ಬಸವೇಶ್ವರ ವೃತ್ತದಿಂದ ಸಾಗಿ ನಾನಾ ಕಡೆಗಳಲ್ಲಿ ಸಂಚರಿಸಿತು.

    ಕಾರ್ಯಕ್ರಮ ಪೂರ್ವದಲ್ಲಿ ಬಾಗಲಕೋಟೆ ಅಂಚೆ ಇಲಾಖೆಯಲ್ಲಿ ಸ್ವೀಕರಿಸುವ ಹಾಗೂ ರವಾನಿಸುವ ಪ್ರತಿಯೊಂದು ಪತ್ರಗಳ ಮೇಲೆ ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಘೋಷ ವಾಕ್ಯವುಳ್ಳ ಶೀಲ್ ಹಾಕಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಜಂಟಿಯಾಗಿ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts