More

    13,800 ಸರ್ಕಾರಿ ಶಾಲೆ ಮುಚ್ಚಲು ನಡೆದಿದೆ ಹುನ್ನಾರ: ಕನ್ನಡ ಪರ, ವಿದ್ಯಾರ್ಥಿ ಸಂಘಟನೆಗಳ ಆರೋಪ

    ಬೆಂಗಳೂರು: ಮಾದರಿ ಶಾಲೆ ಮಾಡುವ ನೆಪದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ 13,800 ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಹಲವು ಕನ್ನಡ ಪರ ಮತ್ತು ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅಖಿಲ ಭಾರತ ಪ್ರಜಾಪ್ರಭುತ್ವ ವಿದ್ಯಾರ್ಥಿ ಸಂಘಟನೆ (ಎಐಡಿಎಸ್​ಒ) ಮತ್ತು ಸಾಹಿತಿ ರಾ. ನಂ. ಚಂದ್ರಶೇಖರ್ ಸೇರಿ ಹಲವು ಕನ್ನಡಪರ ಹೋರಾಟಗಾರರು ಮತ್ತು ಚಿಂತಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಹೋಬಳಿಗೊಂದು ಮಾದರಿ ಸರ್ಕಾರಿ ಶಾಲೆ ಮಾಡಿ, ಸುತ್ತಮುತ್ತಲ ಪ್ರದೇಶದಲ್ಲಿನ ಮಕ್ಕಳನ್ನು ಸರ್ಕಾರದಿಂದಲೇ ವಾಹನ ಸೌಲಭ್ಯ ನೀಡಿ ಕರೆತರುವ ಯೋಜನೆ ರೂಪಿಸಲಾಗುತ್ತಿದೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳು ಒಪ್ಪಿದರೆ ಆ ಶಾಲೆಯ ಮಕ್ಕಳನ್ನೂ ಮಾದರಿ ಶಾಲೆಗೆ ಕಳುಹಿಸಲು ಅವಕಾಶ ನೀಡಲು ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದರು. ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ ಅಗತ್ಯ ಶಿಕ್ಷಕರನ್ನು ನಿಯೋಜಿಸಿ, ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮಾದರಿ ಶಾಲೆಗಳೊಂದಿಗೆ ವಿಲೀನಗೊಳಿಸಿದರೆ ಮಕ್ಕಳಿಲ್ಲದ ಶಾಲೆಗಳು ತಾನಾಗಿಯೇ ಮುಚ್ಚಿಹೋಗುತ್ತವೆ. ಮಾದರಿ ಶಾಲೆ ಆರಂಭಿಸಲಿ. ಆದರೆ, ಸುತ್ತಮುತ್ತಲ ಶಾಲೆಗಳನ್ನು ಸರ್ಕಾರ ಹಾಗೇ ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಶಿಕ್ಷಣ ತಜ್ಞರು ಹೇಳುವುದೇನು?: ಸರ್ಕಾರ ಮಾಡಲು ಹೊರಟಿರುವ ಮಾದರಿ ಶಾಲೆಗಳಿಗೆ ದಿಕ್ಕು ದೆಸೆ ಯಾವುದು ಇಲ್ಲದಂತಾ ಗಿದೆ. 3, 4 ವರ್ಷದ ಮಕ್ಕಳನ್ನು ತೆಗೆದುಕೊಂಡು ಹೋಗಿ ಪಂಚಾ ಯಿತಿ ಕೇಂದ್ರಕ್ಕೆ ಹಾಕಿದರೆ ಮಕ್ಕಳು 8 ರಿಂದ 10 ಕಿ.ಮೀ ದೂರ ಶಾಲೆಗಳಿಗೆ ಹೋಗಬೇಕಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಪ್ರದೇಶಗಳಲ್ಲಿ 25 ಕಿ.ಮೀ ದೂರ ಇರುತ್ತೆ. ಈ ರೀತಿಯ ಪ್ರಸ್ತಾವನೆಗಳು ಸರ್ಕಾರದ ಮುಂದೆ ಇದ್ದಾಗ ಅದಕ್ಕೊಂದು ಸಮಿತಿ ಮಾಡಿ ಉತ್ತಮವಾದ ಪ್ರಸ್ತಾವನೆಯನ್ನು ಮಾಡಿ ಹಂತ ಹಂತವಾಗಿ ಅದನ್ನು ಮಾಡಬೇಕು. ನಮ್ಮಲ್ಲಿ 7 ಸಾವಿರ ಪಂಚಾಯಿತಿಗಳಿವೆ. ಇಷ್ಟೊಂದು ಪಂಚಾಯಿತಿಗಳಲ್ಲಿ ಶಾಲೆ ತೆರೆಯು ವುದು ಆರ್ಥಿಕವಾಗಿ ಕಷ್ಟವಾಗುತ್ತದೆ. ಐದು ವರ್ಷಕ್ಕೆ ಒಂದು ಯೋಜನೆ ಮಾಡಿ 1500 ಪಂಚಾಯಿತಿಯಂತೆ ಹಂತ ಹಂತವಾಗಿ ಸುಸಜ್ಜಿತವಾದ ಶಾಲೆಗಳನ್ನು ತೆರೆಯಬೇಕು. ಆಗ ಮಕ್ಕಳು 5ನೇ ತರಗತಿಗೆ ಪಂಚಾಯಿತಿ ವ್ಯಾಪ್ತಿಗೆ ಬಂದರೆ 12ನೇ ತರಗತಿ ವರೆಗೂ ಬೇರೆ ಕಡೆ ಹೋಗುವ ಪ್ರಮೇಯ ಇರುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿಜಯವಾಣಿಗೆ ತಿಳಿಸಿದ್ದಾರೆ.

    ಕನ್ನಡದ ಭವಿಷ್ಯಕ್ಕೆ ಮಾರಕವಾಗಿರುವ ಮತ್ತು ಕನ್ನಡ ಅಸ್ಮಿತೆಯನ್ನು ಮಸುಕಾಗಿಸುವ ಯೋಜನೆ ಇದಾಗಿದೆ. ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಅಗತ್ಯವಿದ್ದರೆ ಶಿಕ್ಷಣ ಸೆಸ್ ವಿಧಿಸಿ, ರಾಜ್ಯದಲ್ಲಿರುವ ಉದ್ಯಮಗಳ ನೆರವು ಪಡೆಯಲಿ.

    | ರಾ.ನಂ.ಚಂದ್ರಶೇಖರ ಕನ್ನಡ ಗೆಳೆಯರ ಬಳಗದ ಸಂಚಾಲಕ

    ಮಾದರಿ ಶಾಲೆ ಮಾಡುತ್ತೇವೆ ಎಂಬ ನೆಪವೊಡ್ಡಿ ಅಂತಿಮವಾಗಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಈ ವಿಲೀನವನ್ನು ತೀವ್ರವಾಗಿ ಖಂಡಿಸುತ್ತೇವೆ.

    | ಅಜಯ್ ಕಾಮತ್ ಎಐಡಿಎಸ್​ಒ ರಾಜ್ಯ ಕಾರ್ಯದರ್ಶಿ

    ಶಿಕ್ಷಣ ಸಚಿವರು ಹೇಳಿದ್ದೇನು?: ರಾಜ್ಯದಲ್ಲಿ 48 ಸಾವಿರ ಶಾಲೆಗಳಿದ್ದು, ಈ ಪೈಕಿ 13,800 ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಈ ಪೈಕಿ 1800 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. 1ರಿಂದ 10ನೇ ತರಗತಿವರೆಗೆ 10 ಮಕ್ಕಳಿದ್ದರೂ ಸರ್ಕಾರ ಇಬ್ಬರು ಶಿಕ್ಷಕರನ್ನು ನೀಡಿದೆ. ರಾಜ್ಯದಲ್ಲಿ 709 ಏಕ ಗ್ರಾಮದ ಗ್ರಾಮ ಪಂಚಾಯ್ತಿಗಳಿವೆ. ಅವುಗಳ ವ್ಯಾಪ್ತಿಯಲ್ಲಿ ಎಂಟತ್ತು ಶಾಲೆಗಳಿವೆ. ಎಲ್ಲವನ್ನೂ ಸೇರಿಸಿದರೂ 200 ಮಕ್ಕಳಾಗುವುದಿಲ್ಲ. ಹೋಬಳಿಗೊಂದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಸುತ್ತಮುತ್ತಲ ಪ್ರದೇಶದಿಂದ ಮಕ್ಕಳನ್ನು ಸರ್ಕಾರದಿಂದಲೇ ವಾಹನ ಸೌಲಭ್ಯವನ್ನೂ ನೀಡಿ ಕರೆತರಲು ಯೋಜನೆ ರೂಪಿಸಲಾಗುತ್ತಿದೆ.

    ಜೀವ ಉಳಿಸಲು ಹೋಗಿ ಪ್ರಾಣ ಕಳ್ಕೊಂಡ್ರು!: ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ಮೂವರು ಸ್ಥಳದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts