More

    ಬಸವೇಶ್ವರರ ಪ್ರತಿಮೆಗೆ ಒಪ್ಪಿಗೆ; ತಿಪಟೂರಿನ ನೀಲಕಂಠಸ್ವಾಮಿ ವೃತ್ತದಲ್ಲಿ ಸ್ಥಾಪನೆಗೆ ನಗರಸಭೆ ಸದಸ್ಯರ ಸಮ್ಮತಿ

    ತಿಪಟೂರು:  ನಗರಸಭೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ವಿಶೇಷ ಸಭೆಯು ನಗರದಲ್ಲಿ ಪುತ್ಥಳಿಗಳ ಸ್ಥಾಪನೆಯ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

    ನಗರದ ನೀಲಕಂಠಸ್ವಾಮಿ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದ ಬೆನ್ನಲ್ಲೇ, ಇತರ ಸಮಾಜದ ಮುಖಂಡರು ಸರ್ಕಾರದ ಒಪ್ಪಿಗೆ/ಅನುದಾನ ಬರುವುದಕ್ಕೂ ಮುಂಚೆಯೇ ತಮ್ಮ ಸಮುದಾಯದ ಮಹನೀ ಯರ ಪುತ್ಥಳಿ ಗಳನ್ನು ಸ್ವಂತ ಖರ್ಚಿನಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ನಗರಸಭೆ ಅಡ್ಡಿ ಪಡಿಸ ಬಾರದು ಎಂಬ ಕೆಲ ಸದಸ್ಯರ ಮನವಿ ಘರ್ಷಣೆಗೆ ಕಾರಣ ಅಗಬಹುದು ಎಂದು ವಿ.ಯೋ ಗೀಶ್ ಎಚ್ಚರಿಸಿದರು.

    ಶಾಸಕ ಬಿ.ಸಿ.ನಾಗೇಶ್ ಮುತುವರ್ಜಿವಹಿಸಿ ಎಸ್‌ಎಫ್‌ಸಿ ಅನುದಾನದಲ್ಲಿ ನಗರದ ನೀಲಕಂಠಸ್ವಾಮಿ ವೃತ್ತ ಮತ್ತು ಸಿಂಗ್ರಿ ನಂಜಪ್ಪ ವೃತ್ತಗಳ ನವೀಕರಣಕ್ಕೆ 46 ಲಕ್ಷ ರೂಪಾಯಿ ಮಂಜೂರಾತಿ ಪಡೆದ ನಂತರದ ಬೆಳವಣಿಗೆಗಳಲ್ಲಿ ನೀಲಕಂಠಸ್ವಾಮಿ ವೃತ್ತದಲ್ಲಿ ನಡೆದಿರುವ ಕಾಮಗಾರಿ ಅವೈಜ್ಞಾನಿಕ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯರು, ಇಲ್ಲಿದ್ದ ಬ್ರಿಟೀಷರ ಕಾಲದ ಅಪರೂಪದ ಎರಕದ ಕಂಬಕ್ಕೆ ಹಾನಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದರು.

    ನಂತರ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತೆ ಎಂಬ ಗಾಳಿ ಸುದ್ದಿ ಹಬ್ಬಿದ ನಂತರ ವೀರಶೈವ ಸಮಾಜದ ಮುಖಂಡರು ಒಂದಾಗಿ ಇಲ್ಲಿ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪಿಸಲೇಬೇಕು ಎಂದು ಆಗ್ರಹಿಸಿ ಸಚಿವ ಬಿ.ಸಿ.ನಾಗೇಶ್ ಸೇರಿ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಎಲ್ಲ ಗೊಂದಲಗಳಿಗೆ ಸಭೆಯಲ್ಲಿ ತೆರೆ ಎಳೆದ ಅಧ್ಯಕ್ಷ ಪಿ.ಜೆ.ರಾಮ ಮೋಹನ್, ನೀಲಕಂಠಸ್ವಾಮಿ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಸರ್ಕಾರ ಮತ್ತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಭಯ ನೀಡಿದರು.

    ಇದಾದ ನಂತರ ಕೆಲ ಸದಸ್ಯರು ನಗರದ ಐ.ಬಿ.ವೃತ್ತದಲ್ಲಿ ಡಾ.ಅಂಬೇಡ್ಕರ್‌ರ ಪುತ್ಥಳಿ, ಹಾಸನ ವೃತ್ತದಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ, ಅರಳೀಕಟ್ಟೆ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ, ಹಳೇಪಾಳ್ಯದಲ್ಲಿ ದೇವರ ದಾಸಿಮಯ್ಯರ ಪುತ್ಥಳಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಮತ್ತು ಅಮಾನಿಕೆರೆ ಪಕ್ಕದ ಸರ್ವೀಸ್ ರಸ್ತೆಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂದು ಒತ್ತಾಯಿಸಿದರೆ, ಹೂರ್ ಭಾನು ಗಾಂಧಿನಗರದಲ್ಲಿ ಡಾ.ಅಬ್ದುಲ್ ಕಲಾಂರ ಪುತ್ಥಳಿ ಸ್ಥಾಪಿಸಬೇಕೆಂಬ ಬೇಡಿಕೆಯಿಟ್ಟರು.

    ಮಧ್ಯಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಟಿ.ಎನ್.ಪ್ರಕಾಶ್, ಪುತ್ಥಳಿ ಸ್ಥಾಪನೆಗೆ ಸರ್ಕಾರದಿಂದ ಅನುಮತಿ ಮತ್ತು ಹಣ ಬಿಡುಗಡೆಯಾಗುವವರೆಗೂ ಕಾಯದೇ, ಆಯಾ ಸಮಾಜದ ಮುಖಂಡರು ಸ್ವಂತ ಖರ್ಚಿನಲ್ಲಿ ಮಹನೀಯರ ಪುತ್ಥಳಿ ಪ್ರತಿಷ್ಠಾಪಿಸಲು ನಗರಸಭೆ ಅಡ್ಡಿಪಡಿಸಬಾರದು ಎಂದರು.

    ಇದಕ್ಕೆ ಉಪಾಧ್ಯಕ್ಷ ಸೊಪ್ಪು ಗಣೇಶ್ ಸೇರಿ ಉಳಿದೆಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಶಿಕಿರಣ್. ಆಯುಕ್ತ ಉಮಾಕಾಂತ್ ಇದ್ದರು.

    ಅಮಾನಿಕೆರೆ ಪಕ್ಕದ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬೈ-ಪಾಸ್ ರಸ್ತೆಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂದು ಮನವಿ ಸಲ್ಲಿಸಿ ಅದೆಷ್ಟೊ ಕಾಲವಾಗಿದೆ. ಇದನ್ನು ಪರಿಗಣಿಸದಿದ್ದರೆ ಜಾತಿ ಬೇಧ ಮಾಡಿ, ಸಮಾಜ ಒಡೆಯುವ ಕೆಲಸ ಮಾಡಿದಂತಾಗುತ್ತೆ.
    ಕೋಟೆ ಪ್ರಭು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts