More

    ಜಿಲ್ಲಾ ಕೇಂದ್ರಗಳಲ್ಲಿ ಕೈ ಹೋರಾಟ; ಆತ್ಮಹತ್ಯೆ ಪ್ರಕರಣ ಮರೆಮಾಚಲು ಕೋಮುಗಲಭೆ ಹುನ್ನಾರ ಶಂಕೆ

    ಬೆಂಗಳೂರು: ಬೆಲೆ ಏರಿಕೆ, 40 ಪರ್ಸೆಂಟ್ ಕಮೀಷನ್ ವಿಚಾರ ಹಾಗೂ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಆರಂಭಿಸಿದೆ. ಶನಿವಾರ ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿಕ್ಕಮಗಳೂರಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಉಡುಪಿಯಲ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೀದರ್​ನಲ್ಲಿ ಪ್ರತಿಭಟನಾ ಸಭೆಗಳಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಹರಿಹಾಯ್ದರು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣವೇ ಬಂಧಿಸಬೇಕೆಂಬುದು ಎಲ್ಲ ನಾಯಕರ ಆಗ್ರಹವಾಗಿತ್ತು. ಭಾನುವಾರ ಸಹ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾ ಸಭೆ ಮುಂದುವರಿಯಲಿದೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಗಮನ ಬೇರೆಡೆ ಸೆಳೆಯಲು ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಹತ್ಯೆ ಮೂಲಕ ಕೋಮು ಗಲಭೆಗೆ ಸಂಚು ರೂಪಿಸಲಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು. ಶಿವಮೊಗ್ಗದಲ್ಲಿ ಒಂದು ಟ್ರಸ್ಟ್ ಇದ್ದು, ಅದರಲ್ಲಿ ದೊಡ್ಡವರು ಸದಸ್ಯರಾಗಿದ್ದಾರೆ. ಆ ಟ್ರಸ್ಟ್ ಸದಸ್ಯರು ಹಾಗೂ ಬೆರೆಯವರೆಲ್ಲ ಸೇರಿ ಕೊಲೆ ಸಂಚಿಗೆ ತಯಾರಿ ಮಾಡಿದ್ದಾರೆ. ಶಿವಮೊಗ್ಗ ಪೊಲೀಸರು ಬುದ್ಧಿವಂತಿಕೆ ಪ್ರದರ್ಶಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಈ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಕೋಮು ಗಲಭೆ ನಡೆಯುವ ಸಂಭಾವವಿತ್ತು ಎಂದರು.

    ತನಿಖೆ ನಡೆಯುವ ಮುನ್ನವೇ ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ, ಅವರು 3 ತಿಂಗಳಲ್ಲಿ ನಿದೋಷಿಯಾಗಿ ಬರುತ್ತಾರೆ, ಮತ್ತೆ ಮಂತ್ರಿ ಆಗುತ್ತಾರೆ ಎಂದು ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಹೇಗೆ ಹೇಳಲು ಸಾಧ್ಯ? ಅವರು ನ್ಯಾಯಾಧೀಶರೆ? ಇದರಿಂದ ಸರ್ಕಾರ ತನಿಖೆ ಮೇಲೆ ಪರಿಣಾಮ ಬೀರಿದಂತಾಗುವುದಿಲ್ಲವೇ? ಅವರನ್ನು ಪ್ರಜ್ಞಾವಂತ ಸಿಎಂ ಎಂದುಕೊಂಡಿದ್ದೆ. ಆದರೆ ಇವರು ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಕೊಟ್ಟ ಹೇಳಿಕೆಯೇ ರಾಜ್ಯದಲ್ಲಿ ಈ ಎಲ್ಲ ದುರಾಡಳಿತಕ್ಕೆ ಕಾರಣವಾಗಿದೆ ಎಂದು ಡಿಕೆಶಿ ಟೀಕಿಸಿದರು.

    ಬಿಜೆಪಿ ಕಿತ್ತೊಗೆಯದಿದ್ದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ

    ಚಿಕ್ಕಮಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯದಿದ್ದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು. ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ಪೂರಕವಾಗಿ ಜನತೆಗೆ ಸಂದೇಶ ಮುಟ್ಟಿಸಲು ರಾಜ್ಯಾದ್ಯಂತ 9 ತಂಡಗಳನ್ನು ರಚಿಸಿದ್ದು, ಏ.20ರವರೆಗೆ ನಿರಂತರವಾಗಿ ಹೋರಾಟ ಮುಂದುವರಿಯಲಿದೆ ಎಂದರು.

    ಕೆ.ಜೆ.ಜಾರ್ಜ್​ಗೆ ಕ್ಲೀನ್​ಚಿಟ್: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್​ನೋಟ್ ಇದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ನಂತರ ಸಿಒಡಿ ಕ್ಲೀನ್ ಚಿಟ್ ಕೊಟ್ಟಿದೆ. ಸಿಬಿಐ ಕ್ಲೀನ್ ಚಿಟ್ ಕೊಟ್ಟಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅವರೇ ಕೊಟ್ಟಿದ್ದಾರೆ. ಕ್ಲೀನ್ ಚಿಟ್ ಕೊಟ್ಟು ಬಿ ರಿಪೋರ್ಟ್ ಹಾಕಿದ್ದಾರೆ. ಎರಡೂ ಪ್ರಕರಣ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಈಶ್ವರಪ್ಪ 40 ಪರ್ಸೆಂಟ್ ಡಿಮಾಂಡ್ ಮಾಡದಿದ್ದರೆ ರಾಜೀನಾಮೆ ಯಾಕೆ ನೀಡುತ್ತಿದ್ದರು? ಹೈಕಮಾಂಡ್ ಯಾಕೆ ರಾಜೀನಾಮೆ ಪಡೆಯುತ್ತಿತ್ತು ಎಂದು ಪ್ರಶ್ನಿಸಿದರು.

    ಬಿಜೆಪಿ ಕಾರ್ಯಕಾರಿಣಿಗೆ ಕಾಂಗ್ರೆಸ್ ಪ್ರತಿಭಟನೆ ಬಿಸಿ

    ಹೊಸಪೇಟೆಯಲ್ಲಿ ಶನಿವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಮೊದಲ ದಿನವೇ ಪ್ರತಿಭಟನೆ ಬಿಸಿ ತಟ್ಟಿತು. ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕನಕದಾಸ ವೃತ್ತದಲ್ಲಿ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ ನಡೆಯಿತು. ಈಶ್ವರಪ್ಪ ಬಂಧನ ಮಾಡುವಂತೆ ಕಾರ್ಯಕರ್ತರು ಕೈಗೆ ಬೇಡಿ ಹಾಕಿಕೊಂಡು ಅಣಕು ಪ್ರದರ್ಶನ ಮಾಡಿದರು. 40 ಪರ್ಸೆಂಟೇಜ್ ಕಮೀಷನ್ ಸರ್ಕಾರವೆಂದು ಘೊಷಣೆ ಕೂಗಿದರು. ಪ್ರತಿಭಟನೆಯಲ್ಲಿ ಭಾಗಿಯಾದ ರಾಜ್ಯಸಭಾ ಸದಸ್ಯ ಡಾ.ಸಯ್ಯದ್

    ನಾಸಿರ್ ಹುಸೇನ್, ಎಂಎಲ್​ಸಿ ಅಲ್ಲಂ ವೀರಭದ್ರಪ್ಪ, ಶಾಸಕರಾದ ಬಿ.ನಾಗೇಂದ್ರ, ಎಚ್.ಕೆ.ಪಾಟೀಲ್, ಭೀಮಾನಾಯ್ಕ, ಈ.ತುಕಾರಾಮ್ ಮಾಜಿ ಸಚಿವ ಸಂತೋಷ್ ಲಾಡ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತು ಇತರರನ್ನು ಪೊಲೀಸರು ಬಂಧಿಸಿದರು.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ; ವಾಹನ ಪಲ್ಟಿ ಮಾಡಿ ಆಕ್ರೋಶ, ಪರಿಸ್ಥಿತಿ ಉದ್ವಿಗ್ನ..

    ಅದೊಂದು ಫೋನ್​ ಕರೆಗೆ ಸಿಎಂ ವಾಪಸ್​ ಬಂದರು; ಕರೆ ಮಾಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts