More

    ಹಿರಿಯರ ಬಂಡಾಯಕ್ಕಿಲ್ವಾ ಕಿಮ್ಮತ್ತು?: ಕ್ಷೀಣಿಸುತ್ತಿರುವ ಕಾಂಗ್ರೆಸ್ ಅತೃಪ್ತರ ಸಂಖ್ಯೆ

    ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಬಂಡೆದ್ದಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡರಿಗೆ ಪಕ್ಷದೊಳಗೆ ಕಿಮ್ಮತ್ತು ಸಿಗುತ್ತಿಲ್ಲ ಎನ್ನುವಂತಹ ಬೆಳವಣಿಗೆ ನಡೆಯುತ್ತಿದೆ. ಅದರಂತೆ ಹಿರಿಯರ ಪಾಳಯದಲ್ಲಿದ್ದವರ ಸಂಖ್ಯೆಯೂ ಕಡಿಮೆಯಾಗುತ್ತಾ ಸಾಗಿದೆ.
    ಮಂಡ್ಯ ಕ್ಷೇತ್ರದಿಂದ ರವಿಕುಮಾರ್ ಗಣಿಗ ಹೆಸರು ಘೋಷಣೆ ಬಳಿಕ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು ನೇತೃತ್ವದ ತಂಡ ಬಂಡಾಯದ ಕಳಹೆ ಊದಿತು. ಜತೆಗೆ ಅಭ್ಯರ್ಥಿ ಬದಲಿಸಿ ಹಿರಿಯರಲ್ಲೇ ಒಬ್ಬರಿಗೆ ಅವಕಾಶ ಕೊಡಬೇಕೆಂದು ಆಗ್ರಹ ಮಾಡಿದರ ಹೊರತಾಗಿಯೂ ಹೈಕಮಾಂಡ್ ಇವರ ಮಾತಿಗೆ ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ. ಪರಿಣಾಮ ಬೆಂಬಲಿಗರ ಸಭೆ ಆಯೋಜಿಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ದಿನಾಂಕ ನಿಗದಿ ಮಾಡಿ ಮುಂದೂಡಲಾಗುತ್ತಿದೆ. ಈ ನಡುವೆ ರವಿ ಅವರ ಪರ ನಗರಸಭೆ ‘ಕೈ’ ಸದಸ್ಯರು ಬ್ಯಾಟಿಂಗ್ ಮಾಡುತ್ತಿದ್ದರೆ, ಹಿರಿಯರ ಪರ ಇನ್ನು ಯಾರೂ ದನಿ ಎತ್ತಿಲ್ಲ ಎನ್ನುವುದು ಗಮನಾರ್ಹ.
    ಏಳಕ್ಕಿಳಿದ ಅತೃಪ್ತರ ಬಲ: ಮಂಡ್ಯ ಕ್ಷೇತ್ರದಿಂದ ಬಿ ಫಾರ್ಮ್ ಬಯಸಿ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಅಮರಾವತಿ ಚಂದ್ರಶೇಖರ್, ಹಾಲಹಳ್ಳಿ ರಾಮಲಿಂಗಯ್ಯ, ಹಾಲಹಳ್ಳಿ ಅಶೋಕ್, ಅಂಜನಾ ಶ್ರೀಕಾಂತ್, ಸಿದ್ಧಾರೂಢ ಸತೀಶ್, ಚಿದಂಬರ್, ಡಾ.ಕೃಷ್ಣ, ಬಿ.ಸಿ.ಶಿವಾನಂದ, ಹನಕೆರೆ ಶಿವರಾಮು, ಕೆ.ಕೆ.ರಾಧಾಕೃಷ್ಣ ಕೀಲಾರ, ಅಸಾದುಲ್ಲಾಖಾನ್ ಮತ್ತು ಶಿವಲಿಂಗೇಗೌಡ ಅರ್ಜಿ ಹಾಕಿದ್ದರು.
    ರವಿಕುಮಾರ್‌ಗೆ ಅವಕಾಶ ಸಿಗಲಿದೆ ಎನ್ನುವ ಮಾತು ಜೋರಾದ ಹೊತ್ತಿನಲ್ಲೇ ಹಿರಿಯರು ತಮ್ಮದೇ ತಂಡ ಕಟ್ಟಿಕೊಂಡು ದೆಹಲಿ, ಬೆಂಗಳೂರಿಗೆ ತೆರಳಿ ನಾಯಕರಿಗೆ ಅಹವಾಲು ಕೊಟ್ಟು ಬಂದರು. ಆದರೂ ಅದ್ಯಾಕೋ ಯಾರನ್ನು ಪರಿಗಣಿಸಲಿಲ್ಲ. ಜತೆಗೆ ಪಕ್ಷದಿಂದ ಕಲೆಹಾಕಿರುವ ಸಮೀಕ್ಷೆಯ ಮಾಹಿತಿಯಲ್ಲಿಯೂ ರವಿ ಅವರೇ ಮುಂಚೂಣಿಯಲ್ಲಿರುವುದು ವ್ಯಕ್ತವಾಗಿದೆ. ಅದರಂತೆ ನಿರೀಕ್ಷೆಗೆ ತಕ್ಕಂತೆ ಹೆಸರು ಕೂಡ ಘೋಷಣೆಯಾಯಿತು. ಪರಿಣಾಮ ಹಿರಿಯರ ಕಣ್ಣಗಳನ್ನು ಕೆಂಪಾಗಿಸಿದ್ದು, ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಮಾತ್ರವಲ್ಲದೆ ನಾಯಕರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ಕೊಡುವ ಮೂಲಕ ಇರಿಸು ಮುರಿಸು ಉಂಟು ಮಾಡುತ್ತಿದ್ದಾರೆ.
    ಈ ನಡುವೆ ಮೊದಲ ಬಂಡಾಯದ ಸಭೆ ನಡೆಸಿ ಏ.10ರಂದು ಅಂತಿಮ ನಿರ್ಧಾರ ಘೋಷಣೆ ಮಾಡುವುದಾಗಿ ಹೇಳಿದ್ದರು. ಆದರೆ ಅಷ್ಟರಲ್ಲಾಗಲೇ ಅತೃಪ್ತರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿತ್ತು. ತಮ್ಮೊಂದಿಗೆ 10 ಜನರಿದ್ದಾರೆಂದು ಹೇಳಿಕೊಂಡಿದ್ದರ ನಡುವೆಯೇ ಏಳಕ್ಕೆ ಕುಸಿಯಿತು. ಈ ಹಿನ್ನೆಲೆಯಲ್ಲಿ ಏ.13ರಂದು ಮತ್ತೊಂದು ಸಭೆ ಮಾಡುವುದಾಗಿ ಹೇಳಿದ್ದಾರೆ. ಇನ್ನು ಹಿರಿಯರ ಪಾಳಯದಲ್ಲಿ ಎಂ.ಎಸ್.ಆತ್ಮಾನಂದ, ಎಚ್.ಬಿ.ರಾಮು, ಅಮರಾವತಿ ಚಂದ್ರಶೇಖರ್, ರಾಮಲಿಂಗಯ್ಯ, ಹನಕೆರೆ ಶಿವರಾಮು, ಶಿವಲಿಂಗೇಗೌಡ ಮತ್ತು ಬಿ.ಸಿ.ಶಿವಾನಂದ ಇದ್ದಾರೆ.
    ಮೊದಲ ಸಭೆಯಲ್ಲಿ ಹಾಜರಿದ್ದ ಸಿದ್ಧಾರೂಡ ಸತೀಶ್‌ಗೌಡ ತಮ್ಮ ನಿಲುವು ಬದಲಿಸಿ ಪಕ್ಷದ ನಿರ್ಧಾರದತ್ತ ವಾಲಿದ್ದಾರೆ. ಈ ಮೊದಲು ಚಿದಂಬರ್ ಹೆಸರು ಕೂಡ ಬಂಡಾಯದ ತಂಡದಲ್ಲಿ ಕೇಳಿಬಂದಿತ್ತಾದರೂ ತಕ್ಷಣವೇ ಸ್ಪಷ್ಟನೆ ಕೊಟ್ಟು ಸುಮ್ಮನಾದರು. ಈ ಎಲ್ಲ ಬೆಳವಣಿಗೆ ಹಿರಿಯರಿಗೆ ಇರಿಸು ಮುರಿಸಿನಂತಾಗಿದೆ. ಕೆಲ ದಿನದ ಹಿಂದೆ ಹುಲಿವಾನದಲ್ಲಿ ಸಭೆ ಮಾಡಿಯೂ ಹಿರಿಯರಿಗೆ ಯಶಸ್ಸು ಸಿಗಲಿಲ್ಲ. ಮತ್ತೊಮ್ಮೆ ಆಯೋಜಿಸಿರುವ ಬಂಡಾಯದ ಸಭೆಯನ್ನು ಯಶಸ್ವಿಗೊಳಿಸಬೇಕಾದ ಹಾಗೂ ವರಿಷ್ಠರಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
    ಕೆಕೆಆರ್ ಎಂಪಿ ಚುನಾವಣೆಯ ಭರವಸೆ?: ರೇಸ್‌ನಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಕೆ.ಕೆ.ರಾಧಾಕೃಷ್ಣ ಅವಕಾಶ ಕೈ ತಪ್ಪಿದ ಬಳಿಕ ಅತೃಪ್ತಿ ಹೊರಹಾಕಿದ್ದರು. ಜತೆಗೆ ಅಭ್ಯರ್ಥಿ ಘೋಷಣೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿ ಬದಲಾವಣೆಯಿಂದ ಇಲ್ಲದ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಗೆ ಅವಕಾಶ ನೀಡುವ ಭರವಸೆ ಕೊಡಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕೆಕೆಆರ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಅಥವಾ ಬೇರೆ ಪಕ್ಷದಿಂದ ಕಣಕ್ಕಿಳಿಯುತ್ತಾರೋ, ಇಲ್ಲವೇ ಲೋಕಸಭಾ ಚುನಾವಣೆವರೆಗೂ ಕಾಯುತ್ತಾರೋ ಎನ್ನುವುದು ಶೀಘ್ರದಲ್ಲೇ ಹೊರಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts