More

    ಸ್ವಾರ್ಥ ರಾಜಕೀಯಕ್ಕಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ

    ಚಿಕ್ಕಬಳ್ಳಾಪುರ: ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸದ ಪಾಪ ಕಳೆದುಕೊಳ್ಳುವ ಪಾದಯಾತ್ರೆ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಡಿದರು.

    ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕೆಂಬುದು ರಾಜ್ಯದ ಎಲ್ಲರ ಬಯಕೆ. ಆದರೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದ ಉಂಟಾಗಿ ನ್ಯಾಯಾಲಯದ ಮೆಟ್ಟಿಲೇರಿದೆ. ಇದರ ವಿಚಾರಣೆ, ಅನುಮೋದನೆ ಸೇರಿ ನಾನಾ ಪ್ರಕ್ರಿಯೆಗಳು ಬಾಕಿ ಉಳಿದಿವೆ. ಇದರ ಅರಿವಿದ್ದರೂ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಯೋಜನೆಯ ವಿಚಾರವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಕೈಗೊಂಡಿದೆ. ಕರೊನಾ ಹೊಸ ಪ್ರಕರಣಗಳ ಏರಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿ ಮಾರ್ಗಸೂಚಿ ನಿಯಮ ಉಲ್ಲಂಘಿಸಿ ಬೇಜವಾಬ್ದಾರಿಯನ್ನು ಮೆರೆಯುತ್ತಿದೆ ಎಂದು ಟೀಕಿಸಿದರು.

    ಕಾಂಗ್ರೆಸ್‌ಗೆ ಜನಪರ ಬದ್ಧತೆ ಇಲ್ಲ. ಸಂಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿದ ಸಂದರ್ಭದಲ್ಲಿ ನೀರಾವರಿ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ಕಾಳಜಿ ತೋರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಬರುವ ಚುನಾವಣೆಯ ದೃಷ್ಟಿಯಲ್ಲಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಾದಯಾತ್ರೆಯ ನಾಟಕದ ಮೂಲಕ ಜನರನ್ನು ಆತಂಕದ ಪರಿಸ್ಥಿತಿಗೆ ದೂಡುತ್ತಿದ್ದಾರೆ. ಈಗಾಗಲೇ ಜನ ವಿರೋಧಿ ಧೋರಣೆಗಳಿಂದ ಪಕ್ಷವು ಪ್ರಾಬಲ್ಯವನ್ನು ಕಳೆದುಕೊಂಡಿದೆ ಎಂದರು.

    ರೈತ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ವ್ಯಾಪಕ ಒಲವು ವ್ಯಕ್ತವಾಗಿದೆ. ಆದರೆ, ಇದನ್ನು ಸಹಿಸದೇ ವಿಪಕ್ಷಗಳು ಗೊಂದಲ ಮೂಡಿಸುತ್ತಿವೆ. ಇದರ ಸತ್ಯಾಸತ್ಯತೆಯನ್ನು ಮನೆ ಮನೆಗೂ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

    ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ, ರೈತ ಮೋರ್ಚಾ ಉಪಾಧ್ಯಕ್ಷ ಸಿ.ವಿ.ಲೋಕೇಶಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಶಿವಪ್ರಸಾದ, ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ರಾಜಶೇಖರ್ ಮತ್ತಿತರರು ಇದ್ದರು.

     

    ಕರೊನಾ ಆತಂಕದ ವಾತಾವರಣದಲ್ಲೂ ಜನಸಂದಣಿಯನ್ನು ಸೇರಿಸಿ ಪಾದಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನ ಬೇಜವಾಬ್ದಾರಿ ಅಧ್ಯಕ್ಷ. ಜನರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಮೊದಲು ಕರೊನಾ ಪರೀಕ್ಷೆಗೆ ಒಪ್ಪಿಕೊಳ್ಳಬೇಕು. ಆದರೆ, ನಿರಾಕರಿಸುವ ಮೂಲಕ ತಪ್ಪು ಸಂದೇಶವನ್ನು ಸಾರುತ್ತಿದ್ದಾರೆ. ಈಗಾಗಲೇ ಸರ್ಕಾರವು ಕಾನೂನು ಕ್ರಮ ಕೈಗೊಂಡಿದೆ.
    ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

    ಪದಾಧಿಕಾರಿಗಳಿಗೆ ಮಾರ್ಗದರ್ಶನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರದ ಪರ ಯೋಜನೆಗಳ ಪ್ರಚಾರ, ತಳಮಟ್ಟದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ರಾಜ್ಯ ವಿವಿಧ ಭಾಗಗಳಿಂದ ರೈತ ಮೋರ್ಚಾದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸೇರಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು. ಆಯಾ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರ ವಿಚಾರದ ಬಗ್ಗೆಯೂ ಚರ್ಚಿಸಲಾಯಿತು.

     

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಕರ್ನಾಟಕದ ಬದಲಿಗೆ ಮೈತ್ರಿ ಸರ್ಕಾರದಲ್ಲಿ ಪಾಲು ಪಡೆದಿರುವ ತಮಿಳುನಾಡಿನಲ್ಲಿ ಮಾಡಬೇಕಾಗಿತ್ತು. ರಾಜ್ಯದ ಜನರಿಗೂ ನ್ಯಾಯ ಸಿಗುತ್ತಿತ್ತು. ಆದರೆ, ಇಲ್ಲಿ ಅಧಿಕಾರಕ್ಕಾಗಿ ಗಿಮಿಕ್ ಧೋರಣೆ ಪ್ರದರ್ಶಿಸಲಾಗುತ್ತಿದೆ.
    ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts