More

    ಅಭಿವೃದ್ಧಿ ಮರೆತ ಕಾಂಗ್ರೆಸ್ ಶಾಸಕರು

    ಕಲಬುರಗಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರಿಗೆ ನಿರಂತರ ಮೋಸ ಮಾಡುತ್ತಿದೆ. ಸಮರ್ಪಕ ಸೌಲಭ್ಯ ಒದಗಿಸದೆ ಶಾಸಕರು ಅಭಿವೃದ್ಧಿ ಮರೆತ್ತಿರುವ ಬಗ್ಗೆ ಪ್ರಶ್ನಿಸಿ ಜಾಗೃತಗೊಳಿಸಲು ಮತದಾರರಿಗೆ ಉತ್ತರಿಸಿ ಅಭಿಯಾನ ನಡೆಸುತ್ತಿದ್ದು, ಶಾಸಕರು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಆಗ್ರಹಿಸಿದರು.

    ಬಿಜೆಪಿ ಹಮ್ಮಿಕೊಂಡ ಮತದಾರರಿಗೆ ಉತ್ತರಿಸಿ ಅಭಿಯಾನ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರ ಮನೆಗೆ ತೆರಳಿ ಮನವಿಪತ್ರ ಸಲ್ಲಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ನಗರದಲ್ಲಿರುವ ಕಾಂಗ್ರೆಸ್‌ನ ಉತ್ತರ, ದಕ್ಷಿಣ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನೇ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

    ಎಂಟು ತಿಂಗಳಿಂದ ಪ್ರಗತಿ ಮಾಡದೆ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದು, ಎಂಟು ತಿಂಗಳಲ್ಲಿ ಏನು ಮಾಡಿದ್ದೀರಿ ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಅಭಿವೃದ್ಧಿ ಕುರಿತು ಉತ್ತರ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಮನವಿ ಮಾಡಿದರು.

    ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪಾಲಿಕೆ ಮಹಾಪೌರ ವಿಶಾಲ ದರ್ಗಿ, ಉಪ ಮಹಾಪೌರ ಶಿವಾನಂದ ಪಿಸ್ತಿ, ಪ್ರಮುಖರಾದ ಉಮೇಶ ಪಾಟೀಲ್, ಕೃಷ್ಣಾ ನಾಯಕ, ಮಹಾದೇವ ಬೆಳಮಗಿ, ಮಲ್ಲು ಉದನೂರ, ಶಿವಯೋಗಿ ನಾಗನಹಳ್ಳಿ, ಚನ್ನು ಲಿಂಗನವಾಡಿ, ರಾಜು ದೇವದುರ್ಗ ಇತರರಿದ್ದರು.

    ಕನೀಜ್ ಫಾತಿಮಾ, ಅಲ್ಲಮಪ್ರಭುಗೆ ಪ್ರಶ್ನೆ: ಮತದಾರರಿಗೆ ಉತ್ತರಿಸಿ ಅಭಿಯಾನ ಹಿನ್ನೆಲೆಯಲ್ಲಿ ಶಾಸಕಿ ಕನೀಜ್ ಫಾತಿಮಾಗೆ ಉತ್ತರ ಕ್ಷೇತ್ರದ ಮೂಲಸೌಕರ್ಯ ಕಾಮಗಾರಿ ಬಗ್ಗೆ ತಿಳಿಸಿ? ಕ್ಷೇತ್ರಕ್ಕೆ ಎಷ್ಟು ಅನುದಾನ ಮೀಸಲಿಟ್ಟಿದ್ದೀರಿ? ಎಂಟು ತಿಂಗಳಾದರೂ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿಲ್ಲ ಏಕೆ? ದುಬೈ ಕಾಲನಿಯಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪೂರ್ಣವಾದರೂ ಉದ್ಘಾಟಿಸಿಲ್ಲ ಏಕೆ? ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿದ ಮನವಿ ಪತ್ರ ಸಲ್ಲಿಸಲಾಯಿತು. ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್‌ಗೆ ಎಂಟು ತಿಂಗಳಲ್ಲಿ ಕ್ಷೇತ್ರದಲ್ಲಿ ಮೂಲಸೌಕರ್ಯ ಕಾಮಗಾರಿ ಏನು ಮಾಡಿದ್ದೀರಿ? ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಚುರುಕುಗೊಳಿಸಿ ಎಂದು ಆಗ್ರಹಿಸಿದ ಪತ್ರ ಸಲ್ಲಿಸಲಾಯಿತು.

    ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಎಂಟು ತಿಂಗಳಿಂದ ಮೂಲಸೌಲಭ್ಯವೇ ಮರೆಯಲಾಗಿದೆ. ಪ್ರಸ್ತುತ ಉಸ್ತುವಾರಿ ಸಚಿವರು ಹಿಂದೆ ಪ್ರಶ್ನೆಗಳನ್ನು ಮಾಡುತ್ತಿದ್ದರೂ ಈಗ ಯಾವ ಯೋಜನೆ ತಂದಿದ್ದಾರೆ ಎಂಬುದಕ್ಕೆ ಉತ್ತರಿಸಲಿ. ದಕ್ಷಿಣದಲ್ಲಿ ಅಲ್ಲಮಪ್ರಭು ಪಾಟೀಲ್ ಶಾಸಕರೋ, ಪುತ್ರರು ಶಾಸಕರೋ ತಿಳಿಯುತ್ತಿಲ್ಲ. ತಮ್ಮ ಸಂಬಂಧಿ ಅಧಿಕಾರಿಗಳನ್ನು ತಂದು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಬಸ್ ನಿಲ್ದಾಣ ಕಾಮಗಾರಿ ಅಪೂರ್ಣ ಮಾಡಿ ಉದ್ಘಾಟಿಸಿದ್ದು. ಅಭಿವೃದ್ಧಿ ಮಾಡಿದ್ದೇನು ಎಂಬುದನ್ನು ಜನರಿಗೆ ಉತ್ತರಿಸಲಿ.
    | ದತ್ತಾತ್ರೇಯ ಪಾಟೀಲ್ ರೇವೂರ ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts