More

    ಸಚಿವ ಕೆಸಿಎನ್ ಸೇರ್ಪಡೆಗೆ ಭಾರೀ ವಿರೋಧ: ಜಿಲ್ಲಾಧ್ಯಕ್ಷರ ಕಾರಿಗೆ ಕಾರ್ಯಕರ್ತರ ಮುತ್ತಿಗೆ

    ಕೆ.ಆರ್.ಪೇಟೆ: ಸ್ಥಳೀಯರ ಆಕ್ಷೇಪದ ನಡುವೆ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆನ್ನುವ ವಿಚಾರ ಇದೀಗ ವಿವಾದಕ್ಕೆ ತಿರುಗುವುದರ ಜತೆಗೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಮಾ.13ರಂದು ನಡೆಯಲಿರುವ ಪ್ರಜಾಧ್ವನಿ ಸಮಾವೇಶದ ಬಗ್ಗೆ ಚರ್ಚಿಸಲು ಪಟ್ಟಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜೋರು ಗದ್ದಲವೇ ನಡೆದುಹೋಯಿತು.
    ಪಟ್ಟಣದ ಕೆಬಿಸಿ ಕಾಂಪ್ಲೆಕ್ಸ್‌ನಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಸಿಎನ್ ಪಕ್ಷ ಸೇರ್ಪಡೆ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿತು. ಪ್ರಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ರಾಜಕೀಯ ಬೆಳವಣಿಗೆಗಳ ಬಗ್ಗೆ ಜಿಲ್ಲಾಧ್ಯಕ್ಷರು ಪ್ರತಿಕ್ರಿಯಿಸುತ್ತಾರೆ. ಕಾರ್ಯಕರ್ತರು ಸಂಯಮದಿಂದ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಅದರಂತೆ ಪಕ್ಷ ನಿರ್ಧರಿಸಿದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮಿಸಬೇಕು. ಸಚಿವ ಕೆ.ಸಿ.ನಾರಾಯಣಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ ಎಂದಾಗ ಸಭೆಯಲ್ಲಿ ಗದ್ದಲ ಆರಂಭವಾಯಿತು. ಪಕ್ಷಕ್ಕೆ ಅರ್ಜಿ ಸಲ್ಲಿಸಿರುವ 6 ಮಂದಿ ಆಕಾಂಕ್ಷಿತರ ಪೈಕಿ ಒಬ್ಬರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಪಕ್ಷಕ್ಕೆ ಯಾವುದೇ ಸೇವೆ ಸಲ್ಲಿಸದ ಕೆಸಿಎನ್‌ರನ್ನು ಸೇರ್ಪಡೆ ಮಾಡಿಕೊಳ್ಳುವುದು ಸಮಂಜಸವೂ ಅಲ್ಲ. ಪ್ರತಿ ಚುನಾವಣೆಯಲ್ಲಿ ಪಕ್ಷಾಂತರಕ್ಕೆ ಒಳಗಾಗುವ ಅವರ ಸೇರ್ಪಡೆಯಿಂದ ಪಕ್ಷ ದುರ್ಬಲವಾಗುತ್ತದೆ. ಜತೆಗೆ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಬಸವಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಈ ಮಧ್ಯೆ ಸಭೆಯಲ್ಲಿ ಕೂಗಾಟ ಹೆಚ್ಚಾದ ಹಿನ್ನೆಲೆಯಲ್ಲಿ ಸಭೆ ಮುಂದೂಡಿ ಹೊರ ನಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಾಹನವನ್ನು ಕಾರ್ಯಕರ್ತರು ತಡೆದರು. ಮಾತ್ರವಲ್ಲದೆ ಅವರ ಎದುರಲ್ಲೇ ಹಳೇ ಟೈಯರ್ ಸುಟ್ಟು, ಫ್ಲೆಕ್ಸ್‌ಗಳನ್ನು ಕಿತ್ತೆಸೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್‌ಕುಮಾರ್, ಮಹೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
    ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ: ಕೆ.ಸಿ.ನಾರಾಯಣಗೌಡರು ಸೋಲಿನ ಭೀತಿಯಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಘಟನೆಗೆ ತಾಲೂಕಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಧಿಕಾರದಲ್ಲಿದ್ದಾಗ ವಿಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಆತ ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಪಕ್ಷ ಸೇರ್ಪಡೆಗೆ ಅವಕಾಶ ನೀಡಬಾರದು. ಮಾತ್ರವಲ್ಲದೆ ಒಂದೊಮ್ಮೆ ನಾರಾಯಣಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿ ತಟಸ್ಥ ನೀತಿ ಅನುಸರಿಸುತ್ತೇವೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಸ್ಪರ್ಧಾಂಕ್ಷಿಗಳಾದ ಮಾಜಿ ಶಾಸಕ ಬಿ.ಪ್ರಕಾಶ್, ಭಾರತ್ ಜೋಡೋ ನಿರ್ವಹಣಾ ಸಮಿತಿ ಸದಸ್ಯ ವಿಜಯ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ನಾಗೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts