More

    ಸೌಹಾರ್ದ ಸೊಸೈಟಿ ಬ್ಯಾಂಕ್ ಹಗರಣವನ್ನು ಸಿಬಿಐಗೆ ಒಪ್ಪಿಸದ ಹಿನ್ನೆಲೆಯಲ್ಲಿ ವಿಧಾನಸೌಧದ ಎದುರು ಕಾಂಗ್ರೆಸ್ ನಾಯಕರ ಧರಣಿ

    ಬೆಂಗಳೂರು: ಶ್ರೀ ಗುರುರಾಘವೇಂದ್ರ ಬ್ಯಾಂಕ್ ಮತ್ತು ವಸಿಷ್ಠ ಸೌಹಾರ್ದ ಸೊಸೈಟಿಯ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಿದ್ದೇವೆ ಎಂದು ಸಹಕಾರಿ ಸಚಿವರೇ ಸದನದಲ್ಲಿ ಹೇಳಿದ್ದರು. ಆದರೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ. ಮುಂದೆ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದ್ದು ಇದೆ ಕೊನೆಯ ಸಂಪುಟ ಸಭೆಯಾಗಲಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸದೆ ಸರ್ಕಾರ ಸುಳ್ಳು ಹೇಳಿ ಜಾರಿಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ವಕ್ತಾರರು ಹಾಗೂ ಠೇವಣಿದಾರರ ಹಿತ ರಕ್ಷಣಾ ವೇದಿಕೆಯ ಮುಖ್ಯಸ್ಥರಾದ ಡಾ.ಶಂಕರ್ ಗುಹಾ ದ್ವಾರಕನಾಥ್ ಮತ್ತು ಮೇಲ್ಮನೆ ಸದಸ್ಯರಾದ ಯು.ಬಿ.ವೆಂಕಟೇಶ್ ರವರು ಧರಣಿಯನ್ನು ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಂಕರ್ ಗುಹಾ, ‘ಬಿಜೆಪಿ ಸರ್ಕಾರ ಬ್ಯಾಂಕ್ ಹಗರಣದಲ್ಲಿ ತಪ್ಪಿತಸ್ಥರನ್ನು ಕಾಪಾಡುವ ಕೆಲಸ ಮಾಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.ಅಲ್ಲದೆ ಬಸವನಗುಡಿಯ ಶಾಸಕ ರವಿ ಸುಬ್ರಮಣ್ಯ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಗುರುರಾಘವೇಂದ್ರ ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ತಾವೇ ಖುದ್ದಾಗಿ ಪಾಲ್ಗೊಳ್ಳುತ್ತಿದ್ದವರು ಮತ್ತು ಠೇವಣಿದಾರರಿಗೆ ಬಂದ ಅಲ್ಪಸ್ವಲ್ಪ ವಿಮೆಯ ಹಣವನ್ನು ತಾವೇ ಕೊಡಿಸಿದ್ದು ಎಂದು ಹೇಳಿಕೊಳ್ಳುತ್ತಿರುವ ಇವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ವಿಚಾರದಲ್ಲಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನೆಲ್ಲ ನೋಡಿದರೆ ಇದರಲ್ಲಿ ಇವರ ಸಹಭಾಗಿತ್ವ ಇದೆಯೇ ಎಂಬ ಶಂಕೆ ಬಲವಾಗಿ ಕಾಡುತ್ತಿದೆ. ಮೊದಲು ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ ಎಂದಿದ್ದ ಸಹಕಾರಿ ಸಚಿವರು ಇಷ್ಟು ವರ್ಷ ತಳ್ಳಿಕೊಂಡು ಬಂದು ಕೊನೆಯಲ್ಲಿ  ನಂತರದಲ್ಲಿ ನಮ್ಮ ಅನೇಕ ರೀತಿಯ ಹೋರಾಟಗಳಿಗೆ ಮಣಿದು ಕಳೆದ ಡಿಸೆಂಬರ್ ತಿಂಗಳ ಬೆಳಗಾವಿ ಅಧಿವೇಶನದಲ್ಲಿ ತನಿಖೆಯನ್ನು ಸಿಬಿಐ ಗೆ ಒಪ್ಪಿಸುವುದಾಗಿ ಶಿಫಾರಸ್ಸು ಮಾಡುತ್ತೇವೆ ಎಂದಿದ್ದರು. ಆದರೆ ಈಗ ಅದ್ಯಾವುದೂ ಇಲ್ಲ. ನೊಂದ ಠೇವಣಿದಾರರು ಈ ಸರ್ಕಾರದ ಮೇಲೆ ಇಟ್ಟ ಭರವಸೆ ಸಂಪೂರ್ಣ ನುಚ್ಚುನೂರಾಗಿದೆ. ಆದ್ದರಿಂದಲೇ ಗಾಂಧಿ ಪ್ರತಿಮೆಯ ಮುಂದೆ ಧರಣಿಯನ್ನು ಮಾಡಬೇಕಾಯಿತು. ಎಂದು ಹೇಳಿದರು.

    ಇದೇ ಸಂದರ್ಭ ಮಾತನಾಡಿದ ಮೇಲ್ಮನೆ ಸದಸ್ಯ ಯು.ಬಿ.ವೆಂಕಟೇಶ ‘ನಾನು ಸದನದಲ್ಲಿ ಅದೆಷ್ಟೋ ಬಾರಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಆದರೆ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಹಾರಿಕೆಯ ಉತ್ತರವನ್ನು ಕೊಡುತ್ತಾ ಬಂದು ಕೊನೆಗೆ ಸಿಬಿಐಗೆ ಕೊಡಲು ಶಿಫಾರಸು ಮಾಡುವುದಾಗಿ ಹೇಳಿದ್ದರು. ಆದರೆ ಕೊನೆಗೂ ಅದು ಆಗಲೇ ಇಲ್ಲ. ಈ ಸಂಪುಟ ಸಭೆಯಲ್ಲಿ ಆ ಕುರಿತು ಪ್ರಸ್ತಾಪವೇ ಬರಲಿಲ್ಲ. ಬಿಜೆಪಿಯವರು ಸುಳ್ಳು ಹೇಳಿ ದಿನಗಳನ್ನು ದೂಡಿ ಜನರನ್ನು ದಿಕ್ಕು ತಪ್ಪಿಸುವಲ್ಲಿ ನಿಸ್ಸೇಮರು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts