

ಅಮೃತಸರ: ಆಘಾತಕಾರಿ ಘಟನಟಯೊಂದರಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬಿನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.
ಬಲ್ಜಿಂದರ್ ಸಿಂಗ್ ಬಲ್ಲಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇವರ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖಲಿಸ್ತಾನಿ ಭಯೋತ್ಪಾದಕ ಹರ್ಷ್ ದಲ್ಲಾ ಇವರ ಹತ್ಯೆಯ ಹೊಣೆಯನ್ನು ಹೊತ್ತಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ ತಮ್ಮ ಮನೆಯಿಂದ ಹೊರಬರುವ ಬಲ್ಜಿಂದರ್ ಅವರ ಮೇಲೆ ಗುಂಡು ಹಾರಿಸುವ ದುಷ್ಕರ್ಮಿಗಳು ಸ್ಥಳದಿಂದ ತಕ್ಷಣವೆ ಪಲಾಯನ ಮಾಡುತ್ತಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಲ್ಜಿಂದರ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಲ್ಜಿಂದರ್ ಅವರ ಹತ್ಯೆಯ ಹೊಣೆಯನ್ನು ಹೊತ್ತಿರುವ ಖಲಿಸ್ತಾನಿ ಭಯೋತ್ಪಾದಕ ಹರ್ಷ್ ದಲ್ಲಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ಬಲ್ಜಿಂದರ್ ಸಿಂಗ್ ಬಲ್ಲಿ ನನ್ನ ಭವಿಷ್ಯವನ್ನು ಹಾಳು ಮಾಡಿ ನಾನು ಗ್ಯಾಂಗ್ಸ್ಟಾರ್ ಆಗಿ ಬೆಳೆಯಲು ಪ್ರಮುಖ ಕಾರಣ ಆಗಿದ್ದಾನೆ. ನನ್ನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆಯುವುದರ ಹಿಂದೆ ಈತನ ಕೈವಾಡವಿದೆ. ಈತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಗೆ ಪ್ರೇರೆಪಿಸಿತು ಎಂದು ಬರೆದುಕೊಂಡಿದ್ದಾನೆ.
ಇತ್ತ ಬಲ್ಜಿಂದರ್ ಸಿಂಗ್ ಹತ್ಯೆಯನ್ನು ಖಂಡಿಸಿರುವ ಪಂಜಾಬ್ ಕಾಂಗ್ರೆಸ್ ಘಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. 2022ರಲ್ಲಿ ಸಿಧು ಮೂಸೇವಾಲಾ ಅವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು. ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಷ್ಟ್ರೀಯ ತನಿಕಾ ದಳಕ್ಕೆ ಬೇಕಾಗಿರುವ ಹರ್ಷ್ ದಲ್ಲಾ ಕೆನಡಾದಲ್ಲಿ ವಾಸವಿದ್ದಾನೆ. ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಪಂಜಾಬ್ನಲ್ಲಿ ನಡೆದ ಹಲವು ಹತ್ಯೆಯ ಹೊಣೆಯನ್ನು ಈತ ಹೊತ್ತಿದ್ದಾನೆ.