More

    ಹಕ್ಕು ಪತ್ರ ವಿತರಣೆ, ಶಂಕುಸ್ಥಾಪನೆ ಚುನಾವಣಾ ಗಿಮಿಕ್

    • ಸಚಿವ ಆನಂದ ಸಿಂಗ್ ವಿರುದ್ಧ ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ವಾಗ್ದಾಳಿ

    ಹೊಸಪೇಟೆ: ವಿಜಯನಗರ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ಸಚಿವ ಆನಂದ ಸಿಂಗ್ ಚುನಾವಣಾ ಗಿಮಿಕ್ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಆರೋಪಿಸಿದರು.

    ನಗರದ  ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಜನರಿಗೆ ಹಕ್ಕು ಪತ್ರಗಳ ಆಮಿಷಿವೊಡ್ಡಿ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಕಂಡಿದ್ದಾರೆ. ಹೊಸಪೇಟೆ ನಗರದಲ್ಲಿ ವಿತರಿಸಿರುವ ಹಕ್ಕು ಪತ್ರಗಳಲ್ಲಿ ಒಂದೂ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಲ್ಲ. ವಿಜಯನಗರದಲ್ಲಿ ಎಷ್ಟು ಹಕ್ಕು ಪತ್ರಗಳನ್ನು ವಿತರಿಸಲಾಗುತ್ತದೆ ಎಂಬ ಪ್ರಶ್ನೆಗೆ ಸ್ಲಂ ಬೋರ್ಡ್ ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಹಕ್ಕು ಪತ್ರದೊಂದಿಗೆ ಕವರಿಂಗ್ ಲೆಟರ್ ಕೂಡಾ ನೀಡಿಲ್ಲ. ಸಚಿವ ಆನಂದ ಸಿಂಗ್ ಭಾವಚಿತ್ರವಿರುವ ಹಕ್ಕು ಪತ್ರಗಳು ಮದುವೆ ಆಹ್ವಾನ ಪತ್ರಿಕೆಯಂತಿದ್ದು, ಅಧಿಕೃತವೇ ಎಂದು ಸಂಶಯ ವ್ಯಕ್ತಪಡಿಸಿದರು.


    ಬಡವರು ಕಳೆದ ೨೫- ೩೦ ವರ್ಷಗಳಿಂದ ತಮ್ಮ ಜಾಗ, ಮನೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಮಾರ್ಚ್ ೧೫ರ ನಂತರ ಯಾವುದೇ ಕ್ಷಣದಲ್ಲೂ ಚುನಾವಣೆ ಘೋಷಣೆಯಾಗಬಹುದು. ಆನಂತರ ಅವುಗಳು ನೋಂದಣಿಯಾಗದಿದ್ದರೆ ವಗ್ಗರಣೆ, ಮಿರ್ಚಿ ತಿನ್ನುವುದಕ್ಕೇ ಲಾಯಕ್ಕು ಎಂದು ಲೇವಡಿ ಮಾಡಿದರು.

    ಚುನಾವಣಾ ಹೊಸ್ತಿಲಲ್ಲಿ ಹಕ್ಕು ಪತ್ರ ವಿತರಿಸಿ ೧೦ ದಿನ ಕಳೆದರೂ, ಒಂದೇ ಒಂದು ನೋಂದಣಿ ಆಗಿಲ್ಲ. ಚುನಾವಣಾ ಅಧಿಸೂಚನೆ ಪ್ರಕಟವಾಗುವ ಮುನ್ನವೇ ಅವುಗಳನ್ನು ನೋಂದಣಿ ಮಾಡಿಸಲಿ, ಇಲ್ಲವೇ ಅವು ಬೋಗಸ್ ಎಂಬುದನ್ನು ಒಪ್ಪಿಕೊಳ್ಳಲು ತಾಕೀತು ಮಾಡಿದರು.

    ಹಿಂದಿನ ಕಾಮಗಾರಿಗಳು ಯಾವ ಹಂತದಲ್ಲಿವೆ?
    ವಿಜಯನಗರ ಕ್ಷೇತ್ರದಲ್ಲಿ ಕಳೆದ ೧೫ ವರ್ಷಗಳಲ್ಲಿ ಆಗಬೇಕಿದ್ದ ಕಾಮಗಾರಿಗಳಿಗೆ ಸಚಿವ ಆನಂದ ಸಿಂಗ್ ಇತ್ತೀಚೆಗೆ ಚಾಲನೆ ನೀಡುತ್ತಿದ್ದಾರೆ. ೮ ತಿಂಗಳ ಹಿಂದೆ ೨೧೧ ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅವು ಯಾವ ಹಂತದಲ್ಲಿವೆ? ಇಂದೋ, ನಾಳೆಯೋ ಚುನಾವಣೆ ಘೋಷಣೆಯಾಗುವ ಸಂದರ್ಭದಲ್ಲಿ ೨೮೭ ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆಯ ಔಚಿತ್ಯವೇನಿತ್ತು ಎಂದು ಖಾರವಾಗಿ ಪ್ರಶ್ನಿಸಿದ ಅವರು, ಕಾಮಗಾರಿಗಳ ಶಂಕು ಸ್ಥಾಪನೆ ಬರೀ ಚುನಾವಣಾ ಗಿಮಿಕ್ ಎಂದು ಹರಿಹಾಯ್ದರು.

    ಮಹಾನಗರ ಪಾಲಿಕೆ ಯಾರಿಗೆ ಬೇಕು?
    ಹಸಪೇಟೆಯನ್ನು ಮಹಾನಗರ ಪಾಲಿಕೆ ಮಾಡುವ ಬಗ್ಗೆ ಸಚಿವ ಆನಂದ ಸಿಂಗ್ ಹೇಳಿಕೆ ನೀಡಿದ್ದಾರೆ. ಆದರೆ, ಮಹಾನಗರ ಪಾಲಿಕೆಗಾಗಿ ಹೋರಾಟವೂ ಇಲ್ಲ. ಜನರ ಬೇಡಿಕೆಯೂ ಅಲ್ಲ. ಹೊಸಪೇಟೆ ಹೊರವಲಯದಲ್ಲಿ ತಮಗೆ ಸೇರಿದ ಸಾವಿರಾರು ಎಕರೆ ಜಮೀನುಗಳ ಮೌಲ್ಯವರ್ದನೆಗಾಗಿ ನಡೆಸಿರುವ ಹುನ್ನಾರ. ಮಹಾನಗರ ಪಾಲಿಕೆಯಾಗುವುದರಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆಣ್ಣೆ, ಬಡವರಿಗೆ ತೆರಿಗೆ ಬರೆ ಬೀಳಲಿದೆ ಎಂದು ಕುಟುಕಿದರು.
    ವಿಜಯನಗರ ಕ್ಷೇತ್ರಕ್ಕೆ ವರ್ಷಕ್ಕೆ ಕನಿಷ್ಠ ೫೦೦ ಕೋಟಿ ರೂ. ಅನುದಾನ ಬರುತ್ತಿದ್ದರೂ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿಲ್ಲ. ಇವರ ಕೃಪಾ ಕಟಾಕ್ಷದಿಂದ ಸಕ್ಕರೆ ಕಾರ್ಖಾನೆ, ಎಣ್ಣೆ ಮಿಲ್‌ಗಳು, ಡಿಸ್ಟಿಲರಿಗಳು ಬಂದ್ ಆಗಿವೆ. ಸ್ಥಳೀಯರು ನಿರುದ್ಯೋಗ ಎದುರಿಸುವಂತಾಗಿದೆ ಎಂದು ಎಳೆಎಳೆಯಾಗಿ ಪ್ರಸ್ತಾಪಿಸಿ ಕುಟುಕಿದರು.
    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಬಳ್ಳಾರಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಹೊಸಪೇಟೆ ಬ್ಲಾಕ್ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಪ್ರಮುಖರಾದ ಖಾಜಾಹುಸೇನ್, ವಿನಾಯಕ, ಗುಜ್ಜಲ ನಾಗರಾಜ್, ವೀರಸ್ವಾಮಿ, ರಾಮಕೃಷ್ಣ ನಿಂಬಗಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts