More

    ಕಾಂಗ್ರೆಸ್ ನೇತಾರ ಹಾರ್ದಿಕ್ ಪಟೇಲ್ ಜನವರಿ 24ರಿಂದ ನಾಪತ್ತೆ: ಪತ್ನಿ ಕಿಂಜಾಲ್​ ಅಳಲು

    ಅಹಮದಾಬಾದ್​: ಕಾಂಗ್ರೆಸ್ ನಾಯಕ, ಪಟೇಲ್ ಮೀಸಲಾತಿ ಚಳವಳಿಯ ನೇತಾರ ಹಾರ್ದಿಕ್ ಪಟೇಲ್ ಜನವರಿ 24ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಕಿಂಜಾಲ್ ಅಳಲು ತೋಡಿಕೊಂಡಿದ್ದಾರೆ.

    ಹಾರ್ದಿಕ್ ಪಟೇಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಜನವರಿ 18ರಂದು ಅವರನ್ನು ಬಂಧಿಸಿದ್ದರು. ಏಳು ದಿನಗಳ ಬಳಿಕ ಹಾರ್ದಿಕ್ ಪಟೇಲ್ ಅವರು ಟ್ವೀಟ್ ಮಾಡಿದ್ದು ಅದರಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿರುವ ಸಂದೇಶವಿದೆ. ಈ ರೀತಿ ಹೊರ ಬಂದ ಪಟೇಲ್ ಎಲ್ಲಿ ಹೋದರು ಎಂಬುದರ ಅರಿವು ಇಲ್ಲ ಎಂಬುದು ಕಿಂಜಾಲ್ ಅವರ ಅಳಲು.

    ಸೋಮವಾರ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಕಿಂಜಾಲ್​, ಕುಟುಂಬವನ್ನು ಒಮ್ಮೆಯೂ ಸಂಪರ್ಕಿಸಿಲ್ಲ. ಅವರು ಕಣ್ಮರೆಯಾಗಿರುವ ಹಿಂದೆ ಆಡಳಿತ ಯಂತ್ರದ ಕೈವಾಡ ಇದೆ. ನಮ್ಮ ಕುಟುಂಬಕ್ಕೆ ಸರ್ಕಾರ ಇನ್ನಿಲ್ಲದಂತೆ ಕಿರುಕುಳ ಕೊಡುತ್ತಾ ಇದೆ ಎಂದು ಆರೋಪಿಸಿದ್ದಾರೆ.

    ನನ್ನ ಪತಿಯ ವಿರುದ್ಧ ಹಲವು ಕೇಸ್​ಗಳನ್ನು ಹಾಕಿ ಬಂಧಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಅವರು ಬೇಗನೆ ಬಿಡುಗಡೆಯಾದರೂ, ಪುನಃ ಅವರನ್ನು ಇನ್ಯಾವುದೋ ಕೇಸ್​ನಲ್ಲಿ ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಪೊಲೀಸರು ಮನೆಗೆ ಬಂದು ಕಿರುಕುಳಕೊಡುತ್ತಾರೆ. ಇದನ್ನು ಹೆರಾಸ್​ಮೆಂಟ್ ಎಂದು ನೀವು ಭಾವಿಸುವುದಿಲ್ಲವೇ? ಎಂದು ಕಿಂಜಾಲ್​ ಪ್ರಶ್ನಿಸಿದ್ದಾರೆ.

    ಕಿಂಜಾಲ್ ಆರೋಪಗಳಿಗೆ ಗುಜರಾತ್​ನ ಡಿಜಿಪಿ ಶಿವಾನಂದ್ ಝಾ ಐಎಎನ್​ಎಸ್​ಗೆ ಪ್ರತಿಕ್ರಿಯಿಸಿದ್ದು, ಇದು ಮಾತನಾಡುವ ವಿಚಾರವೇ? ನನಗನಿಸಿದ ಮಟ್ಟಿಗೆ ಆತ ಯಾವುದಕ್ಕೂ ಅರ್ಹನಲ್ಲ ಎಂದಿದ್ದಾರೆ. ಇದೇ ವೇಳೆ, ಅಹಮದಾಬಾದ್​ ಪೊಲೀಸರು ಈ ವಿಚಾರವಾಗಿ ಮೌನ ವಹಿಸಿದ್ದಾರೆ.

    ಈ ನಡುವೆ, ಫೆಬ್ರವರಿ 9ರಂದು ಮತ್ತೆ ಟ್ವೀಟ್ ಮಾಡಿರುವ ಪಟೇಲ್, ಜಾಮೀನು ಸಿಕ್ಕೇ ಸಿಗುತ್ತದೆ. ಇಲ್ಲಿಗೇ ನಿಲ್ಲಲಾರೆ, ನನ್ನ ಶರೀರದಲ್ಲಿ ರಕ್ತ ಇರುವ ತನಕ ಹೋರಾಟ ಮುಂದುವರಿಸುವೆ ಎಂಬರ್ಥದ ಸಂದೇಶ ಅಪ್ಡೇಟ್ ಮಾಡಿದ್ದಾರೆ.

    ಇಂದು ಮತ್ತೆ ಎರಡು ಟ್ವೀಟ್ ಮಾಡಿ, ನನ್ನ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಪಂಚಾಯಿತಿ ಚುನಾವಣೆ ಹತ್ತಿರದಲ್ಲಿರುವ ಕಾರಣ ನನ್ನನ್ನು ತಡೆಯುವ ಪ್ರಯತ್ನ ಇದು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts