ಬಂಕಾಪುರ: ಪಟ್ಟಣದ ಸುತ್ತಮುತ್ತ, ಜಮೀನು, ಮನೆ ಹಿತ್ತಲುಗಳಲ್ಲಿ ಸ್ವಾಭಾವಿಕವಾಗಿ ಬೆಳೆದ ಮತ್ತು ರೈತರು ನೆಟ್ಟು ಬೆಳೆಸಿದ ಗಂಧದ ಮರಗಳು ಕಳ್ಳರ ಪಾಲಾಗುತ್ತಿವೆ. ಹಲವು ವರ್ಷಗಳಿಂದ ಕಾಳಜಿ ವಹಿಸಿ ಪೋಷಿಸಿದ ಬೆಲೆ ಬಾಳುವ ಮರಗಳು ನಾಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಗಂಧದ ಮರ ಕಳವು ಪ್ರಕರಣಗಳು ಪಟ್ಟಣದಲ್ಲಿ ಹೆಚ್ಚಾಗುತ್ತಿವೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಡಿ. 3ರಂದು ಪಟ್ಟಣದ ಪೋಸ್ಟ್ ಆಫೀಸ್ ಹಿಂದೆ ಎರಡು ಮರಗಳು, ಕೃಷ್ಣ ಕುಲಕರ್ಣಿ ಅವರ ಹಿತ್ತಲಿನಲ್ಲಿ ಒಂದು ಮರ, ಡಾ. ಬರ್ಜಿವಾಲೆ ಹಿತ್ತಲಿನಲ್ಲಿ ನಾಲ್ಕು ಮರ, ಬಂಕಣ್ಣ ಕುರಗೋಡಿ ಅವರಿಗೆ ಸೇರಿದ ಒಂದು ಮರ, ವೆಂಕಣ್ಣ ಮುಳಗುಂದ ಮತ್ತು ವಳಗೇರಿ ಓಣಿ ಸೇರಿದಂತೆ 12ಕ್ಕೂ ಅಧಿಕ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಲಾಗಿದೆ.
ಹಗಲಿನಲ್ಲಿ ಗಿಡಗಳನ್ನು ಗುರುತಿಸುವ ಕಳ್ಳರು, ರಾತ್ರಿ ವೇಳೆ ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಈ ಕುರಿತು ಗಂಧದ ಗಿಡಗಳ ಮಾಲೀಕರು ಬಂಕಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಗಂಧದ ಮರ ಕಳ್ಳರು ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಕಳೆದ ಎರಡ್ಮೂರು ವರ್ಷಗಳಿಂದ ಪಟ್ಟಣದಲ್ಲಿ ಗಂಧದ ಮರಗಳ್ಳತನ ಸದ್ದು ಮಾಡುತ್ತಲೇ ಇದೆ. ಈ ಮೊದಲು ಅರಳೆಲೆಮಠ ಖಾಸಗಿ ಆಸ್ಪತ್ರೆ ಬಳಿ ಅಭಿಷೇಕ ಸಜ್ಜನಗೌಡ್ರ ಅವರ ಮನೆ ಹಿತ್ತಲಿನಲ್ಲಿನ ಗಂಧದ ಮರ, ಹೈಸ್ಕೂಲ್ ರಸ್ತೆಯ ಕೊಟ್ರಯ್ಯಸ್ವಾಮಿ ಆದವಾನಿಮಠ ಅವರ ಮನೆ ಹಿಂಭಾಗದಲ್ಲಿನ ಎರಡು ಮತ್ತು ಅವರ ಮನೆ ಪಕ್ಕದ ಶಿವಾನಂದ ಆದವಾನಿಮಠ ಅವರ ಹಿತ್ತಲಿನಲ್ಲಿನ ಎರಡು, ಅಂಕದಖಣದ ಶಿವಪುತ್ರಯ್ಯ ಕೆಂಡದಮಠ ಅವರ ಒಂದು ಗಂಧದ ಮರ, ರಾಷ್ಟ್ರೀಯ ಹೆದ್ದಾರಿ ಪಕ್ಕದ ತೋಟದಲ್ಲಿನ ಸುಮಾರು ಐದು ಗಂಧದ ಮರಗಳನ್ನು ಕಳ್ಳರು ಕಡಿದು ಸಾಗಿಸಿದ್ದರು. ಆಗಲೂ ಕಳ್ಳರು ಪತ್ತೆಯಾಗಿರಲಿಲ್ಲ.
ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ಠಾಣಾ ಪ್ರಶಸ್ತಿ ಪಡೆದಿರುವ ಬಂಕಾಪುರ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಗೆ ಪಟ್ಟಣದಲ್ಲಿ ನಡೆಯುತ್ತಿರುವ ಗಂಧದ ಮರ ಕಳ್ಳರನ್ನು ಹಿಡಿಯುವುದು ಸವಾಲಾಗಿ ಪರಿಣಮಿಸಿದೆ.
ಹೊರ ರಾಜ್ಯಗಳಿಗೆ ಸಾಗಾಟ:
ಐತಿಹಾಸಿಕ ಹಿನ್ನೆಲೆಯುಳ್ಳ ಬಂಕಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನ, ಮಠಗಳು ಮತ್ತು ದರ್ಗಾಗಳಿವೆ. ಜತೆಗೆ ಶ್ರೀಗಂಧದ ಮರಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇಲ್ಲಿರುವ ದರ್ಗಾ ಮತ್ತು ದೇವಸ್ಥಾನಗಳಲ್ಲಿ ನಡೆಯುವ ಧಾರ್ವಿುಕ ಕಾರ್ಯಕ್ರಮ, ಪೂಜಾ ವಿಧಿ ವಿಧಾನಗಳಿಗೆ ಶ್ರೀಗಂಧ ಉಪಯೋಗಿಸುವುದು ವಾಡಿಕೆೆ. ಆದ್ದರಿಂದ ಇಲ್ಲಿನ ಅನೇಕ ಮನೆ ಹಿತ್ತಲಿನಲ್ಲಿ ಗಂಧದ ಮರಗಳು ಕಾಣಸಿಗುತ್ತವೆ. ಯಾವುದೇ ಆರ್ಥಿಕ ಲಾಭದ ಉದ್ಧೇಶವಿಲ್ಲದೆ, ಕೇವಲ ಧಾರ್ವಿುಕ ಕಾರ್ಯಕ್ರಮಗಳಿಗೆ ಉಪಯೋಗಿಸಲು ಹಿತ್ತಲುಗಳಲ್ಲಿ ಬೆಳೆಸಲಾಗುತ್ತಿದೆ. ಇಂಥ ಗಂಧದ ಮರಗಳ ಮೇಲೆ ಇತ್ತೀಚೆಗೆ ಕಳ್ಳರ ಕಣ್ಣು ಬಿದ್ದಿದೆ. ಹಣ ಗಳಿಸುವ ದುರಾಸೆಯಿಂದ ಮರಗಳನ್ನು ಕಡಿದು ಹೊರ ರಾಜ್ಯದ ಸುಗಂಧ ದ್ರವ್ಯ, ಧೂಪ ತಯಾರಿಸುವ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿದೆ ಎನ್ನಲಾಗಿದೆ.
ಡಿ. 3ರಂದು ನಮ್ಮ ಹಿತ್ತಲಿನಲ್ಲಿ ಸೇರಿದಂತೆ ಪಟ್ಟಣದ ವಿವಿಧ ಭಾಗಗಳಲ್ಲಿ ಗಂಧರ ಮರಗಳ ಕಳ್ಳತನವಾಗಿತ್ತು. ಎಲ್ಲರೂ ಸೇರಿ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಸ್ಥಳೀಯ ಸಿ.ಸಿ. ಟಿವಿ ಪರಿಶೀಲಿಸಿ ಕಳ್ಳರ ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.
| ಕೃಷ್ಣ ಕುಲಕರ್ಣಿ ಬಂಕಾಪುರ ನಿವಾಸಿ
ಪಟ್ಟಣದ ಮಾಲ್ಕಿ ಹದ್ದಿನಲ್ಲಿ ಗಂಧದ ಮರ ಕಳ್ಳತನ ನಡೆದಿದೆ. ಜಾಗದ ಮಾಲೀಕರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಜತೆ ನಾವೂ ಜಂಟಿಯಾಗಿ ತನಿಖೆ ಮಾಡುತ್ತಿದ್ದೇವೆ.
| ರವಿ ಪುರಾಣಿಕಮಠ, ವಲಯ ಅರಣ್ಯಾಧಿಕಾರಿ ದುಂಡಸಿ ವಲಯ