More

    ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ: ಕೆ.ಎಸ್.ಈಶ್ವರಪ್ಪ ಆಕ್ರೋಶ

    ಶಿವಮೊಗ್ಗ: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಆಗಲಿದೆ ಎಂದು ನರೇಂದ್ರ ಮೋದಿ, ಅಮಿತ್ ಷಾ ಚುನಾವಣೆ ಸಂದರ್ಭದಲ್ಲೇ ಎಚ್ಚರಿಸಿದ್ದರು. ಅದೀಗ ನಿಜವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ಕಾಂಗ್ರೆಸ್ ಬೆಂಬಲಿತರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೋಟ್ಯಂತರ ರೂ. ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿದೆ ಎಂದು ದೂರಿದರು.
    ಇದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರದ್ದೇ ಸರ್ಕಾರ ಎಂದು ಕಾಂಗ್ರೆಸ್ ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ಐದು ತಿಂಗಳಲ್ಲೇ ಕೋಟ್ಯಂತರ ರೂ. ಸಂಗ್ರಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವ್ಯವಹಾರಗಳು ಬಯಲಿಗೆ ಬರಲಿದೆ ಎಂದರು.
    ಐದು ಗ್ಯಾರಂಟಿಗಳನ್ನು ಘೋಷಿಸಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದರು. ಈಗ ಎಲ್ಲ ಗ್ಯಾರಂಟಿಗಳೂ ಸುಳ್ಳು ಎಂಬುದು ಜನರಿಗೆ ಮನದಟ್ಟಾಗಿದೆ. ವಿದ್ಯುತ್ ಇಲ್ಲ, ರೈತರಿಗೆ ನೀರಿಲ್ಲ. ಇದರ ನಡುವೆ ಹೈಕಮಾಂಡ್ ನಾಯಕರಿಗೆ ಹಾಗೂ ಐದು ರಾಜ್ಯದ ಚುನಾವಣೆಗಳಿಗೆ ಹಣ ಸಂಗ್ರಹಿಸಲು ಪೈಪೋಟಿ ನಡೆಯುತ್ತಿದೆ ಎಂದು ದೂರಿದರು.
    ಶಿವಪ್ಪನಾಯಕ ವೃತ್ತದಲ್ಲಿ ಕೆಲ ಸಮಯ ರಸ್ತೆ ತಡೆ ನಡೆಸಿದ ಬಿಜೆಪಿ ಪ್ರಮುಖರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಎಂ ಸುಳ್ಳ, ಡಿಸಿಎಂ ಕಳ್ಳ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ರತ್ನಾಕರ ಶೆಣೈ, ಜಿಪಂ ಮಾಜಿ ಅಧ್ಯಕ್ಷ ತಮ್ಮಡಿಹಳ್ಳಿ ನಾಗರಾಜ್, ಉಪಮೇಯರ್ ಲಕ್ಷ್ಮೀಶಂಕರ ನಾಯ್ಕ, ನಗರ ಪಾಲಿಕೆ ಸದಸ್ಯರಾದ ಸುನೀತಾ ಅಣ್ಣಪ್ಪ, ಅನಿತಾ ರವಿಶಂಕರ್, ಎಸ್.ಜ್ಞಾನೇಶ್ವರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts