More

    ಚುನಾವಣೆ ನಂತರ ಕಾಂಗ್ರೆಸ್ ಅಂತ್ಯಕ್ರಿಯೆ | ಮಾಜಿ ಸಿಎಂ ಶೆಟ್ಟರ ಟೀಕೆ

    ಸಿಂದಗಿ: ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅನಾಯಕತ್ವ ಮತ್ತು ಅಸ್ತಿತ್ವದ ಕೊರತೆಯಿಂದ ಐಸಿಯುನಲ್ಲಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಕೈಗೆ ಜನರು ಮತ್ತೆ ಅಧಿಕಾರ ಕೊಟ್ಟ ನಂತರ ಅದರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಟೀಕಿಸಿದರು.

    ಶನಿವಾರ ಪಟ್ಟಣದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದರು. ಅಧಿಕಾರವಿದ್ದ ರಾಜ್ಯ ಸೇರಿದಂತೆ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹುಡುಕಿದರೂ ಸಿಗದು. ಹಲವಾರು ದಶಕಗಳ ಕಾಲ ರಾಷ್ಟ್ರ ಮತ್ತು ರಾಜ್ಯವನ್ನಾಳಿದ ಕಾಂಗ್ರೆಸ್ ಬಿಜೆಪಿಗೆ ಪರ್ಯಾಯ ಪಕ್ಷವಾಗಿಯೂ ನಿಲ್ಲದಂತೆ ಮಾಯವಾಗಿದೆ. ಕಾಂಗ್ರೆಸ್‌ನ್ನು ದುರ್ಬಿನ್ ಹಾಕಿಕೊಂಡು ಹುಡುಕುವಂತಾಗಿದೆ ಎಂದರು.

    ಚುನಾವಣಾ ಪ್ರಚಾರ ಸಮಿತಿಯಲ್ಲಿ ಜಿಲ್ಲೆಯವರಿಗೆ ಸ್ಥಾನ ನೀಡಿಲ್ಲ ಎಂಬ ಪ್ರಶ್ನೆಗೆ ಶೆಟ್ಟರ, ಐಸಿಯುನಲ್ಲಿರುವ ಕಾಂಗ್ರೆಸ್ಸನ್ನು ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. ಕೆಲವರು ಕಾಂಗ್ರೆಸ್ಸಿನಿಂದ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. ಅದು ನನಸಾಗದು. ಈ ಬಾರಿ ಬಿಜೆಪಿ ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಂದಗಿ ಭಾಗಕ್ಕೆ ರೈಲ್ವೆ ಸೌಲಭ್ಯ ಒದಗಿಸುವ ಕುರಿತು ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.

    ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅಧಿಕಾರವಿದ್ದಾಗ ಕನಸು ಕಂಡವರು, ಈಗ ಎಚ್ಚೆತ್ತಿದ್ದಾರೆ. ಅವರೇ ಮಾಡಿದ್ದರೆ ಅದನ್ನು ಉದ್ಘಾಟಿಸಬೇಕಿತ್ತು. ಅದಕ್ಕೆ ಮೋದಿಜಿ ಬರಬೇಕಿರಲಿಲ್ಲ. ಕಾಂಗ್ರೆಸ್ ನಾಯಕರ ಕುರಿತು ಜಂಗಮರ ಕನಸಿಕ ಕಥೆ, ಸವದಿ ಮನೆ ಎಮ್ಮೆ ಹೈನುಗಾರಿಕೆ ಕುರಿತು ಉಲ್ಲೇಖಿಸಿ ವ್ಯಂಗ್ಯವಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಖರ್ಗೆ, ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಆಗಲ್ಲ ಎಂದರು.

    ಶೀಘ್ರದಲ್ಲಿಯೇ ವಿಜಯಪುರದ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ಹಾಲಿ ಶಾಸಕರಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಡ್ತಾರೆ. ಅದಕ್ಕೆ ಕಮೀಟಿಯಿದೆ ಅವರು ಫೈನಲ್ ಮಾಡುತ್ತಾರೆ. ಕುಮಟಳ್ಳಿಗೆ ಟಿಕೆಟ್ ಕೊಡಬೇಕು ಎಂಬ ರಮೇಶ ಜಾರಕಿಹೊಳಿ ಪಟ್ಟು ಹಿಡಿದಿರುವ ಕುರಿತು ವಿವರಿಸಿದ ಅವರು, ಇದಕ್ಕೆ ಪಕ್ಷ ಸಮರ್ಥವಿದೆ. ಅದು ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ನಿರ್ಣಯಿಸುತ್ತದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ರಮೇಶ ಭೂಸನೂರ, ಮಹಿಳಾ ಘಟಕದ ಅಧ್ಯಕ್ಷ ಗೀತಾ ವಿವೇಕಾನಂದ, ಅಪ್ಪು ಪಟ್ಟಣಶೆಟ್ಟಿ, ಅಶೋಕ ಅಲ್ಲಾಪುರ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ, ಮಲ್ಲಿಕಾರ್ಜುನ ಜೋಗೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts