More

    ಕಾಂಗ್ರೆಸ್‌ಗೆ ಇರಿಸು ಮುರಿಸಾದ ರಮೇಶ ಬಂಡಿಸಿದ್ದೇಗೌಡ: ಚಿಹ್ನೆ ಮುಚ್ಚಿ ಮತ ಹಾಕೆಂದ ಮಾಜಿ ಶಾಸಕ

    ಮಂಡ್ಯ: ಕಾಂಗ್ರೆಸ್‌ಗೆ ಮತ ನೀಡಲು ಇಷ್ಟವಿಲ್ಲದಿದ್ರೆ ಪಕ್ಷದ ಚಿಹ್ನೆ ಮುಚ್ಚಿಕೊಂಡು ನನ್ನ ಹೆಸರಿನ(ಬಾಬಣ್ಣ) ಮುಂದೆ ವೋಟ್ ಹಾಕ್ಬಿಡ್ರಪ್ಪ….
    ಇದು ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾರಸವಾಡಿ ಗ್ರಾಮದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯೂ ಆದ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮನವಿ ಮಾಡಿಕೊಂಡ ಪರಿ. ಆದರೆ ಈ ಒಂದು ಎಡವಟ್ಟಿನ ಹೇಳಿಕೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಅದರಲ್ಲಿಯೂ ಶ್ರೀರಂಗಪಟ್ಟಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಗೆ ಇರಿಸು ಮುರಿಸು ತರಿಸಿದೆ. ಅತ್ತ ಮೂಲ ಹಾಗೂ ನಿಷ್ಠಾವಂತ ಕಾಂಗ್ರೆಸ್ಸಿಗರ ಕಣ್ಣುಗಳನ್ನು ಕೆಂಪಾಗಿಸಿದೆ. ಜತೆಗೆ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
    ಎಂಎಲ್‌ಸಿ ಎದುರಲ್ಲೇ ಮನವಿ: ರಮೇಶ ಬಂಡಿಸಿದ್ದೇಗೌಡ ಕಾಂಗ್ರೆಸ್‌ಗೆ ನಿಷ್ಠೆಯಾಗಿಲ್ಲ. ಹೋದ ಕಡೆಯೆಲ್ಲ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ನಂತಹ ದರಿದ್ರ ಪಕ್ಷಕ್ಕೆ ಬಂದು ತಪ್ಪು ಮಾಡಿಬಿಟ್ಟೆ ಎನ್ನುತ್ತಲೇ ಕಣ್ಣೀರು ಹಾಕುತ್ತಾ ಮತಯಾಚನೆ ಮಾಡುತ್ತಿದ್ದಾರೆಂದು ಇತ್ತೀಚೆಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಲವು ಸಭೆಗಳಲ್ಲಿ ಆರೋಪಿಸಿದ್ದರು. ಕಾರಸವಾಡಿ ಗ್ರಾಮದಲ್ಲಿ ನಡೆದ ಬೆಳವಣಿಗೆ ಇದಕ್ಕೆ ಪೂರಕವೆನ್ನುವಂತಿದೆ. ಅದು ಕಾಂಗ್ರೆಸ್‌ನಲ್ಲಿಯೇ ಹಲವು ದಶಕಗಳಿಂದ ರಾಜಕಾರಣ ಮಾಡಿಕೊಂಡು ಬರುತ್ತಿರುವ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಎದುರೇ ಇಂತಹ ಹೇಳಿಕೆ ನೀಡಿದ್ದಾರೆ. ಈ ಸಮಯದಲ್ಲಿ ಮಧು ಕೂಡ ಏನು ಹೇಳಲು ಸಾಧ್ಯವಾಗದೇ ಸುಮ್ಮನಾದರೂ ಮುಜುಗರ ಉಂಟು ಮಾಡಿತು. ಅತ್ತ ಸ್ಥಳೀಯ ಮುಖಂಡರು ಗಪ್‌ಚುಪ್ ಆಗುವಂತಾಯಿತು.
    ಈ ವೇಳೆ ಮುಖಂಡರಾದ ಕಾರಸವಾಡಿ ಸಿದ್ದರಾಮೇಗೌಡ, ಬೋರೇಗೌಡ, ಮಂಜುನಾಥ್, ಬೇಲೂರು ಶಶಿಧರ್, ರಮೇಶ್ ಮಿತ್ರ, ಹಳುವಾಡಿ ವೆಂಕಟೇಶ್, ನಾಗರಾಜು, ನಾಗಣ್ಣ, ರಾಮಚಂದ್ರು ಇತರರಿದ್ದರು.
    ಅತ್ತ ರಮೇಶ ಬಂಡಿಸಿದ್ದೇಗೌಡ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾತ್ರವಲ್ಲದೆ ಕಾಂಗ್ರೆಸ್‌ಗೂ ಇರಿಸು ಮುರಿಸು ತರಿಸುತ್ತಿದೆ. ಅಂತೆಯೇ ವಿಡಿಯೋ ಬಳಸಿ ಜೆಡಿಎಸ್ ವ್ಯಂಗ್ಯವಾಡುತ್ತಿದೆ. ಚಿಹ್ನೆ ಬೇಡವೆಂದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಬಾಬು ಅವರೇ ಎಂದು ಕಾಲೆಳೆಯುತ್ತಿದ್ದಾರೆ. ಇನ್ನು ಪಕ್ಷಕ್ಕೆ ವಿರುದ್ಧವಾಗಿರುವಂತೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದ ಚಿಹ್ನೆಯ ಅವಶ್ಯಕತೆ ಇಲ್ಲದಿದ್ದರೆ ಪಕ್ಷಕ್ಕೆ ಬರಲೇಬಾರದಿತ್ತು. ಇದು ಕಾಂಗ್ರೆಸ್‌ಗೆ ಮಾಡಿದ ಅವಮಾನವೆಂದು ಬೇಸರ ಹೊರಹಾಕುತ್ತಿದ್ದಾರೆ. ಜತೆಗೆ ಮಾಜಿ ಶಾಸಕರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಮತ್ತೊಂದು ಅಸ್ತ್ರ ಸಿಕ್ಕಿದಂತಾಗಿದೆ. ಈ ಹಿನ್ನೆಲೆಯಲ್ಲಿ ಎಡವಟ್ಟು ಹೇಳಿಕೆ ಯಾವೆಲ್ಲ ಬೆಳವಣಿಗೆಗೆ ಕಾರಣವಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts