More

    ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 267.05 ಕೋಟಿ ರೂ ಒಡೆಯ: ದುಬಾರಿ ಆಸ್ತಿಯಿದ್ದರೂ ಪತ್ನಿ ಬಳಿ ಕಾರಿಲ್ಲ

    ಮಂಡ್ಯ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) 267.05 ಕೋಟಿ ರೂ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ 329.32 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವ ಇವರ ಪತ್ನಿ ಕುಸುಮಾ ಅವರು ಪತಿಗಿಂತಲೂ ದೊಡ್ಡ ಶ್ರೀಮಂತೆಯಾಗಿದ್ದಾರೆ.
    ನಾಗಮಂಗಲ ತಾಲೂಕು ಕನ್ನಾಗಟ್ಟ ಗ್ರಾಮದ ಚಂದ್ರು ಅವರು ಬಿಎಸ್ಸಿ ಪದವೀಧರ. ಬೆಳ್ಳೂರಿನ ಎಎಲ್‌ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಆದಿಚುಂಚನಗಿರಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದಾರೆ. ಇನ್ನು ಚಂದ್ರು ಕೈಯಲ್ಲಿ ಕೇವಲ 1.80 ಲಕ್ಷ ರೂ ನಗದು ಇದೆ. ಬೆಂಗಳೂರಿನ ಸಂಜಯನಗರ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿರುವ ಉಳಿತಾಯ ಖಾತೆಯಲ್ಲಿ 1.36 ಕೋಟಿ ರೂ ಠೇವಣಿ ಇಟ್ಟಿದ್ದಾರೆ. ಇದರೊಂದಿಗೆ ವಿಮೆ, ಹೂಡಿಕೆ, ಬಾಂಡ್ ಸೇರಿದಂತೆ 29.94 ಕೋಟಿ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೇ 237.11 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬೆಂಗಳೂರು ಸೇರಿದಂತೆ ಹಲವೆಡೆ 99.36 ಲಕ್ಷ ರೂ ಮೌಲ್ಯದ 13 ನಿವೇಶನ, 80.72 ಕೋಟಿ ರೂ ಮೌಲ್ಯದ 5 ವಾಣಿಜ್ಯ ಕಟ್ಟಡ, ಬೆಂಗಳೂರಿನಲ್ಲಿ 57 ಕೋಟಿ ರೂ ಮೌಲ್ಯದ 6 ವಾಸದ ಮನೆಗಳಿವೆ. ಇಷ್ಟಾದರೂ ಅವರ ಬಳಿ ಇರುವುದು ಮೂರು ಟ್ರ್ಯಾಕ್ಟರ್ ಮಾತ್ರ. ಆದರೆ, ಓಡಾಡಲು ಸ್ವಂತದಾದ ಒಂದು ಕಾರು ಕೂಡ ಇಲ್ಲ.
    ಇನ್ನು ತಮ್ಮ ಕಟ್ಟಡಗಳನ್ನು ಬಾಡಿಗೆ ನೀಡಿರುವ ಕಂಪನಿಗಳಿಂದ ಪಡೆದಿರುವ ಮುಂಗಡ ಮೊತ್ತದ ಹೊಣೆಗಾರಿಕೆ ಹಾಗೂ ಬ್ಯಾಂಕ್ ಸಾಲ ಸೇರಿದಂತೆ 15.66 ಕೋಟಿ ರೂ ಸಾಲ ಮಾಡಿರುವುದಾಗಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಇವರ ಬಳಿ ಇರುವ ಐಷಾರಾಮಿ ಕಾರುಗಳನ್ನು ಬೆಂಗಳೂರಿನಲ್ಲಿ ತಮ್ಮ ಒಡೆತನದ ಸ್ಟಾರ್ ಇನ್ಪ್ರಾಟೆಕ್ ಹೆಸರಿನ ನಿರ್ಮಾಣ ಸಂಸ್ಥೆ ಮೂಲಕ ಖರೀದಿಸಿದ್ದಾರೆ.
    ವೆಂಕಟರಮಣೇಗೌಡ ಅವರ ಪತ್ನಿ ಕುಸುಮಾ ಅವರ ಬಳಿಯೂ ಒಂದೇ ಒಂದು ಕಾರಿಲ್ಲ. 4.20 ಕೋಟಿ ರೂ ಮಾರುಕಟ್ಟೆ ಮೌಲ್ಯದ 5 ಎಕರೆ 25 ಗುಂಟೆ ಜಮೀನು ಹಾಗೂ 90.29 ಕೋಟಿ ರೂ ಮೌಲ್ಯದ 29 ನಿವೇಶನ, 36.39 ಕೋಟಿ ರೂ ಮೌಲ್ಯದ ಮೂರು ವಾಣಿಜ್ಯ ಕಟ್ಟಡ, ಬೆಂಗಳೂರಿನಲ್ಲಿ 16.09 ಕೋಟಿ ರೂ ಮೌಲ್ಯದ 3 ವಾಸದ ಮನೆ ಇದೆ. ಇವರ ಬಳಿ 1.90 ಲಕ್ಷ ರೂ ನಗದು ಇದ್ದರೆ, ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 64.94 ಲಕ್ಷ ರೂ ಠೇವಣಿ ಇಟ್ಟಿದ್ದಾರೆ. 2.99 ಕೋಟಿ ರೂ ಮೌಲ್ಯದ 4.200 ಕಿಲೋ ಚಿನ್ನಾಭರಣ, 21.50 ಲಕ್ಷ ರೂ ಮೌಲ್ಯದ 25.6 ಕಿಲೋ ಬೆಳ್ಳಿ ವಸ್ತುಗಳು ಸೇರಿದಂತೆ 182.33 ಕೋಟಿ ರೂ ಮೌಲ್ಯದ ಚರಾಸ್ತಿ, 146.99 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೇ 2.21 ಕೋಟಿ ರೂ ಸಾಲ ಇವರ ಹೆಸರಿನಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts