More

    ಕೊಪ್ಪಳ ಎಂಪಿ ಟಿಕೆಟ್‌ಗೆ ತಾಲೀಮು

    ಸಿಂಧನೂರು: ಕೊಪ್ಪಳ ಲೋಕಸಭೆ ಟಿಕೆಟ್ ಪಡೆಯಲು ಸ್ಥಳೀಯರು ಇನ್ನಿಲ್ಲದ ತೀವ್ರ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‌ದಿಂದ ಬಸನಗೌಡ ಬಾದರ್ಲಿ, ಬಿಜೆಪಿಯಿಂದ ಕೆ.ಕರಿಯಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಚುನಾವಣೆಯ ಕಾವು ರಂಗೇರಲು ಅನುಮಾನವಿಲ್ಲ.

    ಕಾಂಗ್ರೆಸ್ನಿಂದ ಬಸನಗೌಡ ಬಾದರ್ಲಿ, ಬಿಜೆಪಿಯಿಂದ ಕೆ.ಕರಿಯಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿಗಳು

    ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಸಿಂಧನೂರು ತಾಲೂಕು ಕೊನೆಯದ್ದಾಗಿದೆ. ಈ ಹಿಂದೆ ಕೂಡಾ ರಾಯಚೂರು ಜಿಲ್ಲೆಗೆ ಕೊಪ್ಪಳವು ಇತ್ತು. ನಂತರ ಹೊಸ ಜಿಲ್ಲೆ ಘೋಷಣೆ ನಂತರ ಸಿಂಧನೂರು ತಾಲೂಕನ್ನು ಲೋಕಸಭೆ ಕ್ಷೇತ್ರ ಉಳಿಸಿಕೊಂಡಿದೆ. ಸಿಂಧನೂರಿನ ಕೆ.ವಿರೂಪಾಕ್ಷಪ್ಪ 2004 ರಲ್ಲಿ ಸಂಸದರಾಗಿ ಆಯ್ಕೆಗೊಂಡಿದ್ದರು. ನಂತರ ಕೊಪ್ಪಳದವರೇ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಈಗ ಮತ್ತೆ ಸಿಂಧನೂರು ತಾಲೂಕಿನವರಿಗೆ ಕೊಪ್ಪಳ ಲೋಕಸಭೆ ಕ್ಷೇತ್ರದ ಟಿಕೆಟ್ ಸಿಗಬೇಕೆನ್ನುವ ಕೂಗು ಕೇಳಿ ಬಂದಿದೆ.

    ಇದನ್ನೂ ಓದಿ: ಬೆಸ್ಕಾಂ ಸಮಸ್ಯೆಗೂ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ; ಬಿ. ದಯಾನಂದ್ ಸಲಹೆ

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರಕ್ಕೆ ಟಿಕೆಟ್‌ಗಾಗಿ ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು ಪಟ್ಟು ಹಿಡಿದಿದ್ದರು. ಕೊನೇಗಳಿಗೆಯಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ರಣದೀಪ್ ಸುರ್ಜೇವಾಲಾ ಸಂಧಾನ ನಡೆಸಿ, ಮುಂದಿನ ಲೋಕಸಭೆ ಚುನಾವಣೆ ಟಿಕೆಟ್ ನೀಡಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಸನಗೌಡ ಬಾದರ್ಲಿ ಕಣದಿಂದ ಹಿಂದೆ ಸರಿದ್ದರು. ಈಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆದಿವೆ. ಆಯಾ ವಿಧಾನಸಭೆ ಕ್ಷೇತ್ರಗಳಿಗೂ ಭೇಟಿ ನೀಡಿ, ಸ್ಪರ್ಧೆಯ ಕುರಿತು ತಿಳಿಸುತ್ತಿದ್ದಾರೆನ್ನಲಾಗಿದೆ. ಸ್ಥಳೀಯವಾಗಿಯೂ ರಾಜಕೀಯ ಚಟುವಟಿಕೆ ಚುರುಕು ಪಡೆದುಕೊಂಡಿದೆ.

    ಇನ್ನೂ ಸಿಂಧನೂರು ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಅದೃಷ್ಟ ಎನ್ನುವಂತೆ ಕೊನೇ ಗಳಿಗೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡು 50 ಸಾವಿರ ಮತಗಳನ್ನು ಪಡೆದು ಪರಾಜಿತಗೊಂಡಿರುವ ಕೆ.ಕರಿಯಪ್ಪ ಕೂಡಾ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸುವ ಆಲೋಚನೆ ಹೊಂದಿದ್ದಾರೆ. ಈಗಾಗಲೇ ಟಿಕೆಟ್ ಬಗ್ಗೆಯೂ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆನ್ನಲಾಗಿದೆ. ಕುರುಬ ಕೋಟಾದಲ್ಲಿ ಒಂದು ಬಾರಿ ತಮಗೂ ಅವಕಾಶ ನೀಡಲಿ, ಅಧಿಕ ಮತಗಳು ಗಳಿಸಿರುವೆ. ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಕುರಿತು ಮನವರಿಕೆ ಮಾಡಿದ್ದಾರೆ. ಈ ಬೆಳವಣಿಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಈಗಾಗಲೇ ಚುನಾವಣೆಗೆ ಸ್ಪರ್ಧೆಗೆ ನಿವೃತ್ತಿ ಹೇಳಿದ್ದಾರೆ.


    ಲೋಕಸಭೆ ಚುನಾವಣೆ ಹತ್ತಿರವಾದಂತೆ ಚಟುವಟಿಕೆಗಳು ಇನ್ನೂ ಬಿರುಸುಗೊಳ್ಳಲಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಹೊಸದಾಗಿ ಯುವಕರು ಕೂಡ ಅಲ್ಲಲ್ಲಿ ಹಬ್ಬದ ಬ್ಯಾನರ್‌ಗಳನ್ನು ಹಾಕಿಕೊಂಡು ಟಿಕೆಟ್ ಆಕಾಂಕ್ಷಿಗಳಾಗಿ ಮಿಂಚುತ್ತಿದ್ದಾರೆ. ಆದರೆ ಚುನಾವಣೆಯ ಕೊನೆಯವರೆಗೂ ಟಿಕೆಟ್ ಕಗ್ಗಂಟಾಗಿಯೇ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts