More

    ಬೆಸ್ಕಾಂ ಸಮಸ್ಯೆಗೂ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ; ಬಿ. ದಯಾನಂದ್ ಸಲಹೆ

    ಬೆಂಗಳೂರು: ಬೆಸ್ಕಾಂ ವಿದ್ಯುತ್ ತಂತಿ, ಕಂಬ ಬಿದ್ದು ಓಡಾಟಕ್ಕೆ ತೊಂದರೆ ಅಥವಾ ಅಪಾಯ ಇದ್ದರೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112ಗೂ ಕರೆ ಮಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಲಹೆ ನೀಡಿದ್ದಾರೆ.
    ಜ್ಞಾನಭಾರತಿ ಆವರಣ ಎಚ್.ಎನ್. ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನಗರ ಪೊಲೀಸ್ ವಿಭಾಗದ ‘ಮಾಸಿಕ ಜನಸಂಪರ್ಕ ದಿವಸ’ ಸಭೆಯಲ್ಲಿ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗ ವ್ಯಾಪ್ತಿಯ ಜನರಿಂದ ಕುಂದುಕೊರತೆಗಳನ್ನು ಆಲಿಸಿದರು.

    ವೈಟ್‌ಫೀಲ್ಡ್ ಕಾಡುಗುಡಿಯಲ್ಲಿ ವಿದ್ಯುತ್ ತಂತಿ ತುಳಿದು ತಾಯಿ- ಮಗು ಸಾವಿನ ಪ್ರಕರಣವನ್ನು ಸಾಕಷ್ಟು ಜನರು ಪ್ರಸ್ತಾಪ ಮಾಡಿ ತಮ್ಮ ಬಡಾವಣೆಯಲ್ಲಿ ಅಪಾಯಕಾರಿ ವಿದ್ಯುತ್ ತಂತಿ, ಕಂಬಗಳ ಕುರಿತು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಪೊಲೀಸ್ ಆಯುಕ್ತರು, ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಿ ಅಥವಾ ಅವರ ವಾಟ್ಸ್‌ಆ್ಯಪ್ ನಂಬರ್‌ಗೆ ೆಟೋ ತೆಗೆದು ಅಪ್‌ಲೋಡ್ ಮಾಡಿದರೆ ಪರಿಹಾರ ಒದಗಿಸುತ್ತಾರೆ. ಇದರ ಜತೆಗೆ ಪೊಲೀಸ್ ಸಹಾಯವಾಣಿ ‘ನಮ್ಮ-112’ಗೆ ಸಹ ಕರೆ ಮಾಡಬಹುದು. ಅಪಾಯಕಾರಿ ವಿದ್ಯುತ್ ತಂತಿ, ಕಂಬಗಳು ಇದ್ದರೇ ಕರೆ ಮಾಡಿ ದೂರು ಸಲ್ಲಿಸಿ. ತಕ್ಷಣ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರಾಣಾಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸುತ್ತಾರೆ. ಜತೆಗೆ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿಕೊಟ್ಟು ಅವರಿಂದ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.

    ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ದೂರು ಕೊಡಲು ಮತ್ತು ಪರಿಹಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಮಹಿಳಾ ಸಂಘಟನೆ ಅಧ್ಯಕ್ಷರೊಬ್ಬರು ಮನವಿ ಮಾಡಿದರು. ಅದಕ್ಕೆ ಉತ್ತರಿಸಿದ ಬಿ. ದಯಾನಂದ್, ಮಹಿಳೆಯರ ಕುಂದುಕೊರತೆ ಮತ್ತು ಅವರ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಮಹಿಳಾ ಸಂಘಟನೆ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಪ್ರತ್ಯೇಕ ಸಭೆ ನಡೆಸಲು ಚಿಂತನೆ ನಡೆದಿದೆ. ಶೀಘ್ರದಲ್ಲಿಯೇ ಸಭೆ ಕರೆಯುವುದಾಗಿ ತಿಳಿಸಿದರು. ಪ್ರಸ್ತುತ ನಗರದ 112 ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ದೂರು ಆಲಿಸಲು ತಲಾ ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಹೊಸದಾಗಿ 6 ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿ ಇರುವುದಾಗಿ ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.
    ಮಾಸಿಕ ಸಭೆಯಲ್ಲಿ ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್, ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಅನಿಲಾ ಹದ್ದಣ್ಣನವರ್ ಮತ್ತು ಬಿಬಿಪಿಎಂ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಂಡೇ ಬಜಾರ್‌ನಲ್ಲಿ ಸಂಚಾರ ಬಂದ್?

    ನಗರದ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿ ಪ್ರತಿ ಭಾನುವಾರ ನಡೆಯುವ ಸಂಡೇ ಬಜಾರ್‌ನಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ತುರ್ತು ಸೇವೆ ಒದಗಿಸುವ ಆಂಬುಲೆನ್ಸ್ ಇನ್ನಿತರ ಸಂದರ್ಭದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಂಡೇ ಬಜಾರ್‌ಗೆ ಅವಕಾಶ ಕೊಟ್ಟರೆ ಪ್ರತಿ ಭಾನುವಾರ ಬಿ.ವಿ.ಕೆ. ಅಯ್ಯಂಗರ್ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡುವಂತೆ ಸ್ಥಳೀಯರು ಮನವಿ ಮಾಡಿದರು. ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಡಾ.ಅನಿತಾ ಹದ್ದಣ್ಣನವರ್‌ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts