More

    ಜಿಲ್ಲಾ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ; ಸ್ವಾಭಿಮಾನಿ ಸಭೆಯಲ್ಲಿ ಕೈ ನಡೆಗೆ ಆಕ್ರೋಶ

    ಹಾವೇರಿ: ಮಾಜಿ ಸಚಿವ ರುದ್ರಪ್ಪ ಲಮಾಣಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಸೇರಿದಂತೆ ಇತರ 8 ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದ ವಿರುದ್ಧ ‘ಸ್ವಾಭಿಮಾನಿ ಸಭೆ’ ಮೂಲಕ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಬೆಂಬಲಿಗರ ಒತ್ತಾಸೆ ಮೇರೆಗೆ ಎಂ.ಎಂ.ಹಿರೇಮಠ ಪಕ್ಷೇತರರಾಗಿ ಸ್ಪರ್ಧಿಸಲು ಸಜ್ಜಾಗಿದ್ದು, ಎರಡು ದಿನದಲ್ಲಿ ಮತ್ತೊಂದು ಸಭೆ ಕರೆದು ನಿರ್ಧಾರ ಪ್ರಕಟಿಸಲು ತೀರ್ಮಾನಿಸಿದ್ದಾರೆ.
    ನಗರದ ಹಾನಗಲ್ಲ ರಸ್ತೆಯ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ‘ಸ್ವಾಭಿಮಾನಿ ಸಭೆ’ಯಲ್ಲಿ ಮೀಸಲು ಕ್ಷೇತ್ರಕ್ಕೆ ಟಿಕೆಟ್‌ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದ ಎಂ.ಎಂ.ಹಿರೇಮಠ, ಶಿವಕುಮಾರ ತಾವರಗಿ, ಈರಪ್ಪ ಲಮಾಣಿ, ಚಂದನರಾಣಿ ದೊಡ್ಡಮನಿ, ಜಿ.ಬಿ.ದೇವರಮನಿ ಸೇರಿದಂತೆ ಒಟ್ಟು 9 ಆಕಾಂಕ್ಷಿಗಳು ಹಾಗೂ ಅವರ ನೂರಾರು ಬೆಂಬಲಿಗರು ಪಾಲ್ಗೊಂಡು ಬಂಡಾಯ ಸ್ಪರ್ಧೆಗೆ ತೀರ್ಮಾನಿಸಿದರು.
    ಸಭೆಯ ಆರಂಭದಿಂದ ಅಂತ್ಯದವರೆಗೂ ಕಾಂಗ್ರೆಸ್ ಪಕ್ಷದ ಧೋರಣೆ ವಿರುದ್ಧ ಮುಖಂಡರಿಂದ ಆಕ್ರೋಶದ ಮಾತುಗಳು ಕೇಳಿ ಬಂದವು. ಪಕ್ಷಕ್ಕಾಗಿ ದುಡಿದವರಿಗೆ ಮಣೆಹಾಕದೇ ಪಕ್ಷ ವಿರೋಧಿ ಚಟುವಟಿಕೆ ನಡೆಸುವ, ಪಕ್ಷಕ್ಕೆ ಯಾವುದೇ ಕೊಡುಗೆ ಕೊಟ್ಟಿರದ, ಪಕ್ಷಕ್ಕೆ ನಷ್ಟ ಉಂಟು ಮಾಡಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿಗೆ ಟಿಕೆಟ್ ಕೊಟ್ಟಿರುವುದು ಸರಿಯಲ್ಲ ಎಂದು ಹಲವು ಮುಖಂಡರು ಬಹಿರಂಗವಾಗಿ ಆರೋಪಿಸಿದರು.
    ಹೈಕಮಾಂಡ್ ಕೂಡಲೇ ರುದ್ರಪ್ಪ ಬದಲು ಎಂ.ಎಂ.ಹಿರೇಮಠ ಅವರಿಗೆ ಟಿಕೆಟ್ ಘೋಷಿಸಬೇಕು. ಇಲ್ಲವಾದಲ್ಲಿ ಪಕ್ಷೇತರರಾಗಿ ಹಿರೇಮಠ ಅವರು ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಹಿರೇಮಠ ಅವರೂ ಒಪ್ಪಿಗೆ ಸೂಚಿಸಿದ್ದು, ಎರಡು ದಿನಗಳಲ್ಲಿ ಮತ್ತೊಂದು ಸಭೆ ಕರೆದು ಚರ್ಚಿಸಿ ಘೋಷಿಸುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಸಭೆಯಲ್ಲಿ ಸೋಮಣ್ಣ ಕದಮನಹಳ್ಳಿ, ಉಡಚಪ್ಪ ಮಾಳಗಿ, ಸುರೇಶ ಚಕ್ರವರ್ತಿ, ಮತ್ತಿತರರು ಪಾಲ್ಗೊಂಡಿದ್ದರು.
    ಹಿಂದೆ ಸರಿಯುವ ಮಾತೇ ಇಲ್ಲ..
    ಪ್ರಾಮಾಣಿಕವಾಗಿ ದುಡಿದ ನನ್ನನ್ನು ಪಕ್ಷ ಕಡೆಗಣಿಸಿದೆ. ನನಗೆ ಅಧಿಕಾರ ಮುಖ್ಯವಲ್ಲ. ನೀವು ಮುಖ್ಯ. ಸದಾ ಕಾಲ ನಿಮ್ಮೊಂದಿಗೆ ಇರುತ್ತೇನೆ. ನನ್ನ ಬಳಿ ಇರುವ ಬೇಡ ಜಂಗಮ ಪ್ರಮಾಣ ಪತ್ರ ರದ್ದಾಗುತ್ತದೆ ಎಂದು ಕೆಲವರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಅದು ಯಾವುದೇ ಕಾರಣಕ್ಕೂ ರದ್ದಾಗಲ್ಲ. ಹಾಗಾಗಿ, ಹಿಂದೆ ಸರಿಯುವ ಮಾತೇ ಇಲ್ಲ. ಯಾವುದೇ ಆಮಿಷಕ್ಕೂ ಬಗ್ಗಲ್ಲ ಎಂದು ಎಂ.ಎಂ.ಹಿರೇಮಠ ಹೇಳಿದರು.
    ‘ಅರ್ಧ ಖರ್ಚು ಕೊಡುವೆ’
    2008ರಲ್ಲಿ ನನ್ನ ಪತ್ನಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ರುದ್ರಪ್ಪ ಲಮಾಣಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷ ಸೋಲಿಗೆ ಕಾರಣವಾಗಿದ್ದರು. ಈ ಬಾರಿಯೂ ಪ್ರಾಮಾಣಿಕ ಕಾರ್ಯಕರ್ತರಿಗೆ ಪಕ್ಷ ಅನ್ಯಾಯ ಮಾಡಿದೆ. ಎಂ.ಎಂ.ಹಿರೇಮಠರು ಪಕ್ಷೇತರರಾಗಿ ಸ್ಪರ್ಧಿಸಿದರೆ ನಾನು ಅವರ ಅರ್ಧ ಖರ್ಚನ್ನು ಭರಿಸುತ್ತೇನೆ ಎಂದು ಜಗದೀಶ ಬೆಟಗೇರಿ ಘೋಷಿಸಿದರು.
    ‘ನಾವೇನು ಕೈಗೆ ಬಳೆ ತೊಟ್ಟಿಲ್ಲ’
    ಹಾವೇರಿ ತಾಲೂಕು ಬ್ರಿಟೀಷರ ಆಡಳಿತದಂತಾಗಿದೆ. ಕಾಂಗ್ರೆಸ್‌ನಲ್ಲಿ ದುರಂತ ನಾಯಕರಿದ್ದಾರೆ. ನಮ್ಮದೇ ಪಕ್ಷದ ಶಾಸಕ, ಜಿಪಂ, ತಾಪಂ ಅಭ್ಯರ್ಥಿಗಳನ್ನು ಸೋಲಿಸಿದವರಿದ್ದಾರೆ. ಪಕ್ಷದಿಂದ ಉಚ್ಛಾಟನೆಯಾಗಿದ್ದ ರುದ್ದರಪ್ಪ ಅವರಿಗೆ 2013ರಲ್ಲಿ 2018ರಲ್ಲಿ ಪಕ್ಷ ಟಿಕೆಟ್ ಕೊಟ್ಟಿದೆ. ಮತ್ತೆ ಅವರು ಶಾಸಕರಾದರೆ ಪಕ್ಷ ನಿರ್ಣಾಮವಾಗುತ್ತದೆ. ಗುಪ್ತಚರ ವರದಿ ಪ್ರಕಾರ ಅವರಿಗೆ ಜನ ಬೆಂಬಲವಿಲ್ಲ. ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಯಾವುದೇ ಕಾರಣಕ್ಕೆ ಹಿಂದೆ ಸರಿಯುವುದಿಲ್ಲ ಎಂದು ಈರಪ್ಪ ಲಮಾಣಿ ಹೇಳಿದರು.
    ಕೋಟ್
    ನಾನು 2008ರಿಂದ ಸಕ್ರಿಯ ಕಾರ್ಯಕರ್ತನಾಗಿದ್ದು ಈ ಬಾರಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದ ಪಕ್ಷ, ಮತ್ತೆ ಮಾಜಿ ಸಚಿವರಿಗೆ ಮಣೆ ಹಾಕಿದೆ. ಸಾಮಾಜಿಕ ನ್ಯಾಯ ಎಲ್ಲಿದೆ. ರಾಜಕೀಯ ವಿಕೇಂದ್ರೀಕರಣ ಆಗಬೇಕು. ಎಲ್ಲರಿಗೂ ಅವಕಾಶ ನೀಡಬೇಕು. ಎಲ್ಲ ಆಕಾಂಕ್ಷಿಗಳ ನಿರ್ಧಾರಕ್ಕೆ ನಾನು ಬದ್ಧ.
    ಶಿವಕುಮಾರ ತಾವರಗಿ, ನಿವೃತ್ತ ಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts