More

    ಕಾಂಗ್ರೆಸ್‌ಗೆ ಹೆದರಿ ಲಿಂಬಾವಳಿ ಬಂಧಿಸಲು ಆಗಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

    ಶಿವಮೊಗ್ಗ: ಕಾಂಗ್ರೆಸ್‌ನವರು ಅಭಿಯಾನ ಮಾಡುತ್ತಾರೆಂಬ ಕಾರಣಕ್ಕೆ ಪೊಲೀಸರು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಬಂಧಿಸಲು ಆಗುವುದಿಲ್ಲ. ಕಾನೂನು, ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ವಿಚಾರದ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದಲ್ಲಿ ಆರು ಜನರ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದ್ದು ಕಾಂಗ್ರೆಸ್‌ನವರ ಭಯದಿಂದ ಪೋಲಿಸರು ಯಾರನ್ನು ಬಂಧಿಸಲ್ಲ ಅಥವಾ ನಾವು ಹೇಳುತ್ತೇವೆಂದು ಬಂಧಿಸದೇ ಬಿಡಲ್ಲ ಎಂದರು.
    ಕಾನೂನು ಪ್ರಕಾರ ತಪ್ಪು ಮಾಡಿದ್ದರೆ ಯಾರೇ ಆದರೂ ಬಂಧನ ಆಗುತ್ತದೆ. ತನಿಖೆ ವೇಳೆ ನಿರಪರಾಧಿ ಎಂದು ಗೊತ್ತಾದರೆ ಬಂಧಿಸುವುದಿಲ್ಲ. ಅವರಿಬ್ಬರ ನಡುವೆ ಏನು ವ್ಯವಹಾರಗಳಿವೆ ಎಂಬುದು ತಿಳಿದಿಲ್ಲ. ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ತನಿಖಾ ಹಂತದಲ್ಲಿ ಆ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಹೇಳಿದರು.
    ಅರವಿಂದ ಲಿಂಬಾವಳಿ ಮೇಲೆ ಎಫ್‌ಐಆರ್‌ನಲ್ಲಿ ಏನೇ ಇರಬಹುದು. ಅವರು ಶಾಸಕರಾಗಿರಲಿ, ಮಂತ್ರಿಯಾಗಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ಯಾರೋ ಬರೆದಿಟ್ಟಿದ್ದಾರೆ ಏಕಾಏಕಿ ಬಂಧಿಸಲು ಆಗುವುದಿಲ್ಲ. ಪೊಲೀಸರಿಗೂ ಕೆಲವೊಂದು ಕಾನೂನು ತೊಡಕುಗಳು ಇವೆ. ಕೃತ್ಯದಲ್ಲಿ ಭಾಗಿಯಾಗಿದ್ದರೆ ಕಾನೂನಿನಂತೆ ತಪ್ಪಿತಸ್ಥರಾಗಿದ್ದರೆ ಕ್ರಮ ಆಗುತ್ತದೆ ಎಂದರು.
    ಹಿರಿಯ ಅಧಿಕಾರಿಗಳ ಸಂಬಳದಲ್ಲಿ ವ್ಯತ್ಯಾಸ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವರು, ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವರದಿ ಪ್ರಕಾರ ವ್ಯತ್ಯಾಸ ಇರುವುದು ಸಹಜ. ಔರಾದ್ಕರ್ ವರದಿಯಿಂದ ಶೇ.80ರಷ್ಟು ಪೊಲೀಸ್ ಸಿಬ್ಬಂದಿಗೆ ಲಾಭ ಸಿಕ್ಕಿದೆ. ಅನ್ಯಾಯ ಆದವರಿಗೆ ಭತ್ಯೆಯಲ್ಲಿ ಸರಿಪಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts