More

    ಬ್ಯಾಲೆಟ್‌ನಲ್ಲಿ ಕಾಂಗ್ರೆಸ್, ಇವಿಎಂನಲ್ಲಿ ಬಿಜೆಪಿ ; ಸಾಸಲು ಸತೀಶ್ ಭಾವಚಿತ್ರಕ್ಕೆ ಕೊಕ್ 

    ಶಿರಾ: ಉಪಚುನಾವಣೆ ಸೋಲಿನ ನಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಮುಂದಾಗಿದ್ದು, ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ ಗ್ರಾಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖಂಡರ ಸಮಾಗಮವಾಗಿತ್ತು. ವೇದಿಕೆಯ ಹಿಂಬದಿಯಲ್ಲಿದ್ದ ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸತೀಶ್ ಭಾವಚಿತ್ರ ಇಲ್ಲದಿದ್ದುದು ಹೆಚ್ಚು ಚರ್ಚೆಗೆ ಕಾರಣವಾಯಿತು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭಕ್ಕೆ ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ಆಶಯದೊಂದಿಗೆ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಕಷ್ಟು ಕಾರ್ಯಕ್ರಮ ಗ್ರಾಪಂ ಮೂಲಕ ಅನುಷ್ಠಾನವಾಗುತ್ತಿದ್ದು ನೂತನ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಉಪಚುನಾವಣೆ ಸೋಲಿನ ನಂತರ ಗ್ರಾಪಂ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಪಕ್ಷಕ್ಕೆ ಚೈತನ್ಯ ನೀಡಲಾಗಿದೆ. ನಿಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಮಾಡಿಕೊಳ್ಳಿ. ಸ್ವಾರ್ಥಕ್ಕೆ ಬಳಸಿದರೆ, ಇದೇ ಮೊದಲು, ಇದೇ ಕೊನೆ ಎನ್ನುವಂತಾಗುತ್ತದೆ ಎಂದು ಸಲಹೆ ನೀಡಿದರು.

    ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಜವಾಬ್ದಾರಿಯುತ ಖಾತೆ, ಹತ್ತಾರು ಉಪಸಮಿತಿಗಳ ಅಧ್ಯಕ್ಷ ಸ್ಥಾನದಲ್ಲಿದ್ದ ಟಿ.ಬಿ.ಜಯಚಂದ್ರ ಜನರೊಟ್ಟಿಗೆ ಬೆರೆಯಲು ಸಮಯ ಸಿಗುತ್ತಿರಲಿಲ್ಲ. ಆದರೆ, ಅವರ ಅಭಿವೃದ್ಧಿ ರಾಜ್ಯಕ್ಕೆ ಮಾದರಿ. ಇಂದು ಉದ್ಟಾಟನೆಗೊಳ್ಳುತ್ತಿರುವ ತಾಯಿ ಮಕ್ಕಳ ಆಸ್ಪತ್ರೆ ನಿನ್ನೆ ಮೊನ್ನೆ ಆಗಿದ್ದಾ? ಅದು ಜಯಚಂದ್ರ ಸಾಧನೆ ಅಲ್ಲವಾ? ಎಂದು ಪ್ರಶ್ನಿಸಿದರು. ಜನಪರ ಕೆಲಸ ಮಾಡುವವರನ್ನು ಗೆಲ್ಲಿಸಿದರೆ, ಅಭಿವೃದ್ಧಿ ಆಗುತ್ತದೆ. ಯಾವುದೋ ಅಂಶಕ್ಕೆ ಸೋಲಿಸಿದರೆ, ಅಭಿವೃದ್ಧಿ ಅಲ್ಲಿಗೇ ನಿಲ್ಲುತ್ತದೆ ಎಂದರು.

    ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಉಪಚುನಾವಣೆಯಲ್ಲಿ ನಾವು ಸೋತಿದ್ದರೂ ಗ್ರಾಪಂ ಚುನಾವಣೆಯಲ್ಲಿ ಶಕ್ತಿ ಪಡೆದಿದ್ದೇವೆ, ಕ್ಷೇತ್ರದ 35 ಪಂಚಾಯಿತಿಗಳಲ್ಲಿ 22ರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಇದೆಲ್ಲದರ ಹಿಂದೆ ಮತದಾನ ಹೇಗಾಯಿತು ಎನ್ನುವುದು ಮುಖ್ಯವಾಗಿದೆ. ಬ್ಯಾಲೆಟ್ ಪೇಪರ್‌ನಲ್ಲಿ ಕಾಂಗ್ರೆಸ್ ಗೆದ್ದಿದೆ, ಇವಿಎಂ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂದು ಅನುಮಾನಿಸಿದರು.
    ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಆರ್.ನಾರಾಯಣ್, ಎಸ್.ಷಫಿ ಅಹಮದ್, ಸ್ಥಳೀಯ ಮುಖಂಡರಾದ ಎಂ.ಆರ್. ಶಶಿಧರ, ನರಸಪ್ಪ, ಡಿ.ಸಿ.ಅಶೋಕ್, ಅಜಯ ಕುಮಾರ್, ಶೇಷಾನಾಯ್ಕ, ಮಹಿಳಾ ಘಟಕದ ಶೋಭಾ ರಾಘವೇಂದ್ರ ಇದ್ದರು.

    ಕಾಡುಗೊಲ್ಲರ ಜತೆ ಮುಂದುವರಿದ ಮುನಿಸು!?: ಉಪಚುನಾವಣೆ ಸೋಲಿನ ನಂತರ ಕ್ಷೇತ್ರದಲ್ಲಿ ನಡೆದ ಪಕ್ಷದ ಮೊದಲ ಸಾರ್ವಜನಿಕ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ಗೈರು ಎದ್ದು ಕಾಣಿಸಿತು. ಶಿರಾ ಕ್ಷೇತ್ರದಲ್ಲಿ ಕಾಡುಗೊಲ್ಲರು ಹಾಗೂ ಟಿ.ಬಿ.ಜಯಚಂದ್ರ ನಡುವಿನ ಮುನಿಸು ಮುಂದುವರಿದಿದ್ದು ಉದ್ದೇಶಪೂರ್ವಕವಾಗಿಯೇ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರೂ ಡಾ.ಸತೀಶ್ ಭಾವಚಿತ್ರವನ್ನು ವೇದಿಕೆಯಲ್ಲಿ ಬಳಸಿಲ್ಲ ಎಂಬ ಮಾತು ಗಳು ಕೇಳಿಬಂದವು. ಸತೀಶ್ ಫೋಟೋ ಬಳಸದ ಕಾಂಗ್ರೆಸ್ ಮುಖಂಡರ ನಿಲುವಿನ ಬಗ್ಗೆ ಶಿರಾ ತಾಲೂಕು ಕಾಡುಗೊಲ್ಲ ಜನಾಂಗ ಎಂಬ ಫೇಸ್‌ಬುಕ್‌ಪೇಜ್‌ನಲ್ಲಿಯೂ ಪೋಸ್ಟ್ ಹಾಕಿದ್ದು ಚರ್ಚೆ ಆರಂಭವಾಗಿದೆ.

    ‘ಶಿರಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಲೋಡ್‌ಗಟ್ಟಲೆ ಆಶ್ವಾಸನೆ ನೀಡಿದ್ದೇವೆ, ಅದರಲ್ಲಿ ಒಂದನ್ನೂ ಪೂರೈಸಲು ಆಗುವುದಿಲ್ಲ. ಮುಂದಿನ ಬಾರಿ ಶಿರಾ ಜನ ತಮ್ಮನ್ನು ಕ್ಷೇತ್ರಕ್ಕೆ ಬಿಟ್ಟುಕೊಳ್ಳುವುದಿಲ್ಲ’ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಇತ್ತೀಚೆಗೆ ಮಾತನಾಡುವ ಸಂದರ್ಭ ದಲ್ಲಿ ಹೇಳಿದ್ದಾರೆ. ಇದು ಇಂದಿನ ಬಿಜೆಪಿ ಪರಿಸ್ಥಿತಿ.
    ಕೆ.ಎನ್.ರಾಜಣ್ಣ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts