More

    ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಆದ ಬೆನ್ನಲ್ಲೇ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

    ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಮೆಂಟರ್ ಆಗಿ ನೇಮಕಗೊಂಡಿರುವ ಬೆನ್ನಲ್ಲೇ ಎಂಎಸ್ ಧೋನಿ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷದ ದೂರು ದಾಖಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯ ಸಂಜೀವ್ ಗುಪ್ತಾ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ಗೆ ಪತ್ರ ಬರೆದಿದ್ದು, ಧೋನಿ ನೇಮಕಾತಿ ಸ್ವಹಿತಾಸಕ್ತಿ ಸಂಘರ್ಷ ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

    ಲೋಧಾ ಸಮಿತಿ ಶಿಾರಸಿನಲ್ಲಿರುವ ಸ್ವಹಿತಾಸಕ್ತಿ ಸಂಘರ್ಷ ನಿಯಮಾವಳಿಯ ಪ್ರಕಾರ, ಒಬ್ಬರು ಒಂದೇ ಹುದ್ದೆ ಹೊಂದಿರಬೇಕು. ಧೋನಿ ಐಪಿಎಲ್‌ನಲ್ಲಿ ಚೆನ್ನೈಸೂಪರ್‌ಕಿಂಗ್ಸ್ ತಂಡದ ನಾಯಕರೂ ಆಗಿದ್ದು, ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಆಗಿ ನೇಮಿಸಿರುವುದರಿಂದ ಅವರಿಗೆ 2 ಹುದ್ದೆ ನೀಡಿದಂತಾಗಿದೆ ಎಂದು ದೂರಿದ್ದಾರೆ. ಈ ಸಂಬಂಧ ಕಾನೂನು ಸಲಹೆ ಪಡೆಯಲಾಗುವುದು ಮತ್ತು ದೂರಿನ ಮಾನ್ಯತೆ ಪರಿಶೀಲಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಒಂದು ತಂಡದ ನಾಯಕರಾಗಿರುವ ಧೋನಿ, ಮತ್ತೊಂದು ತಂಡಕ್ಕೆ ಮೆಂಟರ್ ಆಗಿರುವುದು ಪ್ರಶ್ನೆಗಳು ಏಳಲು ಕಾರಣವಾಗಿವೆ. ಆದರೆ ಇದನ್ನು ಸ್ವಹಿತಾಸಕ್ತಿ ಸಂಘರ್ಷವೆಂದು ಪರಿಗಣಿಸಬೇಕೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಟಿ20 ವಿಶ್ವಕಪ್ ತಂಡಕ್ಕೆ ಧೋನಿ ಮೆಂಟರ್ ಆಗಿದ್ದರೂ, ಆಡುವ ಬಳಗದ ಆಯ್ಕೆಯಲ್ಲಿ ಅವರ ಪಾತ್ರ ಇರುವುದಿಲ್ಲ ಮತ್ತು ಹಾಲಿ ವರ್ಷದ ಐಪಿಎಲ್ ಮುಗಿದ ಬಳಿಕ ಧೋನಿ 2022ರ ಐಪಿಎಲ್‌ನಲ್ಲಿ ಆಡುವ ಬಗ್ಗೆಯೂ ಖಚಿತತೆ ಇಲ್ಲ. ಹೀಗಾಗಿ ಈ ದೂರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದೂ ಮಂಡಳಿಯ ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಸಂಜೀವ್ ಗುಪ್ತಾ ಈ ಮುನ್ನ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ವಿರುದ್ಧವೂ ಸ್ವಹಿತಾಸಕ್ತಿ ಸಂಘರ್ಷದ ದೂರುಗಳನ್ನು ದಾಖಲಿಸುವ ಮೂಲಕ ಸುದ್ದಿಯಾಗಿದ್ದರು.

    ಟಿ20 ವಿಶ್ವಕಪ್ ತಂಡಕ್ಕೆ ಧೋನಿ ಮೆಂಟರ್, ಎಲ್ಲರನ್ನೂ ಒಪ್ಪಿಸಿದ್ದು ಬಿಸಿಸಿಐ ಕಾರ್ಯದರ್ಶಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts