More

    ರಸ್ತೆಗೇ ಚೆಲ್ಲುತ್ತಿದೆ ಕಾಂಕ್ರೀಟ್

    ಮಂಗಳೂರು: ಬೇಸಿಗೆಯಲ್ಲಿ ಕಟ್ಟಡ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳು ಬಿರುಸು ಪಡೆಯುತ್ತವೆ. ಮಳೆ ಇಲ್ಲದಿರುವುದರಿಂದ ಮುಖ್ಯವಾಗಿ ಕಾಂಕ್ರೀಟ್‌ಗೆ ಸಂಬಂಧಿಸಿದ ಕೆಲಸಗಳು ಈ ಸಮಯದಲ್ಲಿ ಹೆಚ್ಚು ನಡೆಯುತ್ತವೆ. ಆ ಕಾರಣಕ್ಕಾಗಿಯೇ ರಸ್ತೆಯಲ್ಲಿ ರೆಡಿಮಿಕ್ಸ್ ಕಾಂಕ್ರೀಟ್ ಲಾರಿಗಳ ಸಂಚಾರ ಹೆಚ್ಚಾಗಿದ್ದು, ಪ್ರಸ್ತುತ ಇಂತಹ ಲಾರಿಗಳಿಂದಲೇ ಅಪಾಯ ಉಂಟಾಗುತ್ತಿದೆೆ.

    ನಿಗದಿತ ಅವಧಿಯ ಒಳಗಾಗಿ ಕಾಂಕ್ರೀಟ್ ಕೊಂಡೊಯ್ಯಬೇಕಾಗಿರುವುದರಿಂದ ಇಂತಹ ಆರ್‌ಎಂಸಿ ಲಾರಿಗಳು ವೇಗವಾಗಿ ಸಂಚರಿಸುತ್ತವೆ. ಸಮತಟ್ಟಾದ ರಸ್ತೆಗಿಂತಲೂ ಏರುರಸ್ತೆಯಲ್ಲಿ ಸಾಗುವ ಲಾರಿಗಳಿಂದ ಕಾಂಕ್ರೀಟ್ ರಸ್ತೆಗೆ ಚೆಲ್ಲುತ್ತವೆ. ಇದು ಬೈಕ್, ಸ್ಕೂಟರ್‌ಗಳಿಗೆ ಹೆಚ್ಚು ಅಪಾಯಕಾರಿಯಾಗಿದ್ದು, ಜಲ್ಲಿಕಲ್ಲು ಸ್ಕಿಡ್ ಆಗಿ ಸವಾರರು ರಸ್ತೆಗೆ ಬೀಳುವ ಸಾಧ್ಯತೆಯೂ ಇದೆ. ಲಾರಿಯಿಂದ ಕಾಂಕ್ರೀಟ್ ಮಿಕ್ಸ್ ಚೆಲ್ಲುವಾಗ ಹಿಂದಿನಿಂದ ಬರುವ ವಾಹನಗಳಿಗೂ ಅಪಾಯವಾಗುವ ಸಾಧ್ಯತೆಯಿದೆ.

    ರಸ್ತೆಯಲ್ಲಿ ಗಟ್ಟಿಯಾಗುವ ಕಾಂಕ್ರೀಟ್: ರಸ್ತೆಯಲ್ಲಿ ಕಾಂಕ್ರೀಟ್‌ಬಿದ್ದ ತಕ್ಷಣ ಅದನ್ನು ಅಲ್ಲಿಂದ ತೆರವುಗೊಳಿಸಿದರೆ ಅಪಾಯವಿಲ್ಲ. ಆದರೆ ಚಾಲಕರಿಗೆ ಕಾಂಕ್ರೀಟ್ ರಸ್ತೆಗೆ ಬಿದ್ದಿರುವುದು ಗಮನಕ್ಕೆ ಬರುವುದಿಲ್ಲ. ಹಾಗಾಗಿ ಅದು ರಸ್ತೆಯಲ್ಲೇ ಬಾಕಿಯಾಗಿ ಒಂದು ದಿನದ ಬಳಿಕ ಒಣಗಿ ಗಟ್ಟಿಯಾಗುತ್ತದೆ. ಬಳಿಕ ಅದನ್ನು ರಸ್ತೆಯಿಂದ ತೆಗೆಯಲೂ ಸಾಧ್ಯವಾಗುವುದಿಲ್ಲ. ಇದು ಮುಂದಕ್ಕೆ ಅಪಾಯಕಾರಿಯಾಗುತ್ತದೆ. ಕೆಲವು ಕಡೆಗಳಲ್ಲಿ ಒಂದರಿಂದ ಎರಡು ಇಂಚಿನಷ್ಟು ದಪ್ಪದಲ್ಲಿ ಕಾಂಕ್ರೀಟ್ ಬೀಳುತ್ತದೆ. ಅದು ಗಟ್ಟಿಯಾದ ಬಳಿಕ ದ್ವಿಚಕ್ರವಾಹನಗಳು ತಪ್ಪಿ ಅದರ ಮೇಲೆ ಸಂಚರಿಸಿದರೆ ಬ್ಯಾಲೆನ್ಸ್ ಕಳೆದುಕೊಂಡು ಬೀಳುವ ಸಾಧ್ಯತೆಯೂ ಇರುತ್ತದೆ. ವಿಚಾರ ಸಣ್ಣದಾದರೂ ಅದರಿಂದ ಆಗಬಹುದಾದ ಅಪಾಯ ಮಾತ್ರ ಭೀಕರ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

    ರಸ್ತೆ ಬದಿಯಲ್ಲೇ ಕ್ಲೀನಿಂಗ್: ಕಾಂಕ್ರೀಟ್ ಚೆಲ್ಲಿಕೊಂಡು ಹೋಗುವುದು ಒಂದು ವಿಧವಾದರೆ, ದಿನದ ಕೊನೆಗೆ ಮಿಕ್ಸರ್ ಲಾರಿಯನ್ನು ರಸ್ತೆ ಬದಿಯಲ್ಲೇ ಸ್ವಚ್ಛಗೊಳಿಸುವುದೂ ಕೆಲವೆಡೆ ಕಂಡು ಬರುತ್ತಿದೆ. ಕಾಂಕ್ರೀಟ್ ತುಂಬಿಸುವ ಟ್ಯಾಂಕ್‌ಗೆ ನೀರು ಹಾಯಿಸಿ ಅದರೊಳಗಿನ ಅಳಿದುಳಿದ ಕಾಂಕ್ರೀಟನ್ನು ರಸ್ತೆ ಬದಿಯಲ್ಲೇ ಸುರಿಯುತ್ತಾರೆ. ಈ ನೀರು ರಸ್ತೆಯಲ್ಲೆಲ್ಲ ಹರಿದು ಗಟ್ಟಿಯಾಗುತ್ತದೆ. ಇದು ಕೂಡ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

    ಕಾಂಕ್ರೀಟ್ ಮಿಕ್ಸರ್ ಲಾರಿಗಳು ರಸ್ತೆಯಲ್ಲೇ ಕಾಂಕ್ರಿಟ್ ಚೆಲ್ಲುತ್ತಿರುವ ವಿಚಾರ ಗಮನಕ್ಕೆ ಬಂದಿಲ್ಲ. ಇಂತಹ ಘಟನೆ ನಡೆದ ತಕ್ಷಣ ಸಾರ್ವನಿಕರು ಫೋಟೋ, ಲಾರಿ ಸಂಖ್ಯೆಯನ್ನು ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದರೆ ದಂಡ ವಿಧಿಸುವ, ಅವರಿಂದಲೇ ಸ್ವಚ್ಛಗೊಳಿಸಲು ಸಾಧ್ಯವಿದೆ. ಸಾರ್ವಜನಿಕರ ಸಹಕಾರ ಅಗತ್ಯ.
    ಎಂಎ ನಟರಾಜ್ ಎಸಿಪಿ ಟ್ರಾಫಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts