More

    ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸಮಾರೋಪ ನಿರಂತರ ಅಧ್ಯಯನ ಮಾಡಿ

    ಜಮಖಂಡಿ: ಕೌಟುಂಬಿಕ ಪ್ರೋತ್ಸಾಹ, ಆರ್ಥಿಕ ಸದೃಢತೆ ಮತ್ತು ಮಾನಸಿಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಹೇಳಿದರು.

    ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ನೂತನ ಶಿಕ್ಷಣ ನೀತಿ 2020 ಅನುಷ್ಠಾನದಲ್ಲಿನ ಸವಾಲುಗಳು ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

    ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನಶೀಲರಾಗಬೇಕು. ಸಾಮಾಜಿಕ ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು. ಸರ್ಕಾರದ ಮೇಲೆ ಅವಲಂಬಿತವಾಗದೆ ಸರ್ಕಾರದ ಒಂದು ಅಂಗವಾಗಿ ತಾವೂ ಕಾರ್ಯ ನಿರ್ವಹಿಸಬೇಕು ಎಂದರು.

    ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ. ಅದನ್ನು ಮನಗಂಡು ಜ್ಞಾನವನ್ನು ಸಂಪಾದಿಸಿಕೊಂಡು ತಮ್ಮ ಗುರಿ ಮುಟ್ಟಬೇಕು ಎಂದು ಸಲಹೆ ನೀಡಿದರು.

    ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಗುರುತಿಸಿಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಗುರಿ ಅಚಲವಾಗಿರಬೇಕು. ತಾವು ಅಂಕಗಳ ಹಿಂದೆ ಹೋಗದೆ ಸಾಮಾಜಿಕ ಜ್ಞಾನ ಬೆಳೆಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದರು.

    ಕೌಶಲ, ಸಮಯ ಪ್ರಜ್ಞೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಗುರಿ ಮುಟ್ಟಬೇಕಾದರೆ ಕಠಿಣ ಪರಿಶ್ರಮ ಅಗತ್ಯ ಎಂದರು.

    ಖಾಲಿ ಬಿದ್ದಿದ್ದ ಮಿನಿ ವಿಧಾನಸೌಧ ಕಟ್ಟಡದಲ್ಲಿ ದಿ.ಸಿದ್ದು ನ್ಯಾಮಗೌಡ ಅವರ ಸತತ ಪ್ರಯತ್ನ, ಅಂದಿನ ಕುಲಪತಿ ಡಾ. ಸಿದ್ದು ಆಲಗೂರ ಹಾಗೂ ಸಿಂಡಿಕೇಟ್ ಮಾಜಿ ಸದಸ್ಯ ಸಂದೀಪ ಬೆಳಗಲಿ ಅವರ ಸಹಕಾರದಿಂದ ರಾಣಿ ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ಸಾಧ್ಯವಾಯಿತು. ಇಂದು ಅಲ್ಲಿ ಹೊಸ ವಿವಿ ಸ್ಥಾಪನೆಯಾಗುವ ಹಂತ ತಲುಪಿದೆ ಎಂದರು.

    ರಾಣಿ ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಡಾ. ಮಲ್ಲಿಕಾರ್ಜುನ ಮರಡಿ ಮಾತನಾಡಿ, ಸ್ನಾತಕೋತ್ತರ ಅಧ್ಯಯನಕ್ಕಾಗಿ ದೂರದ ಗ್ರಾಮಾಂತರ ಪ್ರದೇಶದಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಸತಿ ನಿಲಯದ ಅವಶ್ಯಕತೆ ಇದೆ. ಕೂಡಲೇ ಒಂದು ವಸತಿ ನಿಲಯ ನಿರ್ಮಿಸಬೇಕು ಎಂದು ಅರಿಕೆ ಮಾಡಿದರು.

    ಸಿಂಡಿಕೇಟ್ ಸದಸ್ಯ ಕಿರಣಕುಮಾರ ದೇಸಾಯಿ ಮಾತನಾಡಿ, ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

    ವಿವಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ ಬನಸೋಡೆ ಪ್ರಾಸ್ತಾವಿಕ ಮಾತನಾಡಿದರು. ನೂತನ ಶಿಕ್ಷಣ ನೀತಿ 2020 ಅನುಷ್ಠಾನದಲ್ಲಿನ ಸವಾಲುಗಳ ಕುರಿತು ರಚಿಸಿದ ಪುಸ್ತಕ ಲೋಕಾರ್ಪಣೆಗೊಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ವಿತರಿಸಿದರು.

    ವೇದಿಕೆಯಲ್ಲಿ ಸಿಂಡಿಕೇಟ್ ಮಾಜಿ ಸದಸ್ಯರಾದ ಸಂದೀಪ ಬೆಳಗಲಿ, ರಮೇಶ ಸವದಿ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಮಾಳೇಶ ದೂತಗುಂಡಿ, ಸಂಗಮ್ಮ ಬಿ.ಜಿ. ಇದ್ದರು.

    ಸೌಮ್ಯಾ ಬಾಂಗಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಡಾ. ರವಿಕುಮಾರ ಬಿ.ಕೆ. ವಾರ್ಷಿಕ ವರದಿ ವಾಚಿಸಿದರು. ಜಬಿನಾ ಮೌಲ್ವಿ ಹಾಗೂ ದಯಾನಂದ ಹುಡೇದ ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕ ಡಾ. ರಮೇಶ ಸಂಗಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts