More

    ವಿಪತ್ತು ನಿರ್ವಹಣೆಗೆ ಗ್ರಾಪಂ ಮಟ್ಟದಲ್ಲಿ ತಂಡ: ಸಹಾಯಕ ಆಯುಕ್ತ ಹರ್ಷವರ್ಧನ್ ಮಾಹಿತಿ

    ವಿಜಯವಾಣಿ ಸುದ್ದಿಜಾಲ ಬಂಟ್ವಾಳ

    ಮಳೆಗಾಲದಲ್ಲಿ ನೆರೆ, ಗುಡ್ಡ ಕುಸಿತ ಮತ್ತಿತರ ಪ್ರಾಕೃತಿಕ ವಿಕೋಪಗಳು ನಡೆದಾಗ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಹಾಗೂ ಈ ಬಗ್ಗೆ ಸ್ಥಳೀಯಾಡಳಿತ ವಿಪತ್ತು ನಿರ್ವಹಣಾ ತಂಡದೊಂದಿಗೆ ಏನೇನು ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣೆಯ ಕಲ್ಪಿತ ಕಾರ್ಯಾಚರಣೆ ಬಂಟ್ವಾಳ ತಾಲೂಕಾಡಳಿತದ ವತಿಯಿಂದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಕೆ.ಅವರ ನೇತೃತ್ವದಲ್ಲಿ ಬುಧವಾರ ಪಾಣೆಮಂಗಳೂರಿನ ಭಯಂಕೇಶ್ವರ ದೇವಸ್ಥಾನದ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯಿತು.

    ವಿಪತ್ತು ನಿರ್ವಹಣಾ ತಂಡದವರು ಪ್ರಾತ್ಯಕ್ಷಿಕೆಯ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಹಾಯಕ ಆಯುಕ್ತ ಹರ್ಷವರ್ಧನ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 45 ದಿನಗಳಿಂದ ಪ್ರಾಕೃತಿಕ ವಿಕೋಪದ ಬಗ್ಗೆ ನಿರಂತರವಾಗಿ ಸಭೆಗಳು ನಡೆಯುತ್ತಿವೆ. ಪ್ರತಿ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ಪುರಸಭೆ ಹಾಗೂ ಗ್ರಾ.ಪಂ.ಮಟ್ಟದಲ್ಲಿ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ ಲಭ್ಯವಿರುವ ಸಂಪನ್ಮೂಲ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಯಾವ ರೀತಿ ಕಾರ್ಯ ನಿರ್ವಹಣೆ ಮಾಡಬೇಕು ಎನ್ನುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದರಂತೆ ಪ್ರತಿ ಗ್ರಾ.ಪಂ.ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ.

    ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ವಲಯಗಳನ್ನು ರಚಿಸಿಕೊಂಡು ಅಲ್ಲಿ ಅಗತ್ಯ ವಾಹನಗಳು, ಜೀವ ರಕ್ಷಕ ಸಾಧನಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಅದೇ ರೀತಿ ನದಿಯಲ್ಲಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರನ್ನು ಹೇಗೆ ಸುರಕ್ಷಿತವಾಗಿ ಒಂದು ದಡದಿಂದ ಇನ್ನೊಂದು ದಡ್ಡಕ್ಕೆ ಸಾಗಿಸಬೇಕು ಎನ್ನುವ ಪ್ರಾತ್ಯಕ್ಷಿಕೆಯನ್ನು ಪ್ರತಿ ತಾಲೂಕಿನಲ್ಲಿ ನಡೆಸಲಾಗುತ್ತಿದೆ. ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಾಲೂಕಾಡಳಿತ ಸರ್ವಸನ್ನದ್ಧವಾಗಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ಅರ್ಚನಾ ಡಿ.ಭಟ್, ಉಪತಹಸೀಲ್ದಾರ್ ದಿವಾಕರ ಮುಗುಳ್ಯ, ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬ್ಳೆ, ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈ, ಪುರಸಭೆ ಆರೋಗ್ಯಾಧಿಕಾರಿ ರತ್ನಪ್ರಸಾದ್, ಕಂದಾಯ ನಿರೀಕ್ಷಕರಾದ ವಿಜಯ್ ಆರ್., ಜನಾರ್ದನ ಜೆ., ತಾಲೂಕು ವಿಷಯ ನಿರ್ವಾಹಕ ವಿಶುಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಕರಿಬಸಪ್ಪ ನಾಯಕ್, ಯಶ್ವಿತ ಮಂಜುನಾಥ್, ಸದಾಶಿವ ಕೈಕಂಬ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಬಂಟ್ವಾಳ ಪುರಸಭೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts