More

    ಮುಲಾಜಿಗಾಗಿ ಸಾಲ ನೀಡಬೇಡಿ ; ಸೊಸೈಟಿಗಳಿಗೆ ಶಾಸಕ ರಮೇಶ್‌ಕುಮಾರ್ ಸೂಚನೆ

    ಶ್ರೀನಿವಾಸಪುರ: ಸಹಕಾರ ಸಂಘಗಳಲ್ಲಿ ಯಾರೋ ಒಬ್ಬರನ್ನು ಮೆಚ್ಚಿಸುವುದಕ್ಕಾಗಿ, ಮತಗಳಿಗಾಗಲಿ ಅಥವಾ ಬಲಾಢ್ಯರ ಮುಲಾಜಿಗಾಗಲಿ ಸಾಲ ನೀಡಬೇಡಿ. ಲಾನುಭವಿಗಳನ್ನು ಗುರುತಿಸಿ ಸಾಲ ನೀಡಿದರೆ ಸಹಕಾರ ಸಂಘಗಳು ಉಳಿಯಲು ಸಾಧ್ಯ ಎಂದು ಶಾಸಕ ರಮೇಶ್‌ಕುಮಾರ್ ಹೇಳಿದರು.

    ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಸೇವಾ ನಿಧಿಯಿಂದ ಸ್ಥಳೀಯ ಸೊಸೈಟಿಗಳಿಗೆ ಗಣಕ ಯಂತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಸಹಕಾರ ಸಂಘಗಳನ್ನು ಒಗ್ಗೂಡಿಸಿ ಪಂಚಾಯಿತಿಗೆ ಒಂದರಂತೆ ಸಹಕಾರಿ ಬ್ಯಾಂಕ್ ಪ್ರಾರಂಭಿಸಿ ಕೃಷಿಕ, ವ್ಯಾಪಾರಸ್ಥರಿಗೆ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಬೇಕೆಂಬ ಯೋಜನೆ ನನ್ನದಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅದು ನನೆಗುದಿಗೆ ಬೀಳುವಂತಾಯಿತು. ಈಗಿನ ಸರ್ಕಾರ ಎಚ್ಚೆತ್ತುಕೊಂಡು ಸಹಕಾರಿ ಕ್ಷೇತ್ರ ಬಲಪಡಿಸಿ ಅರ್ಹರಿಗೆ ಸಾಲಸೌಲಭ್ಯ ನೀಡಿದರೆ ಸಹಕಾರ ಸಂಘಗಳ ಮಹತ್ವ ಹೆಚ್ಚುತ್ತದೆ ಎಂದರು.

    ಗ್ರಾಮೀಣ ಭಾಗದ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್‌ಗೆ ಮತ ಹಾಕಲು ಇರಬಾರದು. ಕೈ ಶುದ್ಧವಾಗಿದ್ದು, ರೈತರಿಗಾಗಿ ಕೆಲಸ ಮಾಡುವ ಬದ್ಧತೆ ಅಳವಡಿಸಿಕೊಳ್ಳಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಸಂಸ್ಥೆ ಮುಖ್ಯವಾಗಬೇಕು ಎಂದು ಸ್ಥಳೀಯ ಸೊಸೈಟಿಗಳ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

    ಸಾರಾಯಿ ನಿಷೇಧಕ್ಕೆ ಒತ್ತಾಯ: ಇತ್ತೀಚೆಗೆ ಲಕ್ಷ್ಮೀಪುರದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವಾಗ ಮಹಿಳೆಯೊಬ್ಬಳು ಕಣ್ಣೀರು ಹಾಕಿಕೊಂಡು ಮೊದಲು ಗ್ರಾಮಗಳಲ್ಲಿ ಸಾರಾಯಿ ಮಾರಾಟ ನಿಷೇಧಿಸಿ ಎಂದು ಮನವಿ ಮಾಡಿಕೊಂಡರು. ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗಿತ್ತು. ಈಗ ಮತ್ತೆ ಮಾರಾಟ ನಡೆಯುತ್ತಿದೆ. ಸದ್ಯದಲ್ಲಿಯೇ ಜಿಲ್ಲಾ ಕೇಂದ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಸೇರಿಸಿ ಸಾರಾಯಿ ನಿಷೇಧಕ್ಕೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ರಮೇಶ್ ಕುಮಾರ್ ತಿಳಿಸಿದರು.

    ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಮಾತನಾಡಿ, ನನ್ನ ಅನುದಾನದಲ್ಲಿ 30 ಲಕ್ಷ ರೂ. ಉಳಿದಿತ್ತು. ಇದರ ಜತೆಗೆ ಅಪೆಕ್ಸ್ ಬ್ಯಾಂಕ್‌ನಿಂದ 30 ಲಕ್ಷ ರೂ. ಪಡೆದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಸಹಕಾರ ಸಂಘಗಳಿಗೆ ಗಣಕಯಂತ್ರ ನೀಡಲಾಗುತ್ತಿದೆ ಎಂದರು. ಡಿಸಿಸಿ ಬ್ಯಾಂಕ್ ಕೋಮಾ ಸ್ಥಿತಿಗೆ ತಲುಪಿದ್ದ ಸಂದರ್ಭದಲ್ಲಿ ರಮೇಶ್‌ಕುಮಾರ್, ಬ್ಯಾಂಕಿಗೆ ಸರ್ಕಾರದಿಂದ 5 ಕೋಟಿ ರೂ. ಸಾಲ ಕೊಡಿಸಿದ್ದರು. ಅದನ್ನು ಷೇರು ಹಣವಾಗಿ ಇಟ್ಟುಕೊಂಡು ಇಂದು ಮಹಿಳಾ ಸಂಘಗಳಿಗೆ 1 ಸಾವಿರ ಕೋಟಿ ರೂ. ಹಾಗೂ 30 ಸಾವಿರ ರೈತರಿಗೆ 380 ಕೋಟಿ ರೂ. ಸಾಲ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಶೂನ್ಯ ಬಡ್ಡಿ ದರದಲ್ಲಿ ನಮಗೆ ಸಾಲ ದೊರೆಯುವಂತಾಯಿತು ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ನಾಗರತ್ನಮ್ಮ, ಶ್ರೀನಿವಾಸ್‌ರೆಡ್ಡಿ, ಕೃಷ್ಣಾರೆಡ್ಡಿ, ಎಸ್.ವೈ.ಮುನಿಶಾಮಿ, ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ವಿ.ಅಯ್ಯಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts