More

    ಕಂಪ್ಯೂಟರೀಕರಣ ಆರ್‌ಟಿಸಿ ಇಲ್ಲದೆ ಸೌಲಭ್ಯ ಸಿಗುತ್ತಿಲ್ಲ

    ಮಂಡ್ಯ: ಕೈಬರಹದ ಆರ್‌ಟಿಸಿಯನ್ನು ಕಂಪ್ಯೂಟರೀಕರಣ ಮಾಡಿ ವಿತರಿಸುವಂತೆ ಆಗ್ರಹಿಸಿ ತಾಲೂಕಿನ ಹೊನಗಹಳ್ಳಿ ಮಠದ ರೈತರು ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
    ಹೊನಗಹಳ್ಳಿ ಮಠ, ಕಾಲನಿ, ಹನಕೆರೆ, ಚನ್ನಂಕೇಗೌಡನದೊಡ್ಡಿ, ಮುದ್ದುಂಗೆರೆ, ಮದ್ದೂರು ತಾಲೂಕಿನ ಸೊಳ್ಳೇಪುರ, ವಳಗೆರೆಹಳ್ಳಿ ಗ್ರಾಮದ ರೈತರಿಗೆ ಸೇರಿದ ಸುಮಾರು 960 ಎಕರೆ ಜಮೀನಿದೆ. ಇವುಗಳು ಹಿಂದೆ ಇನಾಂ ಜಮೀನಾಗಿದ್ದು, 1952ರಲ್ಲಿ ಇನಾಂ ರದ್ಧತಿ ಕೂಡ ಆಗಿದೆ. 1958ರಲ್ಲಿ ರೀ ಸರ್ವೇ ಮಾಡಲಾಗಿದೆ. 2000ನೇ ಇಸವಿಯಲ್ಲಿ ಜಮೀನಿಗೆ ಕಂಪ್ಯೂಟರೀಕರಣ ಆರ್‌ಟಿಸಿ ಕೊಟ್ಟು ನಂತರ ನಿಲ್ಲಿಸಲಾಗಿದೆ. ಸುಮಾರು 22 ವರ್ಷ ಕಳೆದರೂ ಕಂಪ್ಯೂಟರೀಕರಣ ಆರ್‌ಟಿಸಿ ಕೊಡುತ್ತಿಲ್ಲ. ಈ ಬಗ್ಗೆ ಡಿಸಿ, ತಹಸೀಲ್ದಾರ್, ಸರ್ವೇ ಕಚೇರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    2018ರಲ್ಲಿ ಡಿಸಿ ಅವರು ಸಾಂಕೇತಿಕವಾಗಿ ಒಂದಷ್ಟು ರೈತರಿಗೆ ಕಂಪ್ಯೂಟರೀಕರಣ ಆರ್‌ಟಿಸಿ ಕೊಟ್ಟರೂ, ಅದು ಅಧಿಕೃತವಾಗಲಿಲ್ಲ. ಇದರ ಪರಿಣಾಮ ಬ್ಯಾಂಕ್, ಸಹಕಾರ ಸಂಘದಿಂದ ಸಾಲ ಸಿಗುತ್ತಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಹನೆ, ಪಿಂಚಣಿ, ಬೆಳೆ ವಿಮೆ ಸೇರಿದಂತೆ ಯಾವುದೇ ಸೌಲಭ್ಯ ಇಲ್ಲ. ಕೈ ಬರಹದ ಪಹಣಿಗೆ ಯಾವುದೇ ಕಿಮ್ಮತ್ತಿಲ್ಲ. ಆದ್ದರಿಂದ ಕೂಡಲೇ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.
    ಪ್ರತಿಭಟನೆಯಲ್ಲಿ ಸೋ.ಶಿ.ಪ್ರಕಾಶ್, ಡಿ.ವೆಂಕಟೇಶ್, ನಾರಾಯಣ, ನಾಗರಾಜು, ಕುಳ್ಳಯ್ಯ, ವಸಂತ, ಶಿವಬಸಯ್ಯ, ಸರೋಜಮ್ಮ, ಕೆಂಪಮ್ಮ, ಮೊಟ್ಟಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts