More

    ಸಿದ್ದಿ ಸಮುದಾಯದ ಬೇಡಿಕೆ ಈಡೇರಿಸಲು ಒತ್ತಾಯ

    ಹಳಿಯಾಳ: ಉತ್ತರ ಕನ್ನಡವನ್ನು ಬುಡಕಟ್ಟು ಜಿಲ್ಲೆಯಾಗಿ ಘೋಷಣೆ, ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಅಖಿಲ ಕರ್ನಾಟಕ ಸಿದ್ದಿ ಸಮಾಜ ಫೌಂಡೇಷನ್ ಟ್ರಸ್ಟ್ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.

    ಇಲ್ಲಿಯ ಆಡಳಿತಸೌಧಕ್ಕೆ ಅಖಿಲ ಕರ್ನಾಟಕ ಸಿದ್ದಿ ಸಮಾಜ ಫೌಂಡೇಷನ್ ಟ್ರಸ್ಟ್ ತೊಟ್ಟಿಲಗುಂಡಿ ನೇತೃತ್ವದಲ್ಲಿ ಆಗಮಿಸಿದ ಸಿದ್ದಿ ಸಮುದಾಯದವರು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಜಿ.ಕೆ. ರತ್ನಾಕರ್ ಅವರಿಗೆ ಸೋಮವಾರ ಸಲ್ಲಿಸಿದರು.

    ಅನುಸೂಚಿತ ಮತ್ತು ಬುಡಕಟ್ಟು ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯಹಕ್ಕು ಭೂ ಮಂಜೂರಿ ಪುನರ್ ಪರಿಶೀಲಿಸಬೇಕು. ಸಿದ್ದಿ ಜನರಿಗೆ ಸ್ವಾವಲಂಬಿ ಬದುಕು ಸಾಗಿಸಲು ಕೃಷಿ ಭೂಮಿ ಒದಗಿಸಬೇಕು. ಮೋಸದಿಂದ ನಮ್ಮಿಂದ ಕಿತ್ತುಕೊಂಡಿರುವ ಕೃಷಿ ಭೂಮಿ ಮರಳಿಸಬೇಕು. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಸಿದ್ದಿ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಒದಗಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

    ಶೈಕ್ಷಣಿಕ ಅರ್ಹತೆ ಆಧರಿಸಿಕೊಂಡು ಸರ್ಕಾರಿ ಕೆಲಸವನ್ನು ಸಿದ್ದಿ ಜನರಿಗೆ ನೀಡಬೇಕು. ಸಿದ್ದಿ ಸಮುದಾಯದವರು ಆರಂಭಿಸಿರುವ ಸಹಕಾರಿ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಆರ್ಥಿಕ ಸಹಕಾರ, ಸೌಲಭ್ಯ ಒದಗಿಸಬೇಕು. ಸಿದ್ದಿ ಸಮುದಾಯದೊಂದಿಗೆ ಅಸಹಕಾರ ತೋರುವ ಸರ್ಕಾರಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಸಿದ್ದಿ ಸಮುದಾಯದ ಸಂಸ್ಕೃತಿ, ಕಲೆಯ ಸಂರಕ್ಷಣೆಗಾಗಿ ಹಳಿಯಾಳ ತಾಲೂಕಿನಲ್ಲಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ.

    ಅಖಿಲ ಕರ್ನಾಟಕ ಸಿದ್ದಿ ಸಮಾಜ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಇಮಾಮ ಹುಸೇನಸಾಬ್ ಸಿದ್ದಿ, ಪ್ರಮುಖರಾದ ಮೇರಿ ಗರಿಬಾಚೆ, ಸಲೀಂ ಬೆಳಗಾಂವಕರ, ರೊಕಿ ಸಿದ್ದಿ, ಮಾಬುಬಿ ಜಾಂಗಳೆ, ಪ್ರಕಾಶ ಸಿದ್ದಿ, ಅರ್ಚನಾ ಸಿದ್ದಿ, ರಾಬಿಯಾ ದೇವರಾಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts