More

    ಸಂಜೀವಿನಿ ಪಡೆಯಲು ತೊಡಕು

    ಕಾರವಾರ: ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಹಿರಿಯರು ಸುಲಭವಾಗಿ ಕೋವಿಡ್ ಲಸಿಕೆ ಪಡೆಯಲು ತೊಡಕುಂಟಾಗುತ್ತಿದೆ.

    60 ವರ್ಷ ಮೇಲ್ಪಟ್ಟ ಎಲ್ಲರೂ ಹಾಗೂ ತೀವ್ರತರದ ಕಾಯಿಲೆ ಇರುವ 45 ವರ್ಷ ಮೇಲ್ಪಟ್ಟವರು ಆಧಾರ ಕಾರ್ಡ್​ನೊಂದಿಗೆ ತೆರಳಿ ಉಚಿತವಾಗಿ ಲಸಿಕೆ ಪಡೆಯಬಹುದು. ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ವಾರದ ಎಲ್ಲ ದಿನ ಆಸ್ಪತ್ರೆಯ ಸಮಯದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದ ನಿಗದಿತ ದಿನ ಲಸಿಕೆ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಹಾಗಿಲ್ಲ. ತಾಲೂಕು ಆಸ್ಪತ್ರೆ ಮತ್ತು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗ್ರಾಮೀಣ ಭಾಗಗಳಿಂದ ತೆರಳಿದ ಜನ ಲಸಿಕೆ ಸಿಗದೇ ವಾಪಸಾದ ಉದಾಹರಣೆಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಕೆಲವರಿಗೆ ‘ನೀವು ತಾಲೂಕು ಆಸ್ಪತ್ರೆಗೆ ಹೋಗಿ’ ಎಂದ ಉದಾಹರಣೆಗಳಿವೆ. ತಾಲೂಕು ಆಸ್ಪತ್ರೆಗಳಿಗೆ ಹೋದವರಿಗೆ ‘ನೀವು ನಿಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲೇ ಲಸಿಕೆ ಪಡೆಯಿರಿ ’ ಎಂಬ ಉತ್ತರ ಸಿಕ್ಕಿದ್ದೂ ಇದೆ.

    ತಾಂತ್ರಿಕ ಸಮಸ್ಯೆಗಳೇನು..?: ಕೋವಿಶೀಲ್ಡ್ ಒಂದು ಬಾಟಲ್​ನಿಂದ 10 ಜನರಿಗೆ (ತಲಾ ಒಂದು ಡೋಸ್) ನೀಡಬಹುದು. ನಾಲ್ಕೈದು ಜನರಿಗಾಗಿ ಒಂದು ಬಾಟಲ್ ತೆರೆದರೆ ಉಳಿದ ಡೋಸ್ ವ್ಯರ್ಥವಾಗಲಿದೆ. ಇದರಿಂದ ಒಮ್ಮೆಲೆ 10 ಜನ ಸೇರಿದಲ್ಲಿ ಮಾತ್ರ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ಹಲವು ಸಮಸ್ಯೆ ಸೃಷ್ಟಿಸುತ್ತಿದೆ. ಕೆಲ ಪಿಎಚ್​ಸಿಗಳಲ್ಲಿ ಒಮ್ಮೆ 10 ಜನ ಸೇರುವುದು ಕಷ್ಟ. ಇದರಿಂದ ಲಸಿಕೆ ಪಡೆಯಲು ಬಂದವರನ್ನು ಅರ್ಧ ಒಪ್ಪತ್ತು ಕಾಯಿಸಿದ ನಂತರ ವಾಪಸ್ ಕಳುಹಿಸಿದ ಉದಾಹರಣೆಗಳಿವೆ. ಇನ್ನು ತಾಲೂಕು ಆಸ್ಪತ್ರೆಗಳಲ್ಲಿ ಒಂದು ದಿನಕ್ಕೆ 60 ಅಥವಾ 70 ಹೀಗೆ ಮಿತಿ ನಿಗದಿ ಮಾಡಿಕೊಳ್ಳಲಾಗುತ್ತಿದೆ. ಆ ಮಿತಿ ದಾಟಿದ ನಂತರ ನಾಲ್ಕೈದು ಜನ ಬಂದರೆ ಅಂದಿನ ಕೋಟಾ ಮುಕ್ತಾಯವಾಗಿದೆ ನಾಳೆ ಬನ್ನಿ ಎಂಬ ಉತ್ತರ ಗೇಟ್​ನಲ್ಲೇ ಸಿಗುತ್ತದೆ.

    ಆಪ್ ನೋಂದಣಿ ಇಲ್ಲ: ಸರ್ಕಾರ ಆರೋಗ್ಯ ಸೇತು ಆಪ್​ನಲ್ಲಿ ನೋಂದಣಿ ಮಾಡಿ ಲಸಿಕೆಯ ಸಮಯ ನಿಗದಿ ಮಾಡಿಕೊಳ್ಳಿ ಎಂದು ಹೇಳಿದೆ. ಆದರೆ, ಆಪ್​ನ ತಾಂತ್ರಿಕ ಸಮಸ್ಯೆಯಿಂದ ಅದರಲ್ಲಿ ನೋಂದಣಿ ಮಾಡಿದವರ ಹೆಸರುಗಳು ಆಸ್ಪತ್ರೆಯ ಸಿಬ್ಬಂದಿಗೆ ಲಭ್ಯವಾಗುತ್ತಿಲ್ಲ. ಆಪ್​ನಲ್ಲಿ ಹೆಸರು ನೋಂದಾಯಿಸಿದರೆ ನೀವು ಲಸಿಕೆ ಪಡೆಯಬೇಕಾದ ದಿನಾಂಕ, ಸಮಯ, ಸ್ಥಳವನ್ನು ತೋರಿಸುತ್ತದೆ. ಅದನ್ನು ನಂಬಿ ಆಸ್ಪತ್ರೆಗೆ ಹೋದರೆ ನಿರಾಸೆ ಖಂಡಿತ. ‘ಆಪ್ ನೋಂದಣಿಯೆಲ್ಲ ಆಗದು, ಇಲ್ಲಿ ಮತ್ತೆ ಕ್ಯೂ ನಿಂತು ನೋಂದಣಿ ಮಾಡಿಕೊಳ್ಳಿ’ ಎಂಬ ಉತ್ತರ ಆಸ್ಪತ್ರೆ ಸಿಬ್ಬಂದಿಯಿಂದ ಬರುತ್ತಿದೆ.

    ಗಡಿಯಲ್ಲಿಲ್ಲ ತಪಾಸಣೆ: ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿರುವುದರಿಂದ ಆ ರಾಜ್ಯಗಳಿಂದ ಬರುವವರ ಮೇಲೆ ಸರ್ಕಾರ ನಿಗಾ ಇಡಲು ಸೂಚಿಸಿದೆ. ಆ ರಾಜ್ಯಗಳಿಂದ ಬರುವವರಿಗೆ 72 ಗಂಟೆಗಳ ಮುಂಚಿನ ಆರ್​ಟಿಪಿಸಿಆರ್ ತಪಾಸಣೆಯ ಕೋವಿಡ್ ನೆಗೆಟಿವ್ ವರದಿ ಇರಬೇಕು. ಕಾರವಾರದ ಮಾಜಾಳಿ, ಜೊಯಿಡಾ ಅನಮೋಡ ತನಿಖಾ ಠಾಣೆಗಳಲ್ಲಿ ಬುಧವಾರದಿಂದಲೇ ತಪಾಸಣೆ ಪ್ರಾರಂಭಿಸಲಾಗಿದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ. ಅವರು ಜಿಪಂ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು. ಆದರೆ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗಡಿಯಲ್ಲಿ ಕೋವಿಡ್ ಸಂಬಂಧ ಯಾವುದೇ ತಪಾಸಣೆ ನಡೆಯುತ್ತಿಲ್ಲ. ಸಂಯುಕ್ತ ತನಿಖಾ ಠಾಣೆಯಲ್ಲಿ ಪೊಲೀಸ್, ಅಬಕಾರಿ, ಕಂದಾಯ ಅಧಿಕಾರಿಗಳನ್ನು ಬಿಟ್ಟರೆ ಆರೋಗ್ಯ ಇಲಾಖೆಯ ಯಾವುದೇ ಅಧಿಕಾರಿಗಳನ್ನೂ ನಿಯೋಜಿಸದಿರುವುದು ಕಂಡುಬಂದಿದೆ.

    ಆರೋಗ್ಯ ಸೇತು ಆಪ್​ನಲ್ಲಿ ನೋಂದಣಿ ಮಾಡಿದ ಹೆಸರುಗಳು ಆಸ್ಪತ್ರೆಗಳಿಗೆ ಲಭ್ಯವಾಗುತ್ತಿಲ್ಲ. ಇದರಿಂದ ಜನ ಆಸ್ಪತ್ರೆಗಳಿಗೆ ಬಂದು ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬೇಕು.

    | ಪ್ರಿಯಾಂಗಾ ಎಂ. ಜಿಪಂ ಸಿಇಒ

    ಒಮ್ಮೆ ಕೋವಿಶೀಲ್ಡ್ ಬಾಟಲ್ ತೆರೆದರೆ 10 ಜನರಿಗೆ ಲಸಿಕೆ ನೀಡಬೇಕು. ನಾಲ್ಕೈದು ಜನರಿಗೆ ನೀಡಿದರೆ ಉಳಿದ ಡೋಸ್ ವ್ಯರ್ಥವಾಗಲಿದೆ. ಇದರಿಂದ ಗೊಂದಲಗಳು ಉಂಟಾಗುತ್ತಿವೆ. ಅವುಗಳನ್ನು ಶೀಘ್ರ ಸರಿಪಡಿಸಲಾಗುವುದು.

    | ಡಾ.ಶರದ್ ನಾಯಕ, ಡಿಎಚ್​ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts