More

    ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

    ಹುಬ್ಬಳ್ಳಿ: ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್​ಗೆ ಜ. 11ರಂದು ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್​ಗೆ ಜ. 12ರಂದು ಚುನಾವಣೆ ನಿಗದಿಯಾಗಿರುವುದರಿಂದ ಎರಡೂ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ತೀವ್ರ ಪೈಪೋಟಿ ಕಾಣಿಸಿಕೊಂಡಿದೆ.

    ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಆನ್​ಲೈನ್ ಮೂಲಕ ಮತ ಚಲಾವಣೆ ನಡೆಯಲಿದೆ. ತಮ್ಮ ಬೆಂಬಲಿಗರು ಹಾಗೂ ಶಿಷ್ಯರನ್ನು ಗೆಲ್ಲಿಸಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಆನ್​ಲೈನ್ ಮೂಲಕ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

    ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಮ್ರಾನ್ ಎಲಿಗಾರ ಹಾಗೂ ಚೇತನ ಬಿಜವಾಡ ನಡುವೆ ಪೈಪೋಟಿ ಇದೆ. ಇಮ್ರಾನ್ ಎಲಿಗಾರ ಹಾಲಿ ಅಧ್ಯಕ್ಷರಾಗಿದ್ದಾರೆ. ಫಾರೂಕ್ ಕಾಲೇಬುಡ್ಡೆ, ಸದಾನಂದ ಕುಲಕರ್ಣಿ, ಅಬ್ದುಲ್ ಸಾವಂತನವರ್, ಶ್ರೇಯಾ ಹಿರೇಕೆರೂರ, ಪೂರ್ಣಿಮಾ ಸವದತ್ತಿ, ಸಂಗಮೇಶ ಕ್ಯಾತನವರ್ ಸೇರಿ ಒಟ್ಟು 10 ಜನ ನಾಮಪತ್ರ ಸಲ್ಲಿಸಿದ್ದಾರೆ. 6 ಬ್ಲಾಕ್​ಗಳಿಗೆ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ. ಒಟ್ಟು 11026 ಜನ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

    ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿನೋದ ಅಸೂಟಿ, ನವೀನ ಸೋನಾರ ಹಾಗೂ ದೇವರಾಜ ಪರಸಪ್ಪನವರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಒಟ್ಟು 8647 ಮತದಾರರಿದ್ದಾರೆ. ಜಿಲ್ಲೆ ವ್ಯಾಪ್ತಿಯ 8 ಬ್ಲಾಕ್​ಗಳ ಅಧ್ಯಕ್ಷರ ಆಯ್ಕೆಯೂ ಇದೇ ವೇಳೆ ನಡೆಯಲಿದೆ.

    ಅತಿ ಹೆಚ್ಚು ಮತ ಪಡೆದವರು ಅಧ್ಯಕ್ಷರಾಗಿ, ನಂತರದವರು ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ, 3 ಉಪಾಧ್ಯಕ್ಷ ಹಾಗೂ 18 ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೂ ಆಯ್ಕೆ ನಡೆಯಲಿದೆ. ಒಬ್ಬ ಮತದಾರ ರಾಜ್ಯ ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬ್ಲಾಕ್ ಘಟಕದ ಅಧ್ಯಕ್ಷ, ಹೀಗೆ 4 ಮತ ಚಲಾಯಿಸಬಹುದು.

    ಆನ್​ಲೈನ್ ಮೂಲಕ ಮತ ಚಲಾಯಿಸಬೇಕಾಗಿರುವುದರಿಂದ ಅರ್ಹ ಮತದಾರರು ಗೂಗಲ್ ಪ್ಲೇಸ್ಟೋರ್​ನಲ್ಲಿ ಐವೈಸಿಸೆಲ್ಪ್ ವೋಟಿಂಗ್ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts