More

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧ

    ಶಿರಸಿ: ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬರಹಗಳ ಮೂಲಕ ಗಮನ ಸೆಳೆದು ಅಭಿವೃದ್ಧಿಗೆ ಪತ್ರಕರ್ತರೇ ಕಾರಣರಾಗುತ್ತಿದ್ದಾರೆ. ಆದರೆ, ಆರ್ಥಿಕವಾಗಿ ಪತ್ರಕರ್ತರೇ ಹೆಚ್ಚು ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಸಾಧ್ಯವಾಗುವ ಸಹಾಯ ಒದಗಿಸಲು ಮುಖ್ಯಮಂತ್ರಿ ಅವರನ್ನು ಆಗ್ರಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

    ನಗರದ ಟಿಆರ್‌ಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇರೆ ಜಿಲ್ಲೆಯಷ್ಟು ನಮ್ಮ ಜಿಲ್ಲೆ ಅಭಿವೃದ್ಧಿ ಆಗಿಲ್ಲ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂಬ ಬಗ್ಗೆ ಪತ್ರಕರ್ತರೂ ಸೇರಿದಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ವಿವಿಧ ಆಸ್ಪತ್ರೆಗಳ ಪ್ರಮುಖರನ್ನು ಸಂಪರ್ಕಿಸುತ್ತಿದ್ದೇನೆ. ಅವರು ಮುಂದೆ ಬಂದರೆ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಸೌಲಭ್ಯ ನಾವು ಒದಗಿಸುತ್ತೇವೆ. ಜನ ಸಾಮಾನ್ಯರು ಔಷಧೋಪಚಾರಕ್ಕಾಗಿ ಬೇರೆ ಜಿಲ್ಲೆಗೆ ಅನಿವಾರ್ಯವಾಗಿ ಹೋಗುವಂತಾಗಬಾರದು ಎಂಬುದು ನಮ್ಮ ಉದ್ದೇಶ ಎಂದರು.

    ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಹೆಮ್ಮೆ ಎನಿಸುತ್ತದೆ ಎಂದರು.

    ಪತ್ರಿಕಾ ಸಂಘದ ಜಿಲ್ಲಾಧ್ಯಕ್ಷ ಜಿ.ಸು. ಭಟ್ ಮಾತನಾಡಿ, ಕ್ಷೇಮ ನಿಧಿಯನ್ನು ಸಂಗ್ರಹಿಸುವ ಮೂಲಕ ಪತ್ರಕರ್ತರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಮಂಡಳಿ ನಿರ್ಧರಿಸಿದೆ. ಪತ್ರಿಕಾ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯದ ಅಗತ್ಯತೆ ಇದೆ. ಪತ್ರಿಕಾ ಭವನ ಇನ್ನೂ ಸಂಪೂರ್ಣಗೊಳ್ಳಲು ಕನಿಷ್ಠ 1 ಕೋಟಿ ರೂ. ಬೇಕಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಜಿ.ಯು. ಭಟ್ ಹೊನ್ನಾವರ, ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿದರು.

    ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾ ಪತ್ರಿಕಾ ಮಂಡಳಿ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್, ಪ್ರದೀಪ ಶೆಟ್ಟಿ, ರಾಜೇಂದ್ರ ಶಿಂಗನಮನೆ, ಇತರರಿದ್ದರು. ಸುಮಂಗಲಾ ಹೊನ್ನೆಕೊಪ್ಪ ಪತ್ರಿಕಾ ಮಂಡಳಿ ಸಾಗಿ ಬಂದ ದಾರಿಯ ಬಗ್ಗೆ ತಿಳಿಸಿದರು. ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಪತ್ರಕರ್ತರ ಸಂಖ್ಯೆ ಇರುವ ಕ್ಯಾಲೆಂಡರ್, ಪತ್ರಿಕಾ ಸಂಘದ ಲೋಗೋ ಅನಾವರಣಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts