More

    ಚುರುಕು ಪಡೆಯದ ವಾಣಿಜ್ಯ ಚಟುವಟಿಕೆ

    ಮಂಗಳೂರು/ಉಡುಪಿ: ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೇ 4ರಿಂದಲೇ ಬಹುತೇಕ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿವೆ. ದ.ಕ.ದಲ್ಲಿ ಮೊದಲೆರಡು ದಿನ ಇರದಿದ್ದ ಬಟ್ಟೆ ವ್ಯಾಪಾರಕ್ಕೂ ಗುರುವಾರ ಅನುಮತಿ ದೊರಕಿದೆ. ಆದರೆ ಯಾವುದೇ ವ್ಯಾಪಾರಕ್ಕೂ ಇದುವರೆಗೆ ಚುರುಕು ಪಡೆದಿಲ್ಲ.
    ನಿರಂತರ 40 ದಿನಗಳ ಕಠಿಣ ಲಾಕ್‌ಡೌನ್ ಬಳಿಕ ಹಸಿರು ವಲಯ ಉಡುಪಿ ಹಾಗೂ ಕಿತ್ತಳೆ ವಲಯ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದೆ. ಷರತ್ತುಗಳ ಅನ್ವಯ ಸಲೂನ್, ಹೋಟೆಲ್, ಮಾರ್ಕೆಟ್ ಕಾಂಪ್ಲೆಕ್ಸ್, ಮಾಲ್, ಚಿತ್ರಮಂದಿರ, ಧಾರ್ಮಿಕ ಸ್ಥಳಗಳಿಗೆ ಮಾತ್ರ ಲಾಕ್‌ಡೌನ್ ಮುಂದುವರಿಸಲಾಗಿದೆ.
    ಪೂರ್ಣವಾಗಿ ಸ್ತಬ್ಧವಾದ ವಾಣಿಜ್ಯ ಚಟುವಟಿಕೆಗಳು ಮತ್ತೆ ಎಂದಿನ ವೇಗ ಪಡೆಯುವುದಕ್ಕೆ 6 ತಿಂಗಳೇ ಬೇಕಾಗಬಹುದು ಎನ್ನುವುದು ವ್ಯಾಪಾರಸ್ಥರ ಅಭಿಪ್ರಾಯ.

    ದಿನಬಳಕೆ ವಸ್ತುಗಳಷ್ಟೇ ಆದ್ಯತೆ: ಸದ್ಯ ಜನರಲ್ ಸ್ಟೋರ್‌ಗಳಲ್ಲಿ ಮಾತ್ರವೇ ಜನ ಕಾಣುತ್ತಾರೆ. ಮೀನು, ಮಾಂಸ ಮಾರುಕಟ್ಟೆಯಲ್ಲಿ ವ್ಯಾಪಾರ ಉತ್ತಮವಾಗಿದೆ. ದಿನಬಳಕೆ ಆಹಾರ ವಸ್ತುಗಳಿಗೆ, ತರಕಾರಿ ಕೊಳ್ಳುವುದಕ್ಕೇ ಜನರ ಮೊದಲ ಆದ್ಯತೆ ಹೊರತು ಇತರ ಐಟಂಗಳಲ್ಲಿ ಆಸಕ್ತಿ ಕಾಣುತ್ತಿಲ್ಲ.
    ದಿನಸಿ ಅಂಗಡಿಗಳಲ್ಲೂ ಹಲವು ದಿನವಿಡೀ ತೆರೆಯುವ ಬದಲು ಇನ್ನೂ ಮಧ್ಯಾಹ್ನದ ವರೆಗಷ್ಟೇ ತೆರೆದಿರುತ್ತಿವೆ. ಅಂದರೆ ಜನರ ಬೇಡಿಕೆ ಅಷ್ಟಕ್ಕಷ್ಟೇ ಎನ್ನುವುದು ಸ್ಪಷ್ಟ. ಮಂಗಳೂರಿನಲ್ಲಿ ಮಾರ್ಕೆಟ್ ಕಾಂಪ್ಲೆಕ್ಸ್‌ಗಳಲ್ಲಿರುವ ಅಂಗಡಿಗಳು ತೆರೆಯಬಾರದು ಎಂಬ ಸೂಚನೆಯಿದ್ದರೂ ಅಂಗಡಿಗಳು ತೆರೆದಿರುವುದು ಕಂಡುಬರುತ್ತಿದೆ. ಆದರೆ ಜನರ ಸಂಖ್ಯೆ ಕಡಿಮೆ.

    ಚಪ್ಪಲಿ ಅಂಗಡಿ, ಮೆಡಿಕಲ್ಸ್, ಇಲೆಕ್ಟ್ರಿಕಲ್ಸ್, ಹಾರ್ಡ್‌ವೇರ್ ಶಾಪ್‌ಗಳಂತಹ ಕೆಲವೇ ಕಡೆ ಜನರ ಓಡಾಟ ಕಂಡುಬರುತ್ತಿದೆ. ಇಲೆಕ್ಟ್ರಾನಿಕ್ಸ್, ಮೊಬೈಲ್, ಬಟ್ಟೆ, ಚಿನ್ನ, ಗೃಹೋಪಯೋಗಿ ವಸ್ತುಗಳ ಖರೀದಿಗೆ ಜನರು ಮುಂದಾಗುತ್ತಿಲ್ಲ. ಕೆಲವು ಹೋಟೆಲ್‌ಗಳು ಪಾರ್ಸೆಲ್ ಸೇವೆ ನೀಡುತ್ತಿದ್ದರೂ ಲಾಭ ಇಲ್ಲ ಎನ್ನುತ್ತಿದ್ದಾರೆ ಮಾಲೀಕರು. ಮದ್ಯದಂಗಡಿ ಎದುರು ಆರಂಭದ ಎರಡು ದಿನ ಕಿ.ಮೀ.ವರೆಗೆ ಇದ್ದ ಸಾಲು ಈಗ ಮಾಯವಾಗಿದೆ.

    ಬಟ್ಟೆ ಅಂಗಡಿಯಲ್ಲೂ ಜನ ಕಡಿಮೆ: ಗುರುವಾರದಿಂದ ಬಟ್ಟೆ ಅಂಗಡಿ ತೆರೆಯುವುದಕ್ಕೂ ದ.ಕ. ಜಿಲ್ಲಾಡಳಿತ ಓಕೆ ಎಂದಿದ್ದರೂ ಎಲ್ಲ ಅಂಗಡಿಗಳು ತೆರೆದಿರಲಿಲ್ಲ. ಕೆಲವೊಂದು ಅಂಗಡಿಗಳು ತೆರೆದರೂ ಗ್ರಾಹಕರ ಸಂಖ್ಯೆ ಏನೂ ಇಲ್ಲ. ರಂಜಾನ್‌ನಲ್ಲಿ ಬಟ್ಟೆ ವ್ಯಾಪಾರ ಸಾಮಾನ್ಯವಾಗಿ ಹೆಚ್ಚು, ಆದರೆ ಮುಸ್ಲಿಂ ಸಂಘಟನೆಗಳೇ ಬಟ್ಟೆ ಅಂಗಡಿ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಅಚ್ಚರಿ. ಮುಸ್ಲಿಂ ವ್ಯಾಪಾರಸ್ಥರು ಹಬ್ಬದ ಬಳಿಕವಷ್ಟೇ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದಾರೆ.

    ಚೇತರಿಕೆಗೆ 6 ತಿಂಗಳು ಬೇಕು
    ಜನರ ಕೈನಲ್ಲಿ ಹಣದ ಹರಿವು ಕಡಿಮೆಯಾಗಿದೆ, ಹಾಗಾಗಿ ಅಗತ್ಯದ ವಸ್ತುಗಳಿಗಷ್ಟೇ ಜನರು ವೆಚ್ಚ ಮಾಡುತ್ತಾರೆ. ಇದೇ ಟ್ರೆಂಡ್ ಮುಂದಿನ ನಾಲ್ಕರಿಂದ 6 ತಿಂಗಳು ಇರಬಹುದು, ಬಳಿಕ ಚುರುಕು ಮೂಡಬಹುದು. ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಥಿಯೇಟರ್ ತೆರೆದರೂ ಜನ ಹೋಗುವುದಿಲ್ಲ. ಫಾರ್ಮಾ, ಬಿಪಿಒ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ತೊಂದರೆಯಾಗದು, ಆದರೆ ರಿಯಲ್ ಎಸ್ಟೇಟ್, ಅಟೊಮೊಬೈಲ್ ಚೇತರಿಕೆಗೆ ಕೊಂಚ ಸಮಯ ಬೇಕು.
    -ಐಸಾಕ್ ವಾಸ್, ಕೆಸಿಸಿಐ ಅಧ್ಯಕ್ಷರು, ಮಂಗಳೂರು

    ಕೈಗಾರಿಕೆ ಚೇತರಿಕೆಗೆ ಬೇಕಾದೀತು ವರ್ಷ
    ಕರಾವಳಿಯಲ್ಲಿ ಕಾರ್ಮಿಕರ ಅಲಭ್ಯತೆ, ಉತ್ಪಾದಿತ ವಸ್ತುಗಳ ಸಾಗಾಟ ಸಮಸ್ಯೆ, ಬೇಡಿಕೆ ಕುಸಿತ, ದುಪ್ಪಟ್ಟು ಉತ್ಪಾದನಾ ವೆಚ್ಚ ಮೊದಲಾದ ತೊಂದರೆಗಳನ್ನು ಎದುರಿಸುತ್ತಿರುವ ಕೈಗಾರಿಕಾ ಕ್ಷೇತ್ರ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೊಂದು ವರ್ಷ ಬೇಕಾಗಬಹುದು.
    ಶೇ.90ರಷ್ಟು ಕೈಗಾರಿಕೆಗಳು ಆರಂಭಗೊಂಡರೂ ಯಂತ್ರಗಳು ಚಾಲನೆಗೊಂಡು ಉತ್ಪಾದನೆ ಆರಂಭಿಸಿಲ್ಲ. ಕೈಗಾರಿಕೆಗಳಲ್ಲಿ ತಳಮಟ್ಟದ ಕೆಲಸ ಮಾಡುವವು ಕಾರ್ಮಿಕರು. ಸ್ಥಳೀಯರು ಕಚೇರಿ ಕೆಲಸಗಳಲ್ಲಿ ಇರುತ್ತಾರೆ. ಪ್ರಸಕ್ತ ಬಹುತೇಕ ವಲಸೆ ಕಾರ್ಮಿಕರು ಊರು ಸೇರಿದ್ದು, ವರ್ಷದ ಮಟ್ಟಿಗೆ ಹಿಂತಿರುಗುವುದಿಲ್ಲ. ಹಾಗಾಗಿ ಕೈಗಾರಿಕಾ ಕ್ಷೇತ್ರ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ವರ್ಷವೇ ಬೇಕಾಗುವ ಸಾಧ್ಯತೆ ಇದೆ ಎಂದು ಮಂಗಳೂರಿನ ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಅಜಿತ್ ಕಾಮತ್ ಹೇಳುತ್ತಾರೆ.

    ಉತ್ಪನ್ನ ಸಾಗಾಟ ಸಮಸ್ಯೆ: ಇರುವ ಕಾರ್ಮಿಕರನ್ನು ಬಳಸಿ ಉತ್ಪಾದನೆ ಮಾಡಿದರೂ ವಸ್ತುಗಳ ಸಾಗಾಟ ಸಮಸ್ಯೆಯಾಗಿದೆ. ಸಾಗಾಟ ವೆಚ್ಚವೂ ಶೇ.40 ಹೆಚ್ಚಾಗಿದೆ. ಕೆಲವು ಕಡೆ ಮಾರುಕಟ್ಟೆಗೂ ತೊಂದರೆಯಾಗಿದೆ. ಆದ್ದರಿಂದ ಇನ್ನೂ ಒಂದು ತಿಂಗಳ ಕಾಲ ಎಲ್ಲ ಯಂತ್ರಗಳ ಚಾಲನೆ ಕಷ್ಟ. ಸಾರಿಗೆ ವ್ಯವಸ್ಥೆ ಆರಂಭಗೊಳ್ಳದ ಕಾರಣ ಸ್ಥಳೀಯ ಕಾರ್ಮಿಕರನ್ನು ಅಂತರ ಕಾಯ್ದುಕೊಂಡು ಕರೆ ತರಲು ಹೆಚ್ಚು ವೆಚ್ಚವಾಗಲಿದೆ ಎಂದು ಅಜಿತ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

    ಆರ್ಥಿಕತೆಗೆ ದೊಡ್ಡ ಹೊಡೆತ
    ಸರ್ಕಾರ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಮೊದಲೇ ಕೈಗಾರಿಕೆಗಳನ್ನು ಆರಂಭ ಮಾಡಿದ್ದರೆ ಒಂದಷ್ಟು ಕಾರ್ಮಿಕರು ಇಲ್ಲಿ ಉಳಿಯುತ್ತಿದ್ದರು. ಇನ್ನು ಮಳೆಗಾಲ ಅರಂಭಗೊಳ್ಳುತ್ತಿದ್ದು, ಊರಿನಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮರಳುವುದು ಡಿಸೆಂಬರ್ ಬಳಿಕ. ಅಷ್ಟರ ತನಕ ಕೈಗಾರಿಕೆಗಳು ಚೇತರಿಕೆ ಕಾಣುವುದು ಅನುಮಾನ. ಇದರಿಂದ ಆರ್ಥಿಕತೆಗೂ ದೊಡ್ಡ ಮಟ್ಟದ ಹೊಡೆತ ಬೀಳಲಿದೆ ಎಂಬುದು ಕೈಗಾರಿಕೋದ್ಯಮಿಗಳ ಅಭಿಪ್ರಾಯ.

    ಉಡುಪಿಯಲ್ಲೂ ಇದೇ ಸಮಸ್ಯೆ
    ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ 5 ಸಾವಿರಕ್ಕೂ ಅಧಿಕ ಕೈಗಾರಿಕೆಗಳಿವೆ. ಇವುಗಳಲ್ಲಿ 3 ಸಾವಿರಕ್ಕೂ ಅಧಿಕ ಕಂಪನಿಗಳು ಕಾರ್ಯಾರಂಭ ಮಾಡಿವೆ. ಪ್ರಮುಖವಾಗಿ ಕಾರ್ಮಿಕರ ಕೊರತೆ, ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಏ.26ರಿಂದಲೇ ಅನೇಕ ಕಂಪನಿಗಳು ಪ್ರಾರಂಭವಾಗಿದ್ದು, ನಗರ ಪ್ರದೇಶದ ಕಂಪನಿಗಳು ಮೇ 3ರಿಂದ ಶೇ.30 ನೌಕರರ ಹಾಜರಾತಿಯಲ್ಲಿ ಕೆಲಸ ಶುರು ಮಾಡಿವೆ. ಶೇ.95 ಸಣ್ಣ ಮತ್ತು ಗುಡಿ ಕೈಗಾರಿಕೆ ಚಟುವಟಿಕೆ ಆರಂಭವಾಗಿದ್ದು, ಕಚ್ಚಾ ವಸ್ತುಗಳ ಕೊರತೆ ಎದುರಿಸುತ್ತಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಲಾಕ್‌ಡೌನ್ ನಿರ್ಬಂಧ ಮುಂದುವರಿದಿರುವುದರಿಂದ ದೊಡ್ಡ ಕಂಪನಿಗಳು ಇನ್ನೂ ತೆರೆದಿಲ್ಲ. ಜತೆಗೆ ಟ್ರಾನ್ಸ್‌ಪೋರ್ಟ್ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕಾರಣ ಕಚ್ಚಾವಸ್ತುಗಳ ಆಮದು ಮತ್ತು ಉತ್ಪನ್ನಗಳ ರಫ್ತು ಕಷ್ಟವಾಗಿದೆ.

    ಕೈಗಾರಿಕೆಗಳಲ್ಲಿ ಕಾರ್ಮಿಕರ ಸಮಸ್ಯೆ ಇದೆ. ಸಾರ್ವಜನಿಕ ಸಾರಿಗೆ ಆರಂಭಗೊಳ್ಳದ ಕಾರಣ ಸ್ಥಳೀಯ ಕಾರ್ಮಿಕರಿಗೂ ಬರಲಾಗುತ್ತಿಲ್ಲ. ಅವರನ್ನು ಕರೆತರಲು ಸ್ಥಗಿತಗೊಂಡಿರುವ ಕೆಎಸ್ಸಾರ್ಟಿಸಿ ಒಪ್ಪಂದದ ಮೇರೆಗೆ ಒದಗಿಸಿಕೊಟ್ಟರೆ ಅನುಕೂಲ. ಇದರಿಂದ ಸರ್ಕಾರಕ್ಕೂ ಆದಾಯ ಬಂದಂತಾಗುತ್ತದೆ. ಕೆಲಸವಿಲ್ಲದೆ ಕುಳಿತಿರುವ ಚಾಲಕರಿಗೂ ಉಪಕಾರ.
    – ಪ್ರಕಾಶ್ ಕಲ್ಬಾವಿ, ಅಧ್ಯಕ್ಷ, ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ, ಮಂಗಳೂರು ಶಾಖೆ

    ಜಿಲ್ಲೆಯಲ್ಲಿ ಶೇ.95 ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿವೆ. ಆದರೆ ಕಚ್ಚಾವಸ್ತುಗಳ ಕೊರತೆ ಇದೆ. ಬಸ್ ಇಲ್ಲದೆ ಕಾರ್ಮಿಕರು ಬರುತ್ತಿಲ್ಲ. ಜಿಲ್ಲೆಯಲ್ಲಿ ಉತ್ಪನ್ನಗಳ ಮಾರಾಟಕ್ಕೆ ತೊಂದರೆ ಇಲ್ಲ. ಆದರೆ ಹೊರರಾಜ್ಯಕ್ಕೆ ಸಾಗಾಟ ಕಷ್ಟ.
    – ಪ್ರಶಾಂತ್ ಬಾಳಿಗ, ಉಪಾಧ್ಯಕ್ಷ, ಸಣ್ಣ ಕೈಗಾರಿಕಾ ಸಂಘ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts