More

    ತಂತ್ರಜ್ಞಾನದ ಹೊಸ ಸಾಧ್ಯತೆಗಳು ಮತ್ತು ನಮ್ಮ ಬದುಕು…

    ತಂತ್ರಜ್ಞಾನದ ಹೊಸ ಸಾಧ್ಯತೆಗಳು ಮತ್ತು ನಮ್ಮ ಬದುಕು...ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಇದು ಕೃತಕ ಬುದ್ಧಿಮತ್ತೆ ಆಗದೆ ವರ್ಧಿತ ಬುದ್ಧಿಮತ್ತೆ ಆಗಲಿ. ಕಂಪ್ಯೂಟರನ ವೇಗ, ಅಗಾಧ ನೆನಪಿನ ಶಕ್ತಿ, ಹೊಸ ತಂತ್ರಜ್ಞಾನದಿಂದ ತಯಾರಾದ ಯಂತ್ರಗಳು ಹಾಗೂ ಅತ್ಯುತ್ತಮ ಸಂವಹನ ಮಾಧ್ಯಮಗಳ ಸದ್ಬಳಕೆ ಮನುಷ್ಯ ಜೀವನವನ್ನೂ, ಭೂಮಿಯನ್ನೂ ಹಸಿರಾಗಿಸಲಿ.

    ಅನಂತಕುಮಾರ್ ಅವರೊಂದಿಗೆ ನನ್ನ ಮದುವೆಯಾಗಿದ್ದು 1989ರ ಫೆಬ್ರವರಿಯಲ್ಲಿ. ನಂತರ ನಾನು ಬೆಂಗಳೂರಿಗೆ ಬಂದೆ. ಆ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಗಾಳಿ ಜೋರಾಗಿ ಹರಡುತ್ತಿತ್ತು. ನಾನು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಭವಿಷ್ಯ ಹುಡುಕಿಕೊಂಡು ಅಡಿಯಿಟ್ಟೆ. ಕೆಲಸ ಮಾಡುತ್ತ ಬಹಳಷ್ಟು ವಿಷಯಗಳನ್ನು ಕಲಿತೆ, ತಿಳಿದುಕೊಂಡೆ. ಆ ಹೊತ್ತಲ್ಲೇ ಸಮಾಜದಲ್ಲಿ ಚರ್ಚೆ, ವಾದ-ವಿವಾದವೊಂದು ಜೋರಾಗಿ ನಡೆದಿತ್ತು. ಕಂಪ್ಯೂಟರ್​ಗಳು ಹೊಸದಾಗಿ ಅಡಿಯಿಟ್ಟ ಸಂದರ್ಭ. ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಯುವಕ-ಯುವತಿಯರಿಗೆ ಕೆಲಸ ಸಿಗುತ್ತಿದೆ, ಅವರು ಹೊರದೇಶಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅನುವಾಗುತ್ತಿದೆ. ಕೊನೆಗೂ, ಬುದ್ಧಿಮತ್ತೆಗೆ ಬೆಲೆ ಸಿಗುತ್ತಿದೆ ಎಂಬ ಆಶಾವಾದ ಒಂದೆಡೆ. ಮತ್ತೊಂದೆಡೆ ಕಳವಳದ ದನಿ. ಕಂಪ್ಯೂಟರ್​ಗಳು ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತವೆ. ಎಲ್ಲ ಕೆಲಸಗಳನ್ನೂ, ಅದೂ ತಪ್ಪಿಲ್ಲದೆ ಕಂಪ್ಯೂಟರ್​ಗಳು ಮಾಡುವಾಗ ಜನಸಾಮಾನ್ಯರಿಗೇನು ಕೆಲಸ ಉಳಿಯುತ್ತದೆ? ಬ್ಯಾಂಕುಗಳು ಸಂಪೂರ್ಣ ಕಂಪ್ಯೂಟರಿಕರಣಗೊಳ್ಳಬಹುದು. ಈ ರೀತಿಯ ದುಗುಡ ವ್ಯಕ್ತವಾಗುತ್ತಲೇ ಇತ್ತು.

    ಬಿಲ್ ತಯಾರಿಸಬಹುದು, ಇಡ್ಲಿ ಮಾಡಕ್ಕಾಗಲ್ಲ: ಇಂಥ ಚರ್ಚೆಗಳ ಹೊತ್ತಲ್ಲೇ ಅನಂತಕುಮಾರ್ ನಮಗೆ ಹಾಸ್ಯಶೈಲಿಯಲ್ಲಿ ಹೇಳುತ್ತಿದ್ದರು- ‘ಕಂಪ್ಯೂಟರಿನಿಂದ ಬಿಲ್ ತಯಾರಿಸಬಹುದು. ಇಡ್ಲಿ ಮಾಡಕ್ಕಾಗಲ್ಲ. ಇಡ್ಲಿ ಮಾಡಲು ಮನುಷ್ಯರೇ ಬೇಕು, ಅದಕ್ಕೆ ಯಾವುದೇ ಕಂಪ್ಯೂಟರ್ ಸಹಾಯ ಮಾಡುವುದಿಲ್ಲ’ ಅಂತ. ಕಂಪ್ಯೂಟರ್ ಏನಿದ್ದರೂ ಲೆಕ್ಕಕ್ಕೆ, ವೈಜ್ಞಾನಿಕ ಪ್ರಯೋಗಕ್ಕೆ ಮಾತ್ರ ಸೀಮಿತವಾಗಬಹುದು ಎಂದು ತಿಳಿದುಕೊಂಡಿದ್ದೆವು. ಆದರೆ, ಕಳೆದ 30 ವರ್ಷಗಳಲ್ಲಿನ ಬದಲಾವಣೆಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಚದುರಂಗದಂತಹ ಆಟ ಆಡಬಹುದು, ಚಾಲಕನಿಲ್ಲದೆ ಕಾರು ಓಡಿಸಬಹುದು, ವಿಮಾನ ಹಾರಿಸಬಹುದು, ಇಳಿಸಬಹುದು. ಇದನ್ನು ‘ಆಟೋ ಪೈಲಟ್ ಮೋಡ್’ ಎಂದು ಕರೆಯುತ್ತಾರೆ. ಇಡ್ಲಿನೂ ಮಾಡಬಹುದು, ವಡೆ-ದೋಸೆಯೂ ಮಾಡಬಹುದು. ಕಳೆದ ಬಾರಿ ಏನಾದರೂ ತಪ್ಪಾಗಿದ್ದರೆ ನೆನಪಿಟ್ಟು ಸುಧಾರಿಸಕೊಳ್ಳಬಹುದು.

    ಇನ್ನೂ ಮುಂದೆ ಹೋಗಿ ಕೃತಕ ಬುದ್ಧಿಮತ್ತೆಯನ್ನು (Artificial Intelligence) ಉಪಯೋಗಿಸಿ ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ಸಾಕಾರಗೊಳಿಸಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ನನ್ನ ಸಹಪಾಠಿಯೊಬ್ಬರು ಅಐ ಬಳಸಿ ಆ್ಯಪ್ ತಯಾರಿಸುತ್ತಿದ್ದಾರೆ. ಅಡುಗೆ ಮಾಡುವುದನ್ನು ಬರೀ ಹೇಳಿಕೊಡುವುದಲ್ಲ, ನಿಮ್ಮ ಕುಟುಂಬದ ಇಷ್ಟ, ರುಚಿಗೆ ತಕ್ಕಂತೆ ಮನೆಯಲ್ಲಿ ಹೇಗೆ ಅಡುಗೆ ತಯಾರಿಸಬಹುದು, ಯಾವೆಲ್ಲ ಬದಲಾವಣೆ ಮಾಡಿಕೊಳ್ಳಬೇಕು, ಯಾವ ಸಾಮಗ್ರಿ ಎಷ್ಟು ಬಳಸಬೇಕು ಎಂಬೆಲ್ಲ ವಿವರಗಳನ್ನು ಕುಟುಂಬದ ವ್ಯಕ್ತಿಗಳ ಇಷ್ಟಗಳನ್ನು ನೆನಪಿಟ್ಟು ಮಾಹಿತಿ ನೀಡಲಿದೆ ಎಂಬುದು ವಿಶೇಷ.

    ಬದಲಾವಣೆ ಹಲವು ಆಯಾಮದಲ್ಲಿ, ಹಲವು ಕ್ಷೇತ್ರಗಳಿಗೆ ಅನ್ವಯಿಸಿ ಸಾಕಾರಗೊಂಡಿದೆ ಎಂಬುದನ್ನು ನಾವು ಗಮನಿಸಬೇಕು. ಹೊಸ ಹೊಸ ಫೀಚರ್ಸ್ ಮುಖಾಂತರ ಕೆಲಸ ಮಾಡುವ ಹಲವು ಬ್ರ್ಯಾಂಡ್​ಗಳ ಕಂಪ್ಯೂಟರ್​ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಮತ್ತೊಂದೆಡೆ, 19ನೇ ಶತಮಾನದ ಕೈಗಾರಿಕಾ ಕ್ರಾಂತಿ ನಂತರ ಬಂದಿರುವ/ಬರುತ್ತಿರುವ ಸುಧಾರಿತ ಯಂತ್ರಗಳು ಉದ್ಯಮ ರಂಗದ ಸ್ವರೂಪವನ್ನೇ ಬದಲಾಯಿಸಿವೆ. ಕಂಪ್ಯೂಟರ್, ಯಂತ್ರಗಳು, ಸಂವಹನ ಮಾಧ್ಯಮಗಳು- ಈ ಮೂರೂ ಸಂಗತಿಗಳು ಸೇರಿ ಇಡೀ ಜಗತ್ತಿನಲ್ಲಿ ಮನುಷ್ಯನ ಜೀವನವನ್ನು ಸಂಪೂರ್ಣ ಬದಲು ಮಾಡಿವೆ.

    ತಾಂತ್ರಿಕ ವಿಶ್ವವಿದ್ಯಾಲಯವೊಂದರ ಘಟಿಕೋತ್ಸವ. ಅಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗೆ ಪ್ರಮಾಣಪತ್ರ ನೀಡಬೇಕಿತ್ತು. ಆ ವಿದ್ಯಾರ್ಥಿ ವಿದೇಶದಲ್ಲಿದ್ದು, ಕೋವಿಡ್ ಕಾರಣದಿಂದ ಬರಲಾಗಿರಲಿಲ್ಲ. ಆದರೆ, ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಆ ವಿದ್ಯಾರ್ಥಿ ವೇದಿಕೆಗೆ ಬಂದು ಪ್ರಮಾಣಪತ್ರ ಸ್ವೀಕರಿಸುವಂತೆ ಮಾಡಲಾಯಿತು. ಪ್ರಮಾಣಪತ್ರ ಪಡೆದು ಆ ವಿದ್ಯಾರ್ಥಿ ಮಾಯವಾಗಿಬಿಟ್ಟ (ವರ್ಚುವಲ್ ಎಫೆಕ್ಟ್-3 ಈ). ಹಿಂದೆ ನಾರದ ಮುನಿಗಳು ನಾರಾಯಣ-ನಾರಾಯಣ ಅಂತ ಹೇಳುತ್ತ ಎಲ್ಲಿ ಬೇಕಾದರೂ ಪ್ರತ್ಯಕ್ಷರಾಗುತ್ತಿದ್ದರು. ಆ ಘಟಿಕೋತ್ಸವ ಮತ್ತು ವಿದ್ಯಾರ್ಥಿಯ ದೃಶ್ಯ ನೋಡಿದಾಗ ನಾರದರು ನೆನಪಾದರು.

    80-90 ವರ್ಷಗಳ ಹಿಂದೆ ಮನೆಯಲ್ಲೇ ಚರಕದಿಂದ ಬಟ್ಟೆ ನೇಯ್ದು, ತಾವೇ ಹೊಲಿಗೆ ಯಂತ್ರದಿಂದ ಹೊಲಿಯುತ್ತಿದ್ದ ಗಾಂಧಿವಾದಿ ಹಿರಿಯರು ನಮ್ಮ ನಡುವೆ ಇದ್ದಾರೆ. ಈಗ ಚಿತ್ರಣ ಬದಲಾಗಿದೆ. ಮನುಷ್ಯರ ಸಹಾಯವಿಲ್ಲದೆ ಸಂಪೂರ್ಣವಾಗಿ ಫ್ಯಾಕ್ಟರಿಯಲ್ಲೇ ತಯಾರಾದ ಬಟ್ಟೆಗಳು, ಕಂಪ್ಯೂಟರ್ ಆಧಾರದಿಂದ ನಮ್ಮ ಅಳತೆಗೆ ತಕ್ಕಂತೆ ತಯಾರಿಸಲಾದ, ವಿವಿಧ ವಿನ್ಯಾಸದ, ಬಣ್ಣದ ಬಟ್ಟೆಗಳು ಸಾವಿರಾರು ಮೈಲಿಗಳಷ್ಟು ದೂರದಿಂದ ಮನೆಬಾಗಿಲಿಗೇ ಬರುತ್ತಿವೆ. ಗಣಕಯಂತ್ರಗಳು ಮತ್ತು ಸಂವಹನ ಮಾಧ್ಯಮಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬಂತಾಗಿದೆ. ಇಷ್ಟೆಲ್ಲ ಆವಿಷ್ಕಾರ, ಬದಲಾವಣೆ, ಸುಧಾರಣೆ ಆದರೂ ಸ್ಥಿತಿ ನೋಡಿ.

    ಕೆಲ ದಿನಗಳ ಹಿಂದೆ ಹಾರ್ವರ್ಡ್ ವಿಶ್ವವಿದ್ಯಾಲಯದ ಒಂದು ವರದಿಯನ್ನು ಪತ್ರಿಕೆಯಲ್ಲಿ ಓದುತ್ತಿದ್ದೆ. ಪಳೆಯುಳಿಕೆ ಇಂಧನ ದಹಿಸುವುದರಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಐವರಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ನಿತ್ಯ ಒಂದು ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಆ ಪೈಕಿ ಐದು ಸಾವಿರ ಸಾವುಗಳು ಪಳೆಯುಳಿಕೆ ಇಂಧನದ ಮಾಲಿನ್ಯದಿಂದ ಸಂಭವಿಸುತ್ತಿವೆ. ಈ ಅಂಕಿಸಂಖ್ಯೆಗಳು ನಿಜಕ್ಕೂ ಭಯ ಮೂಡಿಸುವಂಥವು. ಮತ್ತೊಂದೆಡೆ, ಈ ಯಾಂತ್ರಿಕ ವೇಗದ ಬದುಕು ಅತಿಯಾದ ಕೃತಕತೆ ಬೆಳೆಸುತ್ತಿದೆಯಾ ಎಂಬ ಕಳವಳದ ಪ್ರಶ್ನೆಯೂ ಕಾಡುತ್ತಿದೆ. ನಮ್ಮ ಮಾತು, ನಡತೆ, ಜೀವನಶೈಲಿ ಇದೆಲ್ಲವನ್ನು ಅವಲೋಕಿಸಿದಾಗ ಕೃತಕ ಸಂಗತಿಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಅತಿಯಾದ ಪ್ಲಾಸ್ಟಿಕ್-ಕಾಗದದ ಬಳಕೆ, ಪಳೆಯುಳಿಕೆ ಇಂಧನದಿಂದ ಹಸಿರು ಹೊದಿಕೆ ಕಡಿಮೆಯಾಗಿದೆ, ಪರಿಸರ ಮಾಲಿನ್ಯ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿವೆ. ಇವೆಲ್ಲವನ್ನೂ ಅವಲೋಕಿಸಿದಾಗ ಬುದ್ಧಿವಂತ ಕಂಪ್ಯೂಟರ್​ಗಳು, ಬಲಶಾಲಿ ಯಂತ್ರಗಳು, ಸಂವಹನ ಮಾಧ್ಯಮಗಳು ನಮಗೆ ನೆರವಾಗುತ್ತಿದ್ದಾವಾ ಅಥವಾ ವೈರಿಗಳಾಗಿ ಬೆಳೆಯುತ್ತಿದ್ದಾವಾ ಎಂಬ ಭಯ ಆವರಿಸಿಕೊಳ್ಳದೆ ಇರದು.

    ಕೃತಕ ಬುದ್ಧಿಮತ್ತೆಯಲ್ಲ ವರ್ಧಿತ ಬುದ್ಧಿಮತ್ತೆ: ನಮಗೆ ಅವಕಾಶಗಳು, ಹೊಸ ಹೊಸ ತಂತ್ರಜ್ಞಾನಗಳು ದೊರೆತಂತೆಲ್ಲ ಸಮಾಜಕ್ಕೆ ಪೂರಕವಾಗಿ, ಪ್ರಕೃತಿಗೆ, ಪರಿಸರಕ್ಕೆ ಪೂರಕವಾಗಿ ಬದುಕುವುದನ್ನು ಬಿಟ್ಟು ವಿರುದ್ಧವಾಗಿ ಬದುಕುತ್ತಿದ್ದೆವಾ ಎಂಬ ಪ್ರಶ್ನೆ ನನಗಷ್ಟೇ ಅಲ್ಲ ಬಹಳಷ್ಟು ಜನರಿಗೆ ಕಾಡುತ್ತಲೇ ಇದೆ. ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಸುಧಾರಣೆಗಳು ಪರಿಸರಕ್ಕೆ, ಸಮಾಜಕ್ಕೆ ಪೂರಕವಾಗಿ ಬದುಕಲು ಪ್ರೇರಣೆಯಾಗಬೇಕು, ಪಥವಾಗಬೇಕು. ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ (www.akp.org.in) ಪ್ರತಿ ತಿಂಗಳು ‘ದೇಶ ಮೊದಲು’ ಎಂಬ ಶೀರ್ಷಿಕೆಯಡಿ ಮಹತ್ವದ ವಿಷಯಗಳ ಬಗ್ಗೆ ವೆಬಿನಾರ್ ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಆಯೋಜಿಸಲಾದ ವೆಬಿನಾರ್​ನ ವಿಷಯ- ‘ಸಾರ್ವಜನಿಕ ಜೀವನದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ’. ಬಹಳಷ್ಟು ಜನರು ವೆಬಿನಾರ್​ನಲ್ಲಿ ಪಾಲ್ಗೊಂಡಿದ್ದರು. ಹಿರಿಯ ವಿಜ್ಞಾನಿಯೊಬ್ಬರು ಆಸಕ್ತಿದಾಯಕ ಸಂಗತಿಯೊಂದನ್ನು ಮುಂದಿಟ್ಟರು. ‘ಆರ್ಟಿಫಿಷಿಯಲ್ ಎಂಬುದನ್ನು ‘ಕೃತಕ’ ಅಂತ ಭಾಷಾಂತರ ಮಾಡಬೇಡಿ. ಅದನ್ನು ನಾವು ವರ್ಧಿತ ಬುದ್ಧಿಮತ್ತೆ ಎಂದು ಕರೆಯೋಣ, ಅದನ್ನು ಕೃತಕ ಬುದ್ಧಿಮತ್ತೆ ಮಾಡುವುದು ಬೇಡ’ ಎಂದು ಹೇಳಿದ್ದು ಸೂಕ್ತವಾಗಿತ್ತು. ಏನಿದು ವರ್ಧಿತ ಬುದ್ಧಿಮತ್ತೆ? ಇದು ತರಬಹುದಾದ ಬದಲಾವಣೆ ಏನು ಎಂಬುದರ ಬಗ್ಗೆ ಚರ್ಚೆ ನಡೆಯಿತು.

    ಕೃತಕ ಬುದ್ಧಿಮತ್ತೆ ಅಥವಾ ವರ್ಧಿತ ಬುದ್ಧಿಮತ್ತೆಯನ್ನು ಸಮಾಜದ ಸಮಸ್ಯೆಗಳನ್ನು ನಿವಾರಿಸಲು, ಈಗಿನ ಸ್ಥಿತಿಯನ್ನು ಸುಧಾರಿಸಲು, ಒಳ್ಳೆಯ ಉದ್ದೇಶಗಳನ್ನು ಪೂರೈಸಲು ಖಂಡಿತವಾಗಿಯೂ ಬಳಸಬಹುದು. ಹಲವು ಕ್ಷೇತ್ರಗಳಿಗೆ ಅದನ್ನು ಅನ್ವಯಗೊಳಿಸಬಹುದು. ಉದಾಹರಣೆಗೆ, ಪಳೆಯುಳಿಕೆ ಇಂಧನದ ಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳನ್ನು ಕಡಿಮೆ ಮಾಡಲು, ರೈತರ ಜೀವನದಲ್ಲಿ ಬದಲಾವಣೆ ತರಲು, ಪ್ರಾಚೀನ ಸಂಸ್ಕೃತಿ, ಶಿಲ್ಪಕಲೆ, ವೇದ, ಅದರ ವಿಚಾರಗಳನ್ನು ಎತ್ತಿ ಹಿಡಿದು ಮನುಷ್ಯನನ್ನು ನೈತಿಕವಾಗಿ ಮೇಲೆ ತರಲು, ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧ ಸುಧಾರಿಸಲು ಹೀಗೆ ಹಲವು ಬದಲಾವಣೆ, ಸುಧಾರಣೆಗಳಿಗೆ ಎಐ ಮಾಧ್ಯಮವಾಗಬಹುದು ಎಂಬುದನ್ನು ವೆಬಿನಾರ್​ನಲ್ಲಿ ಪಾಲ್ಗೊಂಡ ಮೂವರು ವಿಷಯ ತಜ್ಞರು ತಿಳಿಸಿದರು.

    ಎಐ ವಿಷಯದಲ್ಲಿ ಈಗಾಗಲೇ ಇಂಜಿನಿಯರಿಂಗ್ ಕೋರ್ಸ್ ಆರಂಭವಾಗಿದೆ. ಇಂಜಿನಿಯರಿಂಗ್​ನ ಮೊದಲ ವರ್ಷದಿಂದಲೇ ಈ ವಿಷಯ ಅಧ್ಯಯನ ಮಾಡಿ, ಅದರಲ್ಲೇ ಭವಿಷ್ಯ ಕಂಡುಕೊಳ್ಳಬಹುದಾಗಿದೆ. ಭಾರತದ ಯುವಪ್ರತಿಭೆಗಳಿಗೆ ಈ ಸಾಮರ್ಥ್ಯವೂ ಇದೆ. ಮಾಹಿತಿಗಳ ಪ್ರವಾಹವೇ ಈಗ ನಮ್ಮ ಮುಂದಿದೆ. ಎಐ ಮೂಲಕ ಈ ಮಾಹಿತಿ ಪ್ರವಾಹವನ್ನು ವೇಗವಾಗಿ ಅರಿತುಕೊಂಡು, ನಮಗೆ ಬೇಕಾದುದ್ದನ್ನು ಪಡೆದುಕೊಳ್ಳಬಹುದು. ಒಂದು ಲಕ್ಷ ಬುದ್ಧಿವಂತ ಮಿದುಳುಗಳು ಒಟ್ಟಿಗೆ ಏನು ಯೋಚನೆ ಮಾಡುತ್ತವೆಯೋ, ಅದನ್ನು ಒಂದು ಕಂಪ್ಯೂಟರ್ ಮಾಡುವಂತೆ ಪ್ರೊಗ್ರಾಮ್ ಬರೆಯಬಹುದು. ಹಿಂದೆ ವೇದಗಳನ್ನು ಓದಿ, ಅರ್ಥೈಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ನಮ್ಮ ಹಿರಿಯರು ಎಷ್ಟೆಲ್ಲ ಶ್ರಮ ಪಟ್ಟಿದ್ದಾರೆ. ಇದಕ್ಕಾಗಿ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಕಂಪ್ಯೂಟರ್ ಮುಖಾಂತರ ಈ ವೇದವಿಚಾರಗಳನ್ನು ಕಾಪಿಟ್ಟುಕೊಳ್ಳಬಹುದು. ವರ್ಧಿತ ಬುದ್ಧಿಮತ್ತೆ ಮೂಲಕ ರೈತರಿಗೆ ಯಾವ ಬೆಳೆಯನ್ನು, ಯಾವ ಸಂದರ್ಭದಲ್ಲಿ ಬೆಳೆಯಬೇಕು, ಅಲ್ಲಿನ ಭೌಗೋಳಿಕ ಪರಿಸ್ಥಿತಿ, ಹವಾಮಾನಕ್ಕೆ ಅನುಗುಣವಾಗಿ ಹೇಗೆ ಬೆಳೆಯುವುದು ಎಂಬ ಮಾಹಿತಿ ಸುಲಭವಾಗಿ ತಲುಪಿಸಬಹುದು. ಮಾರುಕಟ್ಟೆ ಒದಗಿಸಬಹುದು. ಈ ಮಾಹಿತಿ ನಿಖರ ಮತ್ತು ಸ್ಥಳೀಯವಾಗಿ ಇರುವುದರಿಂದ ರೈತರಿಗೆ ಪ್ರಯೋಜನವಾಗುತ್ತದೆ. ಹಿಂದೆಲ್ಲ ಹಳ್ಳಿಗಳಲ್ಲಿ ಹಿರಿಯರು ಬೆಳೆಗಳ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು, ಬೇಸಾಯ ಪದ್ಧತಿಗಳನ್ನು ತಿಳಿಸಿಕೊಡುತ್ತಿದ್ದರು. ಆದರೆ, ಈಗ ಗ್ರಾಮಗಳಲ್ಲಿ ಅಂಥ ಹಿರಿಯರ ಸಂಖ್ಯೆಯೂ ಕಡಿಮೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಎಐ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಅದೇ ರೀತಿ ಪಕ್ಷಿಗಳ ಸಂಕುಲ ಉಳಿಸಲು, ಕಾಡುಗಳನ್ನು ರಕ್ಷಿಸಿ, ಬೆಳೆಸಲು ಇಂಥ ಮಾಹಿತಿಯ ಅಸ್ತ್ರವನ್ನು ಬಳಸಿಕೊಳ್ಳಬಹುದಾಗಿದೆ. ಸರಿಯಾದ ರೀತಿಯಲ್ಲಿ ಯಂತ್ರಗಳನ್ನು, ಸಂವಹನ ಮಾಧ್ಯಮಗಳನ್ನು ಮತ್ತು ವರ್ಧಿತ ಬುದ್ಧಿಮತ್ತೆ ಬಳಸಿಕೊಂಡರೆ ಮನುಕುಲದ ಹಿತಕ್ಕಾಗಿ, ಪ್ರಕೃತಿಯ ಉಳಿವಿಗಾಗಿ ಮಹತ್ವದ ಕೊಡುಗೆ ನೀಡಬಹುದು. ಕೃತಕತೆಯ ಪೊರೆ ಕಳಚಿ ಮನುಷ್ಯತ್ವವನ್ನು, ನಮ್ಮ ಪ್ರಕೃತಿ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿದೆ.

    ನಾವೇನು ಮಾಡಬಹುದು?

    • ಯಾವುದನ್ನೂ ವಿವೇಚಿಸದೆ, ಅವಲೋಕಿಸದೆ ಸಾರಾಸಗಟಾಗಿ ತಿರಸ್ಕರಿಸುವುದು ಬೇಡ.
    • ಗಣಕಯಂತ್ರದ, ಸಂವಹನ ಮಾಧ್ಯಮಗಳ ಲಾಭಗಳೇನು ಎಂಬುದನ್ನು ಅವಲೋಕಿಸಬೇಕು.
    • ತಂತ್ರಜ್ಞಾನದಿಂದ ನಮ್ಮ ಜೀವನ ಹೇಗೆ ಉತ್ತಮ ಪಡಿಸಿಕೊಳ್ಳಬಹುದು ಎಂಬುದನ್ನು ಚಿಂತನೆ ಮಾಡಿ, ಅಳವಡಿಸಿಕೊಳ್ಳಬೇಕು.

    (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts