More

    ನಾಮಜಪದ ಆಧ್ಯಾತ್ಮಿಕ ಔಚಿತ್ಯ, ಮಾನಸಿಕ ಪರಿಣಾಮ

    ನಾಮಜಪದ ಆಧ್ಯಾತ್ಮಿಕ ಔಚಿತ್ಯ, ಮಾನಸಿಕ ಪರಿಣಾಮದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿರುವಾಗ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಕೆಲಸದ ಮಧ್ಯೆ ಹಾಗೂ ಕೆಲಸದ ನಂತರ, ಕೆಲವು ಕ್ಷಣ ನಾಮಸ್ಮರಣೆಯನ್ನು ಅಭ್ಯಾಸ ಮಾಡುವುದರಿಂದ, ಕೆಲಸವನ್ನು ಕೂಡ ಭಗವತ್ ಕೇಂದ್ರಿತವನ್ನಾಗಿ, ಅಂದರೆ ಅವನ ಪ್ರೀತ್ಯರ್ಥವಾಗಿ ಮಾಡಲು ಸಾಧ್ಯವಾಗುತ್ತದೆ.

    ಭಗವಂತನ ನಾಮಸ್ಮರಣೆ ಮನಸ್ಸನ್ನು ಪರಿಶುದ್ಧಗೊಳಿಸಿ ಭಗವತ್ಪ್ರಾಪ್ತಿಗೆ ಸಹಾಯಕವಾಗುವುದೆಂದು ಭಕ್ತಿಸಂಪ್ರದಾಯದ ಸಂತರು ನಾಮಜಪದ ಮಹತ್ವವನ್ನು ಕುರಿತು ಹೇಳಿದ್ದಾರೆ. ನಾಮ ಮತ್ತು ನಾಮಿ (ಅಂದರೆ ನಾಮವನ್ನು ಸೂಚಿಸುತ್ತಿರುವ ಭಗವತ್ ಸ್ವರೂಪ) ಅಭೇದ. ಅಂದರೆ ಅವೆರಡೂ ಒಂದೇ. ನಾಮವು ಭಗವಂತನ ಶಬ್ದ ಸಂಜ್ಞೆಯಾದರೆ, ಅದರ ಅರ್ಥ ಮತ್ತು ಆಕಾರಸಂಜ್ಞೆ ಆ ಭಗವತ್ ಸ್ವರೂಪ. ಅವು ಒಂದೇ ನಾಣ್ಯದ ಎರಡು ಮುಖಗಳಂತೆ ಪರಸ್ಪರ ಅನ್ಯೋನ್ಯ ಮಾತ್ರವಲ್ಲ, ಅವು ಏಕಮೂಲವಾಗಿ ಇರುವಂಥವು.

    ಹಿಂದೂಧರ್ಮದ ಆಧ್ಯಾತ್ಮಿಕ ಸಾಧನೆಯ ಪ್ರಣಾಳಿಯಲ್ಲಿ ಸಾರ್ವತ್ರಿಕವಾಗಿ ನಾಮಸ್ಮರಣೆ ಅಥವಾ ಮಂತ್ರಜಪದ ಶಬ್ದ ಸಂಜ್ಞೆಗೆ ಪ್ರಾಥಮಿಕ ಸ್ಥಾನವನ್ನು ಕೊಡಲಾಗಿದೆ. ಆದ್ದರಿಂದ ಆಧ್ಯಾತ್ಮಿಕ ಜೀವನವನ್ನು ಕ್ರಮಬದ್ಧವಾಗಿ ಪ್ರಾರಂಭ ಮಾಡುವವರಿಗೆ ಗುರು ಸಾಧನೆಗೆ ನಿರ್ದೇಶನವನ್ನು ನೀಡುವ ಮೊದಲು ಮಂತ್ರದೀಕ್ಷೆಯನ್ನು ಕೊಟ್ಟು, ಸಾಧಕ ತನ್ನ ಸಾಧನೆಯನ್ನು ಪ್ರಾರಂಭಿಸುವಂತೆ ಪ್ರೇರೇಪಿಸುವುದನ್ನು ಕಾಣಬಹುದು. ಮಂತ್ರದೀಕ್ಷೆಯಲ್ಲಿ ಸಾಮಾನ್ಯವಾಗಿ ಗುರುವು ಮಂತ್ರ ಅಥವಾ ದೇವರ ಹೆಸರನ್ನು ಉಪದೇಶಿಸುತ್ತಾರೆ. ಶ್ರದ್ಧೆ, ಭಕ್ತಿಯಿಂದ ನಾಮಸ್ಮರಣೆ ಅಥವಾ ಮಂತ್ರಜಪ ಮಾಡಿದರೆ ಅದರಿಂದ ಪವಿತ್ರವಾದ ಶಬ್ದ ತರಂಗಗಳು ಮನಸ್ಸಿನಲ್ಲಿ ಉದ್ಭವಿಸಿ, ಆಧ್ಯಾತ್ಮಿಕ ಸಂಸ್ಕಾರವನ್ನು ಚಿತ್ತದಲ್ಲಿ ನಿರ್ವಣವಾಗುವಂತೆ ಮಾಡುತ್ತವೆ. ಹೀಗೆ ನಿರ್ವಣವಾದ ಆಧ್ಯಾತ್ಮಿಕ ಸಂಸ್ಕಾರ ಅಂದರೆ ಬೀಜರೂಪದ (Seed Impressions) ಪ್ರಭಾವಗಳು ಸೂಕ್ಷ್ಮ ಆಧ್ಯಾತ್ಮಿಕ ಜಾಗೃತಿಯ ಮೂಲಕೇಂದ್ರಗಳಾಗಿ ಸ್ಮೃತಿ ಪಟಲವನ್ನು ಆವರಿಸುತ್ತವೆ; ಮನಸ್ಸಿನ ಮೇಲೆ ಸತ್ಪರಿಣಾಮವನ್ನು ಬೀರುತ್ತವೆ. ಆದುದರಿಂದ ನಾಮಜಪ ಮಾಡುತ್ತ ಹೋದಂತೆ ಭಗವಂತನ ದಿವ್ಯನಾಮದ ಮಂತ್ರಶಕ್ತಿ ಸತ್ ಸಂಸ್ಕಾರಗಳನ್ನು ಮೂಡಿಸುತ್ತದೆ. ಕ್ರಮೇಣ ಚಿತ್ತಶುದ್ಧಿಯಾಗಿ ಮನಸ್ಸನ್ನು ಊರ್ಧ್ವಮುಖಗೊಳಿಸಿ, ಅದನ್ನು ಭಗವತ್​ಕೇಂದ್ರಿತವನ್ನಾಗಿ ಮಾಡುತ್ತದೆ.

    ಮಿದುಳಿನ ಮೇಲೆ ನಾಮಜಪದ ಪರಿಣಾಮ: ಮನುಷ್ಯನ ಮಿದುಳಿನಲ್ಲಿ ಜೀವವಿಕಾಸದ ನಿಯಮಕ್ಕೆ ಅನುಸಾರವಾಗಿ ಮುಖ್ಯವಾಗಿ ಮೂರು ಸ್ತರಗಳಿವೆ. ಮೊದಲನೆಯದು ಜೈವಿಕವಾದ ಪ್ರಕ್ರಿಯೆಗಳನ್ನು ನಿಯಂತ್ರಿಸುವ, ಪ್ರಾಣಿಗಳ ಸ್ವಭಾವ ನಿರ್ಮಾಣ ಮಾಡುವ ಒಳ ಮಿದುಳು (Limbic System). ಅದರ ಮೇಲೆ ಮಿದುಳಿನ ಮಧ್ಯ ಭಾಗದಲ್ಲಿ (Mid-brain) ಮನುಷ್ಯ ಸ್ವಭಾವದ ಸಾಮಾನ್ಯ ಬುದ್ಧಿಶಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಮಧ್ಯಭಾಗದ ಮಿದುಳಿನ ಸ್ತರ. ನಂತರದ, ಮೇಲಿನ ಸ್ತರದಲ್ಲಿ ಸೃಜನಶೀಲತೆ, ವೈಜ್ಞಾನಿಕ ಸಂಶೋಧನೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ, ಇವುಗಳ ನೆಲೆಯಾದ ಇಂದ್ರಿಯಾತೀತವಾದ ವಿಷಯವನ್ನು ಗ್ರಹಿಸಲು ಸಾಧ್ಯವಾಗುವ ಉತ್ಕೃಷ್ಟವಾದ ಮಿದುಳಿನ ಮೇಲ್ಪದರವಿರುವುದು. Cortex ಎಂದು ಕರೆಯಲ್ಪಡುವ ಇದು ಮನಸ್ಸಿನ ಆಧ್ಯಾತ್ಮಿಕ ಶಕ್ತಿಯ ಉನ್ನತ ಹೊರವಲಯ.

    ಮಿದುಳಿಗೆ ಹೇಗೆ ಸುದ್ದಿಗಳು ತಲುಪುತ್ತವೆ ಹಾಗೂ ಮಿದುಳು ಹೇಗೆ ಆದೇಶವನ್ನು ರವಾನಿಸುತ್ತದೆೆ ಎಂಬುದನ್ನು ಯೋಗಶಾಸ್ತ್ರ ವಿವರಿಸಿದೆ. ಮನುಷ್ಯನ ಬೆನ್ನುಮೂಳೆಯಲ್ಲಿ ಇಡಾ ಮತ್ತು ಪಿಂಗಳಾ ಎಂಬ ಎರಡು ನರಗಳ ಪ್ರವಾಹವಿದೆ. ಅವುಗಳ ಮಧ್ಯದಲ್ಲಿ ಹರಿಯುವ ಟೊಳ್ಳು ನಾಳವೇ ಸುಷುಮ್ನಾ. ಇಡಾ ನಾಡಿ ಸುದ್ದಿಯನ್ನು ಮಿದುಳಿಗೆ ಒಯ್ಯುವುದು. ಪಿಂಗಳಾ ನಾಡಿ ಮಿದುಳಿನಿಂದ ಆಯಾ ಭಾಗಗಳಿಗೆ ಸುದ್ದಿಯನ್ನು ತರುವುದು. ಒಂದು ಜ್ಞಾನೇಂದ್ರಿಯ, ಇನ್ನೊಂದು ಕರ್ವೇಂದ್ರಿಯ. ಒಂದು ಕೇಂದ್ರಾಕರ್ಷಕ, ಇನ್ನೊಂದು ಕೇಂದ್ರಾಪಕರ್ಷಕ. ಈ ರೀತಿ ಎಲ್ಲ ಚಲನೆಗಳೂ ಮತ್ತು ಅವುಗಳ ಸಂವೇದನೆಗಳೂ ಈ ನರತಂತುಗಳ ಮೂಲಕ ಮಿದುಳಿಗೆ ಹೋಗುತ್ತವೆ ಮತ್ತು ಮಿದುಳಿನಿಂದ ಹೊರಬರುತ್ತವೆ. ಇವುಗಳ ಮಧ್ಯೆ ಸುಷುಮ್ನಾ ಕಾಲುವೆ ಇದೆ. ಈ ಕಾಲುವೆ ಮೂಲಕ ಮಾನಸಿಕ ಶಕ್ತಿ ಹರಿದರೆ, ಯಾವುದೇ ನರತಂತುಗಳ ಅವಶ್ಯಕತೆ ಇಲ್ಲದೆ, ಎಲ್ಲ ಜ್ಞಾನವೂ ಒದಗಿ ಬರುವುದು. ಮಿದುಳ ಬಳ್ಳಿಯ ಅಂದರೆ ಸುಷುಮ್ನಾ ಕಾಲುವೆ ಉದ್ದಕ್ಕೂ ಇರುವ ಅನೇಕ ನರಗ್ರಂಥಿಗಳು ಸಾಧಕನು ತನ್ನ ಅನುಭವಕ್ಕೆ ತಂದುಕೊಳ್ಳುವ ಚಕ್ರಗಳನ್ನು ಸೂಚಿಸುತ್ತವೆ. ಅವುಗಳಲ್ಲಿ ಕೆಳಗಿರುವುದು ಮೂಲಾಧಾರ; ಮೇಲಿರುವುದು ಮಿದುಳಿನಲ್ಲಿರುವ ಸಹಸ್ರಾರ. ಹೊಕ್ಕಳಿನ ಸಮೀಪ ಇರುವ ಚಕ್ರವನ್ನು ‘ಮಣಿಪುರ’ ಎಂದು ಕರೆಯುತ್ತಾರೆ. ದೀರ್ಘಕಾಲದ ಅಭ್ಯಾಸ ಮತ್ತು ನಿರಂತರ ಏಕಾಗ್ರತೆ ಮೂಲಕ ಮೂಲಾಧಾರವಿರುವ ಭಾಗ ಜಾಗೃತಗೊಳ್ಳುತ್ತದೆ. ಆಗ ಅಲ್ಲಿ ಸುಪ್ತವಾಗಿರುವ ಶಕ್ತಿ ಕಾರ್ಯೂೕನ್ಮುಖವಾಗಿ ಕ್ರಮವಾಗಿ ಮೇಲ್ಮುಖವಾಗಿರುವ ಒಂದು ಚಕ್ರದಿಂದ ಇನ್ನೊಂದು ಚಕ್ರಕ್ಕೆ ಸಾಗುತ್ತ ಪ್ರಚಂಡ ಪ್ರತಿಕ್ರಿಯೆಯನ್ನು ಉಂಟುಮಾಡುವುದು.

    ಭಗವಂತನ ಮೇಲಿನ ಭಕ್ತಿ, ವಿಶೇಷವಾಗಿ ಏಕಾಗ್ರತೆಯಿಂದ ಮಾಡಲ್ಪಡುವ ನಾಮಜಪ ಅಥವಾ ಮಂತ್ರಜಪದ ಮೂಲಕ ಈ ಶಕ್ತಿ ಜಾಗೃತವಾಗಬಹುದು. ಒಮ್ಮೊಮ್ಮೆ ಸಿದ್ಧಪುರುಷರ ಕೃಪೆಯಿಂದಲೂ ಈ ಶಕ್ತಿ ಜಾಗೃತವಾಗುತ್ತದೆ. ಇದನ್ನೇ ತಂತ್ರಶಾಸ್ತ್ರದಲ್ಲಿ ‘ಕುಂಡಲಿನೀ ಶಕ್ತಿ’ ಎನ್ನುತ್ತಾರೆ.

    ಸಾಮಾನ್ಯ ಶಬ್ದಗಳು ಲೌಕಿಕ, ಇಂದ್ರಿಯಗೋಚರವಾದ ಪ್ರಪಂಚವನ್ನು ಸೂಚಿಸುವ, ಸಾಮಾನ್ಯ ಬುದ್ಧಿಶಕ್ತಿ ಮತ್ತು ಮಿದುಳನ್ನು ಪ್ರಚೋದಿಸುವ ಅರ್ಥವುಳ್ಳವುಗಳು. ಅಂದರೆ ವಿವಿಧ ವಸ್ತುಗಳ, ನೆಲ, ಜಲ, ಇತ್ಯಾದಿ ಮನುಷ್ಯನ ಮಾನಸಿಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅರ್ಥವುಳ್ಳವುಗಳು. ಆದರೆ ಭಗವಂತನ ದಿವ್ಯನಾಮ, ಅಂದರೆ ರಾಮ, ಕೃಷ್ಣ, ಶಿವ, ಓಂ ಮುಂತಾದವು ದೈವೀಸ್ವರೂಪದ ಸಂಜ್ಞೆಗಳು. ಇವು ಇಂದ್ರಿಯಗೋಚರ ಪ್ರಪಂಚಕ್ಕೆ ಅತೀತವಾದ ದೈವೀಸಂಜ್ಞೆಗಳು. ಮನಸ್ಸಿನ ಉನ್ನತಸ್ತರದಲ್ಲಿರುವ ಈ ಆಧ್ಯಾತ್ಮಿಕವಲಯದಲ್ಲಿ (ವಿಜ್ಞಾನಮಯ ಕೋಶ) ನಮ್ಮ ಆಧ್ಯಾತ್ಮಿಕ ಜ್ಞಾನ, ಭಾವನೆ, ಅನುಭವಗಳು ನಿಗೂಢವಾಗಿವೆ. ನಾಮಜಪ ಅಥವಾ ಮಂತ್ರಜಪ ಮಿದುಳಿನ ಮೇಲ್ಪದರಲ್ಲಿ ಸುಪ್ತವಾಗಿರುವ ಉತ್ಕೃಷ್ಟವಾದ ಆಧ್ಯಾತ್ಮಿಕ ಕೇಂದ್ರಗಳನ್ನು ಜಾಗೃತಗೊಳಿಸಿ, ದೈವೀಭಾವ, ಜ್ಞಾನ, ಭಗವದ್ ದರ್ಶನ ಪ್ರಾಪ್ತವಾಗುವಂತೆ ಮಾಡುತ್ತದೆ. ಇದನ್ನು ‘ಪಾತಂಜಲ ಯೋಗಸೂತ್ರ’ದಲ್ಲಿ ಸಂಪ್ರಜ್ಞಾತ ಸ್ಥಿತಿ ಎಂದು ಹೇಳಲಾಗಿದೆ. ಈ ಸ್ಥಿತಿಯಲ್ಲಿ ಬೇರೆ ಬೇರೆ ಪ್ರಕಾರದ ಆಧ್ಯಾತ್ಮಿಕ ಅನುಭವಗಳು ಸಾಧಕನಿಗೆ ಪ್ರಾಪ್ತವಾಗುತ್ತವೆ. ಇದೇ ನಾಮಜಪದ ಪ್ರಭಾವ ಹಾಗೂ ಜಪದ ಮಹಾತ್ಮೆ.

    ಪ್ರಾರ್ಥನೆ ಮತ್ತು ಜಪ: ಭಗವದ್ಗೀತೆಯ ವಿಭೂತಿಯೋಗವೆಂಬ ಅಧ್ಯಾಯದಲ್ಲಿ ಶ್ರೀಕೃಷ್ಣ ‘ಯಜ್ಞಾನಾಂ ಜಪಯಜ್ಞೊಸ್ಮಿ’ ಎನ್ನುತ್ತ ನಾಮಜಪದ ಮಹತ್ವವನ್ನು ತಿಳಿಸಿದ್ದಾನೆ. ನಿತ್ಯಾನುಷ್ಠಾನದ ಜಪ ಸಾಧನೆಯನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯ ಭಗವಂತನ ದಿವ್ಯರೂಪವನ್ನು ಭಾವಿಸಿಕೊಂಡು ಪ್ರಾರ್ಥನೆಯಲ್ಲಿ ತೊಡಗುವುದು ಪರಿಣಾಮಕಾರಿ. ಭಗವಂತನೊಡನೆ ಒಂದು ಸಂಬಂಧವನ್ನು ಕಲ್ಪಿಸಿಕೊಳ್ಳಲು ಪ್ರಾರ್ಥನೆ ನೆರವಾಗುತ್ತದೆ. ಮನಸ್ಸನ್ನು ಜಾಗೃತವಾಗಿಡಲೂ ಅದು ಸಹಾಯ ಮಾಡುವುದು. ಯೋಗಸೂತ್ರದಲ್ಲಿ ‘ತಜ್ಜಪಸ್ತದರ್ಥಭಾವನಮ್ ಎಂದರೆ ಜಪವನ್ನು ರೂಪಸ್ಮರಣೆಯೊಂದಿಗೆ ಮಾಡಬೇಕೆಂದು ಹೇಳಲಾಗಿದೆ. ‘ತದರ್ಥಭಾವನಮ್ ಎಂದರೆ ನಾಮಸ್ಮರಣೆ ಮತ್ತು ರೂಪಸ್ಮರಣೆಯನ್ನು ಅರಿವಿನಿಂದ, ಭಕ್ತಿಯಿಂದ, ಸತತವಾಗಿ (ಸಾಧ್ಯವಾದಷ್ಟು ಏಕಾಗ್ರತೆಯಿಂದ) ಮಾಡಿದಾಗ ಪವಿತ್ರ ಭಾವನೆಗಳು ಜಾಗೃತಗೊಳ್ಳುತ್ತವೆ. ಅದನ್ನು ಆಧ್ಯಾತ್ಮಿಕ ಉದ್ದೇಶದಿಂದ ಅಂದರೆ ಭಗವಂತನ ಪ್ರೀತ್ಯರ್ಥವಾಗಿ ಮಾಡತಕ್ಕದ್ದು.

    ಭಗವಂತನ ನಾಮದಲ್ಲಿ ಅವನ ಶಕ್ತಿ ಸೂಕ್ಷ್ಮರೂಪದಲ್ಲಿ ಹಾಗೂ ಸುಪ್ತವಾಗಿ ಅಡಕವಾಗಿರುವುದರಿಂದ, ನಾಮೋಪಾಸನೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದರೆ ಸುಪ್ತವಾಗಿರುವ ಆ ಮಂತ್ರಶಕ್ತಿ ಕ್ರಮೇಣ ವ್ಯಕ್ತವಾಗುವುದು. ಅದರಿಂದ ಚಿತ್ತಶುದ್ಧಿ ಸಾಧಿತವಾಗಿ ಭಗವಂತನ ದರ್ಶನ ಪ್ರಾಪ್ತವಾಗುವುದು. ಉದಾಹರಣೆಗೆ, ‘ರಾಮಾಯ ನಮಃ’- ‘ರಾಮನಿಗೆ ನಮಸ್ಕಾರ’ ಎಂಬ ಮಂತ್ರದಲ್ಲಿ ‘ಜೀವಾತ್ಮನ ಸ್ವರೂಪವನ್ನು (ಅಂದರೆ ನನ್ನ ನೈಜ ಸ್ವರೂಪವನ್ನು) ತೋರಿಸುವ ಪರಮಾತ್ಮಸ್ವರೂಪನಾದ ಶ್ರೀರಾಮನ ದರ್ಶನಕಾಂಕ್ಷಿಯಾಗಿ, ಅವನ ಅನುಸಂಧಾನ ಮಾಡುತ್ತೇನೆ’ ಎಂದು ಅರ್ಥ. ಅನುಸಂಧಾನ ತೀವ್ರವಾಗಿ ಗಾಢವಾದಂತೆ ಮನಸ್ಸು ಪರಮಾತ್ಮನಲ್ಲಿ ತಲ್ಲೀನವಾಗುತ್ತದೆ, ಕ್ರಮೇಣ ತಾದಾತ್ಮ್ಯೂ ಸಾಧಿಸಲ್ಪಡುತ್ತದೆ. ಹೀಗೆ ನಾಮಜಪ ಜೀವಾತ್ಮ-ಪರಮಾತ್ಮನ ಅನುಸಂಧಾನ, ಐಕ್ಯತೆಯನ್ನು ಸೂಚಿಸುತ್ತದೆ.

    ಸಾಧಕರಿಗೆ ಸಲಹೆಗಳು

    • ನಾಮಸ್ಮರಣೆ ಅಥವಾ ಮಂತ್ರಜಪವನ್ನು ನಿರ್ದಿಷ್ಟವಾದ, ಪವಿತ್ರ ಮತ್ತು ಅನುಕೂಲ ಸ್ಥಾನದಲ್ಲಿ ಪ್ರತಿದಿನ ನಿಗದಿತ ಸಮಯದಲ್ಲಿ ಅಂದರೆ ಬೆಳಗ್ಗೆ ಸ್ನಾನದ ನಂತರ, ಸಂಧ್ಯಾಕಾಲದಲ್ಲಿ ಮಾಡಬಹುದು.
    • ಗುರುವಿನ ನಿರ್ದೇಶದಂತೆ ಜಪಮಾಲೆಯನ್ನು ಉಪಯೋಗಿಸಿ ಅಥವಾ ಬೆರಳೆಣಿಕೆಯಲ್ಲಿ ನಿರ್ದಿಷ್ಟ ಕಾಲ, ನಿರ್ದಿಷ್ಟ ಸಂಖ್ಯೆಯ ಜಪವನ್ನು ಮಾಡಬಹುದು.
    • ಜಪವನ್ನು ಬೆಳಗ್ಗೆ ಎದ್ದ ತಕ್ಷಣ ಮನಸ್ಸನ್ನು ತಮಸ್ಸಿನಿಂದ ನಿವಾರಿಸಿ, ನಿದ್ದೆಯ ನಂತರ ‘ನಾನು’ ಎಂಬ ಭಾವ ಉಂಟಾದ ಕೂಡಲೇ, ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿ, ಹಾಸಿಗೆಯಲ್ಲೇ ಕುಳಿತು ಅಂದರೆ ಒಂದೆರಡು ನಿಮಿಷವಾದರೂ ಜಪ ಮಾಡಿ, ಭಗವಂತನಲ್ಲಿ ಪ್ರಾರ್ಥಿಸಿ, ನಮ್ಮ ಹೊಸದಿನವನ್ನು ದೇವರ ಸ್ಮರಣೆಯಿಂದ ಪ್ರಾರಂಭಿಸುವುದು ಪರಿಣಾಮಕಾರಿ.
    • ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿರುವಾಗ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಕೆಲಸದ ಮಧ್ಯೆ ಹಾಗೂ ಕೆಲಸದ ನಂತರ, ಕೆಲವು ಕ್ಷಣ ನಾಮಸ್ಮರಣೆಯನ್ನು ಅಭ್ಯಾಸ ಮಾಡುವುದರಿಂದ, ಕೆಲಸವನ್ನು ಕೂಡ ಭಗವತ್ ಕೇಂದ್ರಿತವನ್ನಾಗಿ, ಅಂದರೆ ಅವನ ಪ್ರೀತ್ಯರ್ಥವಾಗಿ ಮಾಡಲು ಸಾಧ್ಯವಾಗುತ್ತದೆ.
    • ಕೊನೆಯದಾಗಿ ಮಲಗುವ ಮೊದಲು, ನಿದ್ದೆಯು ನಮ್ಮಿಂದ ಪ್ರಪಂಚವನ್ನು ಮರೆಸುವ ಮೊದಲು, ಕೊನೆಯಪಕ್ಷ ಎರಡು-ಮೂರು ನಿಮಿಷವಾದರೂ ಪ್ರಯತ್ನಪೂರ್ವಕವಾಗಿ ದೇವರ ನಾಮಸ್ಮರಣೆಯನ್ನು ರೂಪಸ್ಮರಣೆಯೊಂದಿಗೆ ಮಾಡುತ್ತ, ಅವನ ಪಾದಾರವಿಂದಗಳಿಗೆ ನಮ್ಮನ್ನು ಅರ್ಪಿಸಿಕೊಳ್ಳಬೇಕು. ಭಗವಂತನ ದಿವ್ಯಸ್ಮ ೃತಿಯನ್ನು ಹೃದಯದಲ್ಲಿ ಜಾಗೃತಗೊಳಿಸಿಕೊಂಡು, ತಲೆದಿಂಬೇ ಅವನ ಪಾದಾರವಿಂದ ಎಂದು ಭಾವಿಸಿ, ನಿದ್ದೆಗೆ ಹೋಗುವ ಅಭ್ಯಾಸ ಮಾಡಿದರೆ, ನಮ್ಮ ನಿದ್ದೆಯ ಕ್ರಮವೇ ಯೋಗನಿದ್ರೆಯಾಗುವುದು. ನಿದ್ರಾಲೋಕ ದೇವಲೋಕವಾಗುವುದು. ಹೀಗೆ ಮಾಡಿದರೆ ದಿವ್ಯಸ್ವಪ್ನಗಳನ್ನು ಪಡೆಯುವ ಸಂಭವವಿರುತ್ತದೆ.
    • ಭಗವಂತನ ನಾಮಕ್ಕೆ ಅಪಾರ ಶಕ್ತಿ ಇದೆ ಎಂಬುದು ಅನೇಕ ಸಂತರ, ಮಹಾತ್ಮರ ಅನುಭವ. ಅದನ್ನು ನಾವು ಸತತವಾಗಿ, ಪೂರ್ಣ ಅರಿವಿನಿಂದ, ಶ್ರದ್ಧಾಭಕ್ತಿಗಳಿಂದ ಅಭ್ಯಾಸ ಮಾಡಿದರೆ ಚಿತ್ತಶುದ್ಧಿ ಸಾಧಿತವಾಗಿ ನಮ್ಮ ಅಂತರಂಗದ ಪರಿವರ್ತನೆಯಾಗುತ್ತದೆ.

    (ಲೇಖಕರು, ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts