More

    ಸ್ವಯಂಭು ಪರಮಾತ್ಮನ ಸ್ವಯಂ ಪ್ರಕಟರೂಪವೇ ಈ ವಿಶ್ವ!

    ಸ್ವಯಂಭು ಪರಮಾತ್ಮನ ಸ್ವಯಂ ಪ್ರಕಟರೂಪವೇ ಈ ವಿಶ್ವ!ಬ್ರಹ್ಮವು ವಿಶೇಷ ಶಕ್ತಿಗಳೊಂದಿಗೆ ಒಂದು ಭೌತಿಕ ರೂಪದಲ್ಲಿ ಅಭಿವ್ಯಕ್ತವಾದಾಗ ಅದನ್ನು ‘ಅವತಾರ’ವೆಂದು ಕರೆಯುತ್ತಾರೆ. ಇಂತಹ ಅವತರಣದ ಮುಖ್ಯ ಉದ್ದೇಶವು ಲೋಕದಲ್ಲಿ ಧರ್ಮಸಂಸ್ಥಾಪನೆಯೇ ಆಗಿದೆ. ಮಾನವತೆಯನ್ನು ವಿಕಸನದ ಮೂಲಕ ಈಗಿರುವುದಕ್ಕಿಂತ ಇನ್ನೂ ಉನ್ನತಸ್ತರಕ್ಕೆ ಏರಿಸುವುದು ಕೂಡಾ ಅವತಾರದ ಉದ್ದೇಶಗಳಲ್ಲಿ ಸೇರಿದೆ.

    ಸೃಷ್ಟಿಮೂಲ ಪರಮೋಚ್ಚ ಚೈತನ್ಯಶಕ್ತಿ – ಬ್ರಹ್ಮವೇ ಸನಾತನ ಧರ್ಮದಲ್ಲಿ ಪರಮಾತ್ಮ ಅಥವಾ ಭಗವಂತ ಎಂಬುದಾಗಿ ಕರೆಯಲ್ಪಟ್ಟಿದೆ ಎಂದು ಹಿಂದಿನ ಅಂಕಣದಲ್ಲಿ ವಿವರಿಸಲಾಗಿತ್ತು. ಈ ಬ್ರಹ್ಮ ವಸ್ತುವಿನ ಮೂರು ಲಕ್ಷಣಗಳೆಂದರೆ ಶಾಶ್ವತ ಸತ್ಯ (ಸತ್ಯಂ), ಪರಿಪೂರ್ಣ ಪ್ರಜ್ಞೆ (ಜ್ಞಾನಂ) ಹಾಗೂ ಅನಂತ ಅಸ್ತಿತ್ವ (ಅನಂತಂ). ನಾವು ಕೆಲವು ಬಾರಿ ಬ್ರಹ್ಮವನ್ನು ‘ಅವನು’ ಅಥವಾ ‘ಅದು’ ಎಂದು ಕರೆಯುತ್ತೇವೆ. ಆದರೆ ಬ್ರಹ್ಮವು ಲಿಂಗಾತೀತವಾಗಿರುವುದರಿಂದ ‘ಅವನೂ ಅಲ್ಲ’, ‘ಅವಳೂ ಅಲ್ಲ’, ಕೊನೆಗೆ ‘ಅದೂ ಅಲ್ಲ’. ಬ್ರಹ್ಮವೆಂದರೆ ಬ್ರಹ್ಮವೇ!

    ಆಂಗ್ಲ ಭಾಷೆಯಲ್ಲಿ ಪರಮಾತ್ಮನನ್ನು GOD ಎಂದು ಕರೆಯುತ್ತಾರೆ. ಈ ಪದವನ್ನು ಪ್ರಥಮಾಕ್ಷರಕವಾಗಿ (Acronym) ತೆಗೆದುಕೊಂಡಾಗ G ಎಂದರೆ Generator (ಸೃಷ್ಟಿಕರ್ತ); O ಎಂದರೆ Organiser (ಸ್ಥಿತಿಕರ್ತ); ಹಾಗೂ D ಎಂದರೆ Destroyer (ಲಯಕರ್ತ). ಬ್ರಹ್ಮವು ಪರಮಾತ್ಮ ಅಥವಾ ಭಗವಂತನಾಗಿ ಸೃಷ್ಟಿ-ಸ್ಥಿತಿ-ಲಯ ಕ್ರಿಯೆಗಳನ್ನು ಚಕ್ರಗತಿಯಲ್ಲಿ ನಿರಂತರವಾಗಿ ಮಾಡುತ್ತಾನೆ. ಈ ವಿದ್ಯಮಾನವು ನಮಗೆ ಸುಲಭಗ್ರಾಹ್ಯ. ಆದರೆ ಈ ವಿಷಯದಲ್ಲಿ ಹಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಬ್ರಹ್ಮವನ್ನು ಸೃಷ್ಟಿಸಿದವರಾರು? ಬ್ರಹ್ಮವು ಹೇಗೆ ಅಸ್ತಿತ್ವಕ್ಕೆ ಬಂದಿತು? ಬ್ರಹ್ಮವು ರೂಪ-ನಾಮಾತೀತವಾಗಿರುವಾಗ, ನಾವು ಆರಾಧಿಸುವ ಪುರುಷ ದೇವತೆಗಳು, ಸ್ತ್ರೀ ದೇವತೆಗಳು, ಅರ್ಧನಾರೀಶ್ವರ ದೇವತೆಗಳು ಹಾಗೂ ಅರ್ಧನರ-ಅರ್ಧಪ್ರಾಣಿ ದೇವತೆಗಳು ಬ್ರಹ್ಮದಿಂದ ಹೇಗೆ ಬಂದರು? ಉತ್ತರವನ್ನು ಕಂಡುಕೊಳ್ಳೋಣ.

    ಶಾಶ್ವತ ಸತ್ಯ ಹಾಗೂ ಅನಂತ ಅಸ್ತಿತ್ವಗಳೇ ಬ್ರಹ್ಮವಸ್ತುವಿನ ಮೂಲ ಲಕ್ಷಣಗಳಾಗಿರುವುದರಿಂದ, ಅದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಬ್ರಹ್ಮವಸ್ತುವಿನ ಲಕ್ಷಣ ನಿರ್ದೇಶವನ್ನು ಮಾಡುವಾಗ, ಬ್ರಹ್ಮವು ಸದಾ ಇತ್ತು, ಈಗಲೂ ಇದೆ ಹಾಗೂ ಮುಂದೆಯೂ ಇರುತ್ತದೆ ಎಂಬ ಪ್ರಮೇಯದ ಆಧಾರದಲ್ಲಿಯೇ ಮಾಡಲಾಗಿದೆ. ಆದ್ದರಿಂದ ಬ್ರಹ್ಮವು ಸ್ವಯಂಭು; ಹಾಗೂ ಯಾವುದೋ ಒಂದು ದಿನ ನಿಗದಿಯಾದ ಸಮಯದಲ್ಲಿ ಅಸ್ತಿತ್ವಕ್ಕೆ ಬರಲಿಲ್ಲ. ಈ ಅರ್ಥದಲ್ಲಿ ಬ್ರಹ್ಮವಸ್ತುವಿಗೆ ಆದಿ ಅಥವಾ ಅಂತ್ಯಗಳಿಲ್ಲವೆಂಬುದನ್ನು ನಾವು ತಿಳಿದುಕೊಳ್ಳಬೇಕು. ಆದರೆ ಮಾನವರಾದ ನಾವು ದೇಶ-ಕಾಲ-ಕಾರ್ಯಕಾರಣ ಸಂಬಂಧಗಳ (Space, Time and Causation) ಇತಿಮಿತಿಗಳಿಗೆ ಸೀಮಿತವಾಗಿರುವುದರಿಂದ, ನಮಗೆ ಇವುಗಳಿಗೆ ಅತೀತವಾದ ಒಂದು ಅಸ್ತಿತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೆಂದೇ ಅನ್ನಿಸಬಹುದು. ಆದರೆ ಅದು ಸರಿಯಲ್ಲ. ಇದಕ್ಕೆ ನಿದರ್ಶನವಾಗಿ ಸ್ವಪ್ನಗಳನ್ನು ತೆಗೆದುಕೊಳ್ಳೋಣ. ನಮಗೆ ಸ್ವಪ್ನದಲ್ಲಿ ಆಗುವ ಅನುಭವಗಳು ದೇಶ-ಕಾಲ-ಕಾರ್ಯಕಾರಣ ಸಂಬಂಧಗಳ ಇತಿಮಿತಿಗಳಿಗೆ ಅತೀತವಾಗಿರುತ್ತವೆಯಲ್ಲವೇ? ಸ್ವಪ್ನದಲ್ಲಿ ನಾವು ಈ ಜಗತ್ತಿನಲ್ಲಿ ನಮಗೆ ಎಂದೆಂದೂ ಕಾಣದೇ ಇರುವ ಎಷ್ಟೋ ವಸ್ತು-ವಿದ್ಯಮಾನಗಳನ್ನು ನೋಡುತ್ತೇವೆ; ಸಮಯದ ಇತಿಮಿತಿಯೇ ಮಾಯವಾಗುತ್ತದೆ; ಕೇವಲ ಹತ್ತು ನಿಮಿಷಗಳ ಸ್ವಪ್ನದಲ್ಲಿ ಅಮೆರಿಕಾ ದೇಶಕ್ಕೆ ಹೋಗಿ ಬರುತ್ತೇವೆ! ಅದೇ ರೀತಿಯಲ್ಲಿ ಕಾರ್ಯಕಾರಣ ಸಂಬಂಧವೂ ತರ್ಕವನ್ನು ಮೀರಿರುತ್ತದೆ. ಇದಕ್ಕೆ ಉದಾಹರಣೆ ಎಂದರೆ ಸ್ವಪ್ನಗಳಲ್ಲಿ ನಾವು ಕೆಲವೊಮ್ಮೆ ಮನುಷ್ಯನು ಆಕಾಶದಲ್ಲಿ ಹಾರುವುದನ್ನು ನೋಡುತ್ತೇವೆ (ಅದು ನಾವೇ ಆಗಿರಬಹುದು); ನಮ್ಮ ಹಾರುವ ವೇಗವು ನಮಗೂ ಊಹಾತೀತ. ಕೆಲವೊಮ್ಮೆ ನಾವು ಸ್ವಪ್ನದಲ್ಲಿ ಹಿಂದೆ ಎಂದೂ ಕಾಣದ ವ್ಯಕ್ತಿಗಳನ್ನು ಸಂಧಿಸುತ್ತೇವೆ. ಇಂತಹ ಎಷ್ಟೋ ವಿಚಿತ್ರ ವಿದ್ಯಮಾನಗಳು ಸ್ವಪ್ನದಲ್ಲಿ ಸಾಧ್ಯವೇ ಹೊರತು, ಈ ಭೌತಿಕ ಜಗತ್ತಿನಲ್ಲಿ ಅವು ಸಾಧ್ಯವಿಲ್ಲ. ಆದರೆ ಸ್ವಪ್ನಾವಸ್ಥೆಯಲ್ಲಿ ಇರುವವರೆಗೂ ಅದುವೇ ಸತ್ಯವಾಗಿರುತ್ತದೆ; ಜಾಗೃತಾವಸ್ಥೆಗೆ ಬಂದಕೂಡಲೇ ಅದು ಸತ್ಯವಲ್ಲವೆಂದು ಗೊತ್ತಾಗುತ್ತದೆ.

    ಹೀಗೆ ನೋಡಿದಾಗ ಈ ಸೃಷ್ಟಿಯೆಲ್ಲವೂ ದೇಶ-ಕಾಲ-ಕಾರ್ಯಕಾರಣ ಸಂಬಂಧಗಳಿಗೆ ಅತೀತನಾದ ಬ್ರಹ್ಮನ ಸ್ವಪ್ನವೆಂದು ಹೇಳಬಹುದು. ಯಾವ ರೀತಿಯಲ್ಲಿ ಸ್ವಪ್ನವು, ಅದನ್ನು ಕಾಣುವ ವ್ಯಕ್ತಿಯಿಂದಲೇ ಉಗಮವಾಗಿ, ಅವನಿಂದಲೇ ಅನುಭವಿಸಲ್ಪಟ್ಟು, ಅವನು ಜಾಗೃತವಾದ ಕೂಡಲೇ ಅಂತ್ಯವಾಗುತ್ತದೆಯೋ, ಅದೇ ರೀತಿಯಲ್ಲಿ ಈ ಸೃಷ್ಟಿಯು ಬ್ರಹ್ಮನಿಂದಲೇ ಉಗಮವಾಗಿ, ಬ್ರಹ್ಮನಿಂದಲೇ ಅನುಭವಿಸಲ್ಪಟ್ಟು, ಅಂತ್ಯದಲ್ಲಿ ಬ್ರಹ್ಮನಲ್ಲಿಯೇ ಪರ್ಯವಸಾನಗೊಳ್ಳುತ್ತದೆ.

    ಇನ್ನೊಂದು ಉದಾಹರಣೆ: ಒಬ್ಬ ವ್ಯಕ್ತಿಯು ತನ್ನ ಸ್ವಪ್ನದಲ್ಲಿ ತಾನೇ ನಿರ್ವಿುಸಿದ ಒಂದು ಮನೆಯಲ್ಲಿ ವಾಸಿಸುತ್ತಾನೆ. ಆದರೆ ಈ ಮನೆಯ ನಿರ್ವಣಕ್ಕೆ ಆತನು ಯಾವುದೇ ವಾಸ್ತುಶಿಲ್ಪಿಯ ಸಹಾಯವನ್ನು ತೆಗೆದುಕೊಂಡಿರುವುದಿಲ್ಲ, ಅಂತೆಯೇ ಯಾವುದೇ ಹೊರಗಿನ ವಸ್ತುಗಳನ್ನು ಬಳಸಿರುವುದಿಲ್ಲ. ಅದೇ ರೀತಿಯಲ್ಲಿ ಈ ಸೃಷ್ಟಿ ಕೂಡ ಯಾವುದೇ ಬಾಹ್ಯ ಸಹಾಯವಿಲ್ಲದೆ ಬ್ರಹ್ಮನಿಂದಲೇ ಉದ್ಭವವಾಗಿದೆ. ಇದು ಮುಂಡಕ ಉಪನಿಷತ್ತಿನಲ್ಲಿ ‘ಊರ್ಣನಾಭಿ’ಯಾದ ಒಂದು ಜೇಡರಹುಳುವಿನ ಉಪಮಾನದಿಂದ ವರ್ಣಿಸಲ್ಪಟ್ಟಿದೆ. ಜೇಡರಹುಳು ಬಲೆಯನ್ನು ತನ್ನ ಉದರದಿಂದಲೇ ಹೊರತೆಗೆಯುತ್ತದೆ, ಅದರಲ್ಲೇ ಇರುತ್ತದೆ ಹಾಗೂ ಕೊನೆಯಲ್ಲಿ ಅದನ್ನು ತನ್ನೊಳಗೇ ಸೆಳೆದುಕೊಳ್ಳುತ್ತದೆ. ಬ್ರಹ್ಮನಿಗೆ ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳು ಇದರಷ್ಟೇ ಸುಲಭ. ಇದಕ್ಕಾಗಿ ಬ್ರಹ್ಮನಿಗೆ ಯಾವುದೇ ಬಾಹ್ಯ ಸಹಾಯ ಬೇಕಾಗಿಲ್ಲ; ಬ್ರಹ್ಮನು ಸ್ವಯಂಸಂಪೂರ್ಣ (Self-sufficient).

    ಮತ್ತೊಂದು ಉದಾಹರಣೆ: ಒಂದು ಮಡಕೆಯು ಸೃಷ್ಟಿಯಾಗಬೇಕಾದರೆ ಕುಂಬಾರ, ಮಣ್ಣು ಹಾಗೂ ಕುಂಬಾರನ ಉಪಕರಣವಾದ ಚಕ್ರ ಅಗತ್ಯ. ಆದರೆ ವಿಶ್ವದ ಸೃಷ್ಟಿಯನ್ನು ತೆಗೆದುಕೊಂಡಾಗ ಬ್ರಹ್ಮನೇ ಕುಂಬಾರ, ಅವನೇ ಮಣ್ಣು ಹಾಗೂ ಅವನೇ ಚಕ್ರ ಕೂಡ. ಸನಾತನ ಧರ್ಮದಲ್ಲಿ ಇದುವೇ ವಿಶ್ವಸೃಷ್ಟಿಯ ಪರಿಕಲ್ಪನೆಯಾಗಿದೆ.

    ಇಂತಹ ಯಾವುದೇ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು, ನಮ್ಮ ಶಾಸ್ತ್ರಗಳಲ್ಲಿ ಹೇಳಿರುವಂತೆ ಶ್ರವಣ, ಮನನ ಹಾಗೂ ನಿಧಿಧ್ಯಾಸನಗಳು ಸಹಾಯ ಮಾಡುತ್ತವೆ. ಇಲ್ಲಿ ಶ್ರವಣವೆಂದರೆ ಕೇಳುವುದು ಅಥವಾ ಓದುವುದು; ಮನನವೆಂದರೆ ಕೇಳಿದ ವಿಷಯದ ಕುರಿತಾಗಿ ಪೂರ್ವಾಪರ ವಿವೇಚನೆಯನ್ನು ಮಾಡಿ ಅದರ ಕುರಿತಾಗಿ ತನ್ನಲ್ಲಿರುವ ಎಲ್ಲಾ ಸಂದೇಹಗಳನ್ನು ಪರಿಹರಿಸಿಕೊಳ್ಳುವುದು; ಇನ್ನೂ ಆಳಕ್ಕೆ ಹೋಗಿ ಅದರ ಧ್ಯಾನವನ್ನು ಮಾಡಿ ಹೃದ್ಗತ ಮಾಡಿಕೊಳ್ಳುವುದೇ ನಿಧಿಧ್ಯಾಸನ. ಈ ರೀತಿಯಲ್ಲಿ ಬ್ರಹ್ಮ, ಪರಮಾತ್ಮ ಹಾಗೂ ಸೃಷ್ಟಿಯ ಕುರಿತಾಗಿಯೂ ಶ್ರವಣ-ಮನನ-ನಿಧಿಧ್ಯಾಸನಗಳನ್ನು ಮಾಡಿ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಈ ಸಿದ್ಧಾಂತವು ಒಂದು ಕಬ್ಬಿನ ತುಂಡು; ಇದನ್ನು ಹೆಚ್ಚು-ಹೆಚ್ಚು ನಮ್ಮ ಬಾಯಲ್ಲಿ ಜಗಿದಂತೆ, ಅದರ ರಸದ ಮಾಧುರ್ಯವು ನಮ್ಮ ಅನುಭವಕ್ಕೆ ಬರುತ್ತದೆ.

    ಸೃಷ್ಟಿಕರ್ತನೂ ಹಾಗೂ ಸೃಷ್ಟಿಮೂಲ ವಸ್ತುವೂ ಬ್ರಹ್ಮವೇ ಆಗಿರುವುದರಿಂದ, ಸನಾತನ ಧರ್ಮವು ಸೃಷ್ಟಿಯ ಕಣಕಣವನ್ನೂ ಬ್ರಹ್ಮವೆಂದೇ ಪರಿಗಣಿಸುತ್ತದೆ. ಇದನ್ನೇ ಈಶಾವಾಸ್ಯ ಉಪನಿಷತ್ತು ‘ಈಶಾವಾಸ್ಯಮಿದಂ ಸರ್ವ ಯತ್ಕಿಂಚ ಜಗತ್ಯಾಂ ಜಗತ್’ ಎಂಬುದಾಗಿ ಹೇಳಿದೆ. ಎಂದರೆ ಈ ಸೃಷ್ಟಿಯಲ್ಲಿರುವ ಎಲ್ಲಾ ಸಜೀವ-ನಿರ್ಜೀವ ವಸ್ತುಗಳೂ ಪರಮಾತ್ಮನೇ. ಇದನ್ನೇ ಛಾಂದೋಗ್ಯ ಉಪನಿಷತ್ತು ‘ಸರ್ವ ಖಲ್ವಿದಂ ಬ್ರಹ್ಮ’ ಎಂದು ಹೇಳಿದೆ-‘ಸೃಷ್ಟಿಯಲ್ಲಿರುವ ಸರ್ವವೂ ಬ್ರಹ್ಮವೇ.’ ಸನಾತನ ಧರ್ಮದ ಅನುಯಾಯಿಗಳು ವೃಕ್ಷಗಳನ್ನು, ನದಿಗಳನ್ನು ಹಾಗೂ ಪರ್ವತಗಳನ್ನು ಅಥವಾ ಇನ್ನಾವುದೇ ವಸ್ತು-ಪ್ರಾಣಿಗಳನ್ನು ಪೂಜಿಸುವುದರ ಅಂತರಾರ್ಥವು ಇದುವೇ ಆಗಿದೆ. ಏಕೆಂದರೆ ಅವರು ಸೃಷ್ಟಿಯ ಕಣಕಣದಲ್ಲೂ ಪರಮಾತ್ಮನನ್ನೇ ಕಾಣುತ್ತಾರೆ. ಇದೊಂದು ಅತ್ಯಂತ ಅದ್ಭುತ ವಿಷಯವಲ್ಲವೇ!

    ಹೀಗಿರುವಾಗ ಸೃಷ್ಟಿಯಲ್ಲಿ ಸರ್ವವೂ ತಾನೇ ಆಗಿರುವ ಬ್ರಹ್ಮವು ಪುರುಷ ಅಥವಾ ಸ್ತ್ರೀ ದೇವತೆಗಳ ರೂಪದಲ್ಲಿ, ಅರ್ಧನಾರೀಶ್ವರ ರೂಪದಲ್ಲಿ ಹಾಗೂ ಇತರ ಯಾವುದೇ ವಿಚಿತ್ರ ರೂಪಗಳಲ್ಲಿ ವ್ಯಕ್ತವಾಗುವುದರಲ್ಲಿ ಏನು ಆಶ್ಚರ್ಯವಿದೆ? ಬ್ರಹ್ಮವು ವಿಶೇಷ ಶಕ್ತಿಗಳೊಂದಿಗೆ ಒಂದು ಭೌತಿಕ ರೂಪದಲ್ಲಿ ಅಭಿವ್ಯಕ್ತವಾದಾಗ ಅದನ್ನು ‘ಅವತಾರ’ವೆಂದು ಕರೆಯುತ್ತಾರೆ. ಶಾಸ್ತ್ರಗಳು ಇಂತಹ ಅವತಾರಗಳನ್ನು ರೂಪ-ನಾಮ-ಗುಣಸಹಿತ ಬ್ರಹ್ಮ ಅಥವಾ ‘ಸಗುಣ ಬ್ರಹ್ಮ’ವೆಂದು ಕರೆಯುತ್ತವೆ. ಅದೇ ರೀತಿಯಲ್ಲಿ ರೂಪ-ನಾಮ-ಗುಣರಹಿತ ಬ್ರಹ್ಮವನ್ನು ‘ನಿರ್ಗಣ ಬ್ರಹ್ಮ’ವೆಂದು ಕರೆಯುತ್ತಾರೆ.

    ಇಂತಹ ಅವತರಣಗಳು ಲೋಕದಲ್ಲಿ ವಿಶೇಷ ಕಾರಣಗಳಿಗಾಗಿ ವಿಶೇಷ ಸನ್ನಿವೇಶಗಳಲ್ಲಿ ಆಗಾಗ ಸಂಭವಿಸುತ್ತಿರುತ್ತವೆ. ಅವತರಣದ ಮುಖ್ಯ ಉದ್ದೇಶವು ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಹೇಳಿದಂತೆ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ.’ ಅವತಾರದ ಮುಖ್ಯ ಉದ್ದೇಶವು ಲೋಕದಲ್ಲಿ ಧರ್ಮಸಂಸ್ಥಾಪನೆಯೇ ಆಗಿದೆ. ಧರ್ಮಸ್ಥಾಪನೆ ಎಂದರೆ, ಕೆಲವು ಬಾರಿ ಕೆಲವರು ಕೇವಲ ಶಿಷ್ಟರಕ್ಷಣೆ ಹಾಗೂ ದುಷ್ಟವಿನಾಶಗಳೆಂದು ತಿಳಿದುಕೊಳ್ಳುವುದುಂಟು. ಆದರೆ ಅದು ಅಷ್ಟೇ ಅಲ್ಲ. ಶಿಷ್ಟರಕ್ಷಣೆ ಹಾಗೂ ದುಷ್ಟವಿನಾಶಗಳು ಸಮಾಜದಲ್ಲಿ ಭದ್ರತೆ ಹಾಗೂ ಸುವ್ಯವಸ್ಥೆಗಳನ್ನು ಸ್ಥಾಪಿಸಲು ನೆರವಾಗಬಹುದು. ಇದು ಪೊಲೀಸ್ ಅಧಿಕಾರಿಗಳು ಒಂದು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಸ್ಥಾಪಿಸಿದಂತೆ. ಆದರೆ ಭಗವದವತಾರದ ಇನ್ನೂ ಆಳವಾದ ಉದ್ದೇಶವೆಂದರೆ ಮಾನವತೆಯನ್ನು ವಿಕಸನದ ಮೂಲಕ ಈಗಿರುವುದಕ್ಕಿಂತ ಇನ್ನೂ ಉನ್ನತಸ್ತರಕ್ಕೆ ಏರಿಸುವುದಾಗಿದೆ. ಇಂತಹ ವಿಕಾಸ ಹೊಂದಿದ ಮಾನವರಿಗೆ ಯಾವುದೇ ಬಾಹ್ಯ ನಿಯಂತ್ರಣಗಳು ಬೇಕಾಗಿಲ್ಲ. ಅಂತಹ ವ್ಯಕ್ತಿಗಳು ಅಂತಃಪ್ರಜ್ಞೆಯ ಪ್ರೇರಣೆಯಿಂದಲೇ ಪಾಪಕಾರ್ಯಗಳಿಂದ ದೂರವಾಗಿ ಪುಣ್ಯಪ್ರದ ಜೀವನವನ್ನು ನಡೆಸುತ್ತಾರೆ. ಇಂತಹ ಮಾನವ ಜನಾಂಗದ ಸೃಷ್ಟಿಯೇ ಅವತಾರದ ಉದ್ದೇಶ.

    ಆದರೆ ಇಂದಿನ ಮಾನವರನ್ನು ಅವಲೋಕಿಸಿದಾಗ ನಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದ್ಭವವಾಗಬಹುದು. ನಿರ್ಮಲ-ನಿರಂಜನ ಬ್ರಹ್ಮವಸ್ತುವಿನಿಂದ ಉಗಮವಾದ ಮಾನವರಲ್ಲಿ ಇಷ್ಟೊಂದು ದೌರ್ಬಲ್ಯಗಳು ಹಾಗೂ ದುಷ್ಟಗುಣಗಳು ಎಲ್ಲಿಂದ ಬಂದವು? ಪರಿಪೂರ್ಣ ಬ್ರಹ್ಮವಸ್ತುವಿನಿಂದ, ಸೃಷ್ಟಿಯ ಮುಕುಟಪ್ರಾಯವಾದ ಮಾನವತೆಯಲ್ಲಿ ಇಂತಹ ಅಪರಿಪೂರ್ಣತೆಯು ಹೇಗೆ ಬಂದಿತು? ಇಂತಹ ಅಪರಿಪೂರ್ಣತೆಯನ್ನು ಹೋಗಲಾಡಿಸಲು ಅದೇ ಬ್ರಹ್ಮವು ಅವತಾರವಾಗಿ ಏಕೆ ಬರಬೇಕು? ಈ ವಿಷಯಗಳನ್ನು ಮುಂದೆ ನೋಡೋಣ.

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts