More

    ಕಾಲೇಜುಗಳಲ್ಲಿ ಕಾಣಿಸದ ಜೀವಕಳೆ: ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರು

    ಮಂಗಳೂರು: ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭವಾಗಿ 15 ದಿನ ಕಳೆದರೂ ತರಗತಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಾಣಿಸುತ್ತಿಲ್ಲ.
    ಕೋವಿಡ್ ಪರೀಕ್ಷೆ ಕಡ್ಡಾಯ, ಆನ್‌ಲೈನ್ ತರಗತಿಗೆ ಅವಕಾಶ, ಹೆತ್ತವರ ಅನುಮತಿ ಪತ್ರ, ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ ಅಗತ್ಯ ಮೊದಲಾದ ಕಾರಣಗಳು ವಿದ್ಯಾರ್ಥಿಗಳನ್ನು ಕಾಲೇಜು ಆವರಣದಿಂದ ದೂರವೇ ಇರಿಸಿವೆ. ಕಾಲೇಜು ಶಿಕ್ಷಣ ಇಲಾಖಾ ಮಾಹಿತಿ ಪ್ರಕಾರ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗುತ್ತಿದ್ದಾರೆ. ಕೆಲವೊಂದು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಕಾಲೇಜಿಗೆ ಕರೆಸಿಕೊಳ್ಳಲು ಮುಂದಾಗಿವೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

    ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಸರಾಸರಿ ಹಾಜರಾತಿ ನೋಡಿದರೆ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಂಖ್ಯೆ ಹೆಚ್ಚಿದೆ. ದ.ಕ ಜಿಲ್ಲೆಯಲ್ಲಿ ಆನ್‌ಲೈನ್ ಶಿಕ್ಷಣವನ್ನು ನೆಚ್ಚಿಕೊಂಡವರ ಸಂಖ್ಯೆ ಬಹುದೊಡ್ಡದು.

    ಕೆಲವು ಕಾಲೇಜುಗಳಲ್ಲಿ ಆಫ್‌ಲೈನ್ ತರಗತಿಗಳನ್ನು ರೆಕಾರ್ಡ್ ಮಾಡಿ ವಿದ್ಯಾರ್ಥಿಗಳಿಗೆ ರವಾನಿಸಲಾಗುತ್ತಿದೆ. ಕೆಲವು ಕಾಲೇಜುಗಳಲ್ಲಿ ತರಗತಿಗಳನ್ನೇ ಲೈವ್ ಆಗಿ ನೀಡಲಾಗುತ್ತಿದೆ. ಹಂಪನಕಟ್ಟೆ ವಿವಿ ಕಾಲೇಜಿನ ಜರ್ನಲಿಸಂ ವಿಭಾಗ ತಮ್ಮದೇ ಯೂಟ್ಯೂಬ್ ಚಾನಲ್ ಮೂಲಕ ಲೈವ್ ಆಗಿ ಮನೆಯಲ್ಲಿರುವ ವಿದ್ಯಾರ್ಥಿಗಳಿಗೂ ತರಗತಿಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿದೆ. 4-5 ವಿದ್ಯಾರ್ಥಿಗಳು ಇದ್ದರೂ, ತರಗತಿ ಮುಂದುವರಿಯುತ್ತಿದೆ.

    ತರಗತಿ ಚಕ್ಕರ್; ಮಾಲ್, ಬೀಚ್‌ನಲ್ಲಿ ಸುತ್ತಾಟ: ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ಕಾಲೇಜಿಗೆಂದು ತೆರಳಿ, ಕಾಲೇಜಿನಲ್ಲಿ ಆನ್‌ಲೈನ್ ತರಗತಿ ಎಂದು ಹೇಳಿ ಮಾಲ್-ಬೀಚ್‌ಗಳಲ್ಲಿ ಸುತ್ತಾಡುತ್ತಾರೆ. ಇತ್ತೀಚೆಗೆ ಬೀಚ್‌ನಿಂದ ಪೊಲೀಸರು ವಿದ್ಯಾರ್ಥಿಗಳನ್ನು ಓಡಿಸಿದ ಘಟನೆಯೂ ನಡೆದಿದೆ. ಕಾಲೇಜಿಗೆ ಬಂದರೆ, ತರಗತಿಗೆ ಹಾಜರಾದರೆ ಮಾತ್ರ ಕರೊನಾ ಬರುತ್ತದೆ. ಹೋಟೆಲ್, ಪಾನಿಪುರಿ, ಜ್ಯೂಸ್-ಐಸ್‌ಕ್ರೀಂ ಪಾರ್ಲರ್‌ಗಳಿಗೆ ಭೇಟಿ ನೀಡಿದರೆ ಕರೊನಾ ಬರೋದಿಲ್ಲ ಎನ್ನುವಂತಾಗಿದೆ. ಸರ್ಕಾರ ಕಾಲೇಜು ಆರಂಭಕ್ಕೆ ಅನುಮತಿ ನೀಡಿ, ಅದರೊಂದಿಗೆ ವಿಧಿಸಿರುವ ಕೆಲವೊಂದು ಷರತ್ತುಗಳಲ್ಲಿ ಸ್ವಲ್ಪ ಮಾರ್ಪಾಡು ಮಾಡಬೇಕು ಎನ್ನುವುದು ಮಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರ ಅಭಿಪ್ರಾಯ.

    ಕಾಸರಗೋಡು ವಿದ್ಯಾರ್ಥಿಗಳು ಹಿಂದೇಟು: ಮಂಗಳೂರಿಗೆ ಬಸ್ ಸಂಚಾರ ಆರಂಭವಾಗಿದ್ದರೂ, ಟಿಕೆಟ್ ದರ ಏರಿಕೆ, ಪಾಸ್ ಇಲ್ಲದಿರುವುದು ಮೊದಲಾದ ಕಾರಣದಿಂದ ಕಾಸರಗೋಡು, ಕುಂಬಳೆ, ಮಂಜೇಶ್ವರ ಭಾಗದ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಮುಂದುವರಿಸಲು ನಿರ್ಧರಿಸಿದ್ದಾರೆ. ಹಿಂದೆ ಕಾಸರಗೋಡು ಭಾಗದ ಹೆಚ್ಚಿನ ವಿದ್ಯಾರ್ಥಿಗಳು ರೈಲಿನಲ್ಲಿ ಬರುತ್ತಿದ್ದರು.

    ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ 76 ಕಾಲೇಜುಗಳ ಮಾಹಿತಿ (ಡಿ.2ರಂದು ಲಭ್ಯವಾದಂತೆ)
    ಜಿಲ್ಲೆ           ವಿದ್ಯಾರ್ಥಿಗಳ ಸಂಖ್ಯೆ      ಹಾಜರಾತಿ    ಶೇಕಡಾವಾರು
    ದ.ಕ             13,771              2,464       17.89
    ಉಡುಪಿ         6,413                 1,929        30.08
    ಕೊಡಗು        965                    406           42.07
    ಒಟ್ಟು           21,149               4,799        22.69

    ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕಲಿಯಲು ಅವಕಾಶವಿದೆ. ಇನ್ನೊಂದೆಡೆ ಸರ್ಕಾರಿ ಆದೇಶದಂತೆ ತರಗತಿಗೆ ಹೋಗದಿದ್ದರೂ, ಹಾಜರಾತಿ ಸಮಸ್ಯೆಯಾಗದು. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿನತ್ತ ಬರುತ್ತಿಲ್ಲ. ಕೆಲವರು ಕಾಲೇಜಿಗೆ ಬಂದರೂ ಆನ್‌ಲೈನ್‌ನಲ್ಲಿ ಅರ್ಥವಾಗದ ವಿಷಯಗಳನ್ನು ಬಗೆಹರಿಸಿ, ಹಿಂತಿರುಗುತ್ತಾರೆ ಹೊರತು ತರಗತಿಗಳಿಗೆ ಹಾಜರಾಗುತ್ತಿಲ್ಲ. ಜನವರಿಯಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ.
    – ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts