More

    ಮೊದಲ ದಿನ ಅಳುಕು, ತರಗತಿಗೆ ಹಾಜರಾದ ವಿದ್ಯಾರ್ಥಿಗಳು ವಿರಳ

    ಮಂಗಳೂರು/ಉಡುಪಿ: ಸುದೀರ್ಘ ಮತ್ತು ಅನಿರೀಕ್ಷಿತ ‘ಕೋವಿಡ್ ರಜೆ’ ಮುಗಿದರೂ, ಮೊದಲ ದಿನ ಕಾಲೇಜು ಮೆಟ್ಟಿಲೇರಿದ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆ ಭಾರಿ ಕಡಿಮೆ. ಮಂಗಳವಾರ ಅಳುಕಿನಿಂದಲೇ ಕಾಲೇಜು ಪ್ರವೇಶ ಮಾಡಿದ ವಿದ್ಯಾರ್ಥಿಗಳು, ಕೆಲವೇ ಗಂಟೆಗಳಲ್ಲಿ ವಾಪಸ್ ಮನೆ ಹಾದಿ ತುಳಿಯಬೇಕಾಯಿತು.

    ವಿವಿ ವ್ಯಾಪ್ತಿಗೆ ಬರುವ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಯ 188 ಕಾಲೇಜುಗಳಲ್ಲಿ ಅಂತಿಮ ವರ್ಷದ ಒಟ್ಟು 20,178 ವಿದ್ಯಾರ್ಥಿಗಳ ಪೈಕಿ 1,131 ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬಂದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ 707 ಮತ್ತು ಖಾಸಗಿ ಕಾಲೇಜಿನಲ್ಲಿ 424 ವಿದ್ಯಾರ್ಥಿಗಳಿಗೆ ಮೊದಲ ದಿನದ ಆಫ್‌ಲೈನ್ ತರಗತಿ ಅನುಭವವಾಗಿದೆ. ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರೂ ಗೈರಾಗಿದ್ದರು. ಮಂಗಳೂರಿನ ಬಲ್ಮಠ, ಎಸ್‌ಡಿಎಂ ಬಿಬಿಎಂ ಕಾಲೇಜಿಗೆ ಮೊದಲ ದಿನ ವಿದ್ಯಾರ್ಥಿಯೇ ಇರಲಿಲ್ಲ.

    ಮಂಗಳವಾರ ಅಂತಿಮ ವರ್ಷದ ಪದವಿ-ಪಾಲಿಟೆಕ್ನಿಕ್, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ಆರಂಭವಾಗಿದ್ದರೂ, ಹಾಜರಾತಿ ಕಡಿಮೆಯಿತ್ತು. ಹೀಗಾಗಿ, ವಿದ್ಯಾರ್ಥಿಗಳಿಗೆ ಮಾಹಿತಿ ರವಾನೆ, ಆನ್‌ಲೈನ್ ಕ್ಲಾಸ್‌ನ ಸಂದೇಹಗಳಿಗೆ ಪರಿಹಾರ ಮೊದಲಾದ ಚಟುವಟಿಕೆಗಳಿಗೆ ಮಾತ್ರ ಮೊದಲ ದಿನ ಸೀಮಿತಗೊಳಿಸಲಾಗಿತ್ತು. ಕಾಲೇಜಿನ ಪ್ರವೇಶ ದ್ವಾರದ ಬಳಿಯಲ್ಲೇ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕಾೃನಿಂಗ್-ಸ್ಯಾನಿಟೈಸ್ ಮಾಡಿ, ಕರೊನಾ ಪ್ರಮಾಣಪತ್ರ, ಹೆತ್ತವರ ಒಪ್ಪಿಗೆ ಪತ್ರ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಯಿತು.

    ಒಂದು ಬೆಂಚ್‌ನಲ್ಲಿ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿತ್ತು. ವಿದ್ಯಾರ್ಥಿಗಳು ಗುಂಪು ಸೇರುವುದು, ಕ್ಯಾಂಪಸ್‌ನಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿತ್ತು. ಹೆಚ್ಚಿನ ಕಾಲೇಜುಗಳಲ್ಲಿ ಬೆಳಗ್ಗೆ 9.30ಕ್ಕೆ ತರಗತಿ ಆರಂಭ ಮಾಡಿ ಮಧ್ಯಾಹ್ನ 12.30ರ ವೇಳೆಗೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು. ಕೆಲವು ಕಾಲೇಜುಗಳಲ್ಲಿ ಮಾತ್ರ ಸಾಯಂಕಾಲವರೆಗೆ ತರಗತಿ ನಡೆಯಿತು.

    ಕೊನೆಯ ಕ್ಷಣದ ಆದೇಶ ಮುಳುವಾಯ್ತು!
    ತರಗತಿಗೆ ತೆರಳಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರವೂ ಅಗತ್ಯ ಎಂದು ಕೊನೇ ಕ್ಷಣದಲ್ಲಿ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜು ತಪ್ಪಿಸಿಕೊಂಡಿದ್ದಾರೆ. ಟೆಸ್ಟ್ ಮಾಡಿಸಿದರೂ ಅನೇಕರಿಗೆ ಪ್ರಮಾಣಪತ್ರ ಲಭಿಸಿಲ್ಲ. ಟೆಸ್ಟ್ ಮಾಡಿಸಿದ್ದೇವೆ, ಪ್ರಮಾಣಪತ್ರ ಸಿಕ್ಕಿಲ್ಲ ಎಂದವರಿಗೂ ತರಗತಿಗೆ ಪ್ರವೇಶ ನೀಡಿಲ್ಲ. ಇನ್ನೊಂದೆಡೆ ಕೆಲವು ಖಾಸಗಿ ಕಾಲೇಜುಗಳು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆಗೆ ವ್ಯವಸ್ಥೆ ಮಾಡಿವೆ. ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿಯೂ ಅಂತಿಮ ವರ್ಷದ ಬೆರಳೆಣಿಕೆ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು. ಹಾಸ್ಟೆಲ್, ಪಿಜಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ, ಹೊರ ಜಿಲ್ಲೆ-ರಾಜ್ಯಗಳ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಮೊರೆ ಹೋಗುವುದು ಅನಿವಾರ್ಯವಾಗಿದೆ.

    ಮೊದಲ ದಿನ ನಿರೀಕ್ಷೆಯಂತೆ ಕೆಲವೇ ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸಿದ್ದಾರೆ. ಕೋವಿಡ್ ವರದಿ ಸಿಗಲು ತಡವಾಗಿದೆ ಎನ್ನುವ ಮಾಹಿತಿಯಿದೆ. ಎರಡು ಮೂರು ದಿನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದು. ಆಫ್‌ಲೈನ್ ತರಗತಿಗಳ ಜತೆಗೆ ಆನ್‌ಲೈನ್ ತರಗತಿ ಹಿಂದಿನಂತೆ ಮುಂದುವರಿಸಲಾಗಿದೆ.
    – ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts