More

    ಕಲೆಕ್ಟರ್ಸ್‌ ಗೇಟ್ ವೃತ್ತ ಅಭಿವೃದ್ಧಿಗೆ ನೀಲ ನಕಾಶೆ

    ಮಂಗಳೂರು: ನಗರದ ಹೃದಯ ಭಾಗವಾದ ಕಲೆಕ್ಟರ್ಸ್‌ ಗೇಟ್ ವೃತ್ತ ಅಭಿವೃದ್ಧಿಗೆ ನೀಲ ನಕಾಶೆ ಸಿದ್ಧಪಡಿಸಲಾಗಿದ್ದು, ಅಭಿವೃದ್ಧಿಗೆ ಅಡ್ಡಿಯಾಗಿದ್ದ ಹಳೇ ಕಟ್ಟಡ ತೆರವಿಗೆ ನಿರ್ಧರಿಸಲಾಗಿದೆ. ಈ ಮೂಲಕ ಶೀಘ್ರ ಸುಗಮ ಸಂಚಾರಕ್ಕೆ ಅವಕಾಶ ಲಭ್ಯವಾಗಲಿದೆ.

    ಕಲೆಕ್ಟರ್ಸ್‌ ಗೇಟ್ ವೃತ್ತದಲ್ಲಿ ಖಾಸಗಿ ಹಳೇ ಕಟ್ಟಡವೊಂದಿದ್ದು, ಹಲವು ವರ್ಷಗಳಿಂದ ರಸ್ತೆ ವಿಸ್ತರಣೆಗೆ ಜಾಗ ಪಡೆಯಲು ಮಹಾನಗರ ಪಾಲಿಕೆಗೆ ಸಾಧ್ಯವಾಗಿರಲಿಲ್ಲ. ಅಂಬೇಡ್ಕರ್ ವೃತ್ತದಿಂದ ಕಲೆಕ್ಟರ್ಸ್‌ ಗೇಟ್ ತನಕ ರಸ್ತೆ ವಿಸ್ತರಣೆ ಆಗಿದ್ದರೂ, ಕಲೆಕ್ಟರ್ಸ್‌ ಗೇಟ್ ವೃತ್ತದಿಂದ ಬೆಂದೂರ್‌ವೆಲ್ ಕಡೆಗೆ ಹೋಗುವ ರಸ್ತೆಯು ಕಲೆಕ್ಟರ್ಸ್‌ ಗೇಟ್ ಬಳಿ ಇಕ್ಕಟ್ಟಗಾಗಿದೆ. ಕೇವಲ ಒಂದು ಬಸ್ ಚಲಿಸುವಷ್ಟು ಅಗಲ ಮಾತ್ರ ಇದೆ. ಈ ಖಾಸಗಿ ಕಟ್ಟಡದ ಮಾಲೀಕರು ಜಾಗ ಬಿಟ್ಟು ಕೊಡುವ ಬಗ್ಗೆ ಈ ಹಿಂದೆ ಪಾಲಿಕೆ ವತಿಯಿಂದ ಸೌಹಾರ್ದಯುತ ಮಾತುಕತೆ ನಡೆಯದ ಕಾರಣ ಇಲ್ಲಿ ರಸ್ತೆ ವಿಸ್ತರಣೆ ಆಗಿರಲಿಲ್ಲ. ಇಲ್ಲಿ ಬೆಳಗ್ಗೆ ಹಾಗೂ ಸಂಜೆಯ ವೇಳೆ ವಾಹನ ದಟ್ಟಣೆ ಉಂಟಾಗುತ್ತದೆ. ಇದರಿಂದ ವಾಹನ ಸಂಚಾರ ನಿರ್ವಹಣೆ ಪೊಲೀಸರಿಗೂ ಸವಾಲಾಗಿತ್ತು.

    ಪಾಳು ಬಿದ್ದ ಕಟ್ಟಡ: ಈ ಕಟ್ಟಡದಲ್ಲಿ ಈ ಹಿಂದೆ ಕೆನರಾ ಬ್ಯಾಂಕಿನ ಕಲೆಕ್ಟರ್ಸ್‌ ಗೇಟ್ ಶಾಖೆ ಕಾರ್ಯನಿರ್ವಹಿಸುತ್ತಿತ್ತು. ಇಕ್ಕಟ್ಟಾದ ಜಾಗ ಹಾಗೂ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಕೆಲವು ವರ್ಷಗಳ ಹಿಂದೆ ಬ್ಯಾಂಕ್ ಖಾತೆಯನ್ನು ಸ್ಥಳಾಂತರಿಸಲಾಗಿತ್ತು. ಆ ಬಳಿಕ ಹಲವಾರು ವರ್ಷಗಳಿಂದ ಈ ಕಟ್ಟಡದ ಬ್ಯಾಂಕ್ ಇದ್ದ ಜಾಗ ಖಾಲಿಯಾಗಿದೆ. ಕಟ್ಟಡಕ್ಕೆ ಹೊರಗಿನಿಂದ ಪೈಂಟಿಂಗ್ ಆಗದೆ ಹಲವು ವರ್ಷಗಳಾಗಿದ್ದು, ಪಾಳು ಬಿದ್ದಂತಿದೆ.

    ಮಾಲೀಕರ ಜತೆ ಮಾತುಕತೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 300ಕ್ಕಿಂತಲೂ ಅಧಿಕ ಅಭಿವೃದ್ಧಿ ಕಾಮಗಾರಿಗಳು ನ್ಯಾಯಾಲಯದ ವ್ಯಾಜ್ಯದಿಂದ ತಡೆಯಾಗಿದೆ. ಪ್ರಸ್ತುತ ಅಭಿವೃದ್ಧಿಗೆ ಹಿನ್ನೆಡೆಯಾಗಬಾರದು ಎನ್ನುವ ಉದ್ದೇಶದಿಂದ ಇಂತಹ ಜಟಿಲ ಸವಸ್ಯೆಗಳನ್ನು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲೆಕ್ಟರ್ಸ್‌ ಗೇಟ್ ವೃತ್ತದಲ್ಲಿರುವ ಹಳೇ ಕಟ್ಟಡದ ಮಾಲೀಕರ ಜತೆ ಮಾತುಕತೆ ನಡೆಸಲಾಗಿದೆ. ಹೊಸ ಕಟ್ಟಡ ಕಟ್ಟುವಾಗ ಪಾಲಿಕೆಯಿಂದ ಪೂರ್ಣ ಸಹಕಾರ ನೀಡುವ ಭರವಸೆ ನೀಡಲಾಗಿದೆ. ಸೆಟ್‌ಬ್ಯಾಕ್ ಬಿಟ್ಟು ಕೊಟ್ಟು ಕಟ್ಟಡ ಕಟ್ಟಿಸಲು ಇದಕ್ಕೆ ಪೂರಕವಾಗಿ ಸೂಕ್ತ ಟಿಡಿಆರ್ ಸೌಲಭ್ಯ ಒದಗಿಸುವ ಬಗ್ಗೆ ಮಾತುಕತೆ ನಡೆದಿದೆ.

    ವೃತ್ತ ಅಭಿವೃದ್ಧಿಗೆ ಹಳೇ ಕಟ್ಟಡ ಅಡ್ಡಿ: ಮಂಗಳೂರು ನಗರದ ಬಹುತೇಕ ರಸ್ತೆಗಳು ವಿಸ್ತರಣೆಗೊಂಡು ಕಾಂಕ್ರಿಟೀಕರಣಗೊಂಡಿವೆ. ಇನ್ನು ಕೆಲವು ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಆದರೆ ಕಲೆಕ್ಟರ್ಸ್‌ ಗೇಟ್ ವೃತ್ತದ ಬಳಿ ರಸ್ತೆ ಅಭಿವೃದ್ಧಿ ಆಗಿಲ್ಲ. ರಸ್ತೆ ವಿಸ್ತರಣೆ ಆಗದ ಕಾರಣ ಈ ವೃತ್ತ ಕೂಡ ಅಭಿವೃದ್ಧಿ ಆಗಿಲ್ಲ. ಇಲ್ಲಿರುವ ಹಳೇ ಕಟ್ಟಡ ಸ್ಮಾರ್ಟ್ ಸಿಟಿಗೆ ಕಪ್ಪು ಚುಕ್ಕೆಯಂತಾಗಿತ್ತು. ಶೀಘ್ರದಲ್ಲೇ ಸೌಹಾರ್ದಯುತವಾಗಿ ಬಗೆ ಹರಿದು ಶೀಘ್ರ ಕಲೆಕ್ಟರ್ಸ್‌ ಗೇಟ್ ವೃತ್ತ ಅಭಿವೃದ್ಧಿಯ ನಿರೀಕ್ಷೆ ಹೊಂದಲಾಗಿದೆ.

    ಕಲೆಕ್ಟರ್ಸ್‌ ಗೇಟ್ ವೃತ್ತದಲ್ಲಿರುವ ಹಳೇ ಕಟ್ಟಡ ತೆರವುಗೊಳಿಸಿ ಶೀಘ್ರದಲ್ಲೇ ರಸ್ತೆ ವಿಸ್ತರಣೆ ಹಾಗೂ ವೃತ್ತ ಅಭಿವೃದ್ಧಿಯಾಗಲಿದೆ. ಕಟ್ಟಡದ ಮಾಲೀಕರ ಜತೆ ಮಾತುಕತೆ ನಡೆಸಲಾಗಿದೆ. ಅಭಿವೃದ್ಧಿ ಕಾಮಗಾರಿಗೆ ಸಹಕಾರ ಮಾಡುವುದಾಗಿ ಮಾಲೀಕರು ತಿಳಿಸಿದ್ದಾರೆ. ಕಂಕನಾಡಿಯಲ್ಲೂ ಕಟ್ಟಡವೊಂದರ ಮಾಲೀಕರು ತನ್ನ ಕಟ್ಟಡದ ಎದುರು ಭಾಗವನ್ನು ರಸ್ತೆ ವಿಸ್ತರಣೆಗೆ ನೀಡಿ ಸಹಕಾರ ಮಾಡಿದ್ದಾರೆ.
    ನವೀನ್ ಡಿಸೋಜ, ಮನಪಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts