More

    ವೀರ ಯೋಧರ ಸ್ಮರಣೆಗಾಗಿ ಮಣ್ಣು, ಅಕ್ಕಿ ಸಂಗ್ರಹ

    ಎನ್.ಆರ್.ಪುರ: ದೇಶ ಸೇವೆ ಸಲ್ಲಿಸುತ್ತಿರುವ ವೀರ ಯೋಧರನ್ನು ಹಾಗೂ ದೇಶಕ್ಕಾಗಿ ಶ್ರಮಿಸಿದವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಹೇಳಿದರು.

    ಶುಕ್ರವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಡಿ ದೇಶಕ್ಕಾಗಿ ಮಡಿದವರ ಗೌರವಾರ್ಥ ಗ್ರಾಪಂಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಅಕ್ಕಿಯನ್ನು ಜಿಲ್ಲಾ ಕೇಂದ್ರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದೇಶದ ಪರಂಪರೆ ಯುವಜನರಿಗೆ ತಿಳಿಸಲಾಗುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಡಿ ಅಮೃತ ಸರೋವರ ಕಾರ್ಯಕ್ರಮದಡಿ ಗ್ರಾಪಂಗಳ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ವೀರ ಯೋಧರ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ನಮ್ಮ ಊರಿನ, ತಾಲೂಕಿನ ಮಣ್ಣು ಮತ್ತು ಅಕ್ಕಿ ದೆಹಲಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
    ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮಾತನಾಡಿ, ಅಮೃತ ಮಹೋತ್ಸವ ಭಾಗವಾಗಿ ನನ್ನ ಮಣ್ಣು, ನನ್ನ ದೇಶ ಎಂಬ ಧ್ಯೇಯ ವಾಕ್ಯದಡಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ತಾಲೂಕು ಭತ್ತದ ಕಣಜ. ಇಂಥ ತಾಲೂಕಿನಿಂದ ಮಣ್ಣು ಮತ್ತು ಅಕ್ಕಿ ಸಂಗ್ರಹಿಸಿ ದೆಹಲಿಗೆ ಕಳುಹಿಸುತ್ತಿರುವುದು ಹೆಮ್ಮೆ ಎಂದರು.
    ಶೃಂಕೋನ ಮಾಜಿ ಸೈನಿಕರ ಅಂಘದ ಅಧ್ಯಕ್ಷ ಯತಿರಾಜ್ ಮಾತನಾಡಿ, ಸೈನಿಕರೆಂದರೆ ದೇಶದ ಗಡಿ ಕಾಯುವ ಕೆಲಸ ಮಾತ್ರವಿರುವುದಿಲ್ಲ. ಸೇನೆಯಲ್ಲೂ ಅನೇಕ ಹುದ್ದೆಗಳಿರುತ್ತವೆ. ದೇಶ ಸೇವೆ ಸಿಗುವುದೇ ಭಾಗ್ಯ. ದೇಶದ ಪ್ರತಿ ಕುಟುಂಬದಿಂದಲೂ ಒಬ್ಬರನ್ನು ದೇಶ ಸೇವೆಗಾಗಿ ಕಳುಹಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಪಪಂ ಸದಸ್ಯೆ ಜುಬೇದಾ ಮಾತನಾಡಿ, ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ದೇಶಕ್ಕಾಗಿ ನಾವು ಏನಾದರೂ ಕೊಡುಗೆ ನೀಡಬೇಕು. ದೇಶ ರಕ್ಷಣೆ ವಿಚಾರದಲ್ಲಿ ನಾವೆಲ್ಲರೂ ಜಾತಿ, ಮತ, ಭೇದ ಇಲ್ಲದೆ ಒಗ್ಗೂಡಬೇಕು ಎಂದು ಹೇಳಿದರು.
    ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಾಪಂವರೆಗೆ ಮಣ್ಣು ಮತ್ತು ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು. ಮೆರವಣಿಗೆಯಲ್ಲಿ ಅಜ್ಜಂಪುರದ ಮಹಿಳಾ ವೀರಗಾಸೆ ತಂಡದ ನೃತ್ಯ ಗಮನ ಸೆಳೆಯಿತು.
    ಪಿಎಸ್‌ಐ ಶ್ರೀಗುರು ಸಜ್ಜನ್, ಶಂಕೋನ ಮಾಜಿ ಸೈನಿಕರ ಸಂಘದ ಯತಿರಾಜ್, ಗಣೇಶ್, ಜೋನಿ, ಮ್ಯಾಥ್ಯೂ, ಪಪಂ ಸದಸ್ಯ ಆರ್.ಕುಮಾರಸ್ವಾಮಿ, ಡಿಎಸ್‌ಎಸ್ ಮುಖಂಡ ಡಿ.ರಾಮು, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಕಂದಾಯ ನಿರೀಕ್ಷಕ ಎಚ್.ಮಂಜುನಾಥ್, ಲಕ್ಷ್ಮಣ್ ಗೌಡ, ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ, ನಿರಂಜನಮೂರ್ತಿ, ಪುನಿತ್, ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸ್ವಯಂ ಸೇವಕರು, ಅಂಗನವಾಡಿ ಕಾರ್ಯಕರ್ತೆಯರು, ತಾಪಂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts