More

    ಕಾಫಿ ಟೇಬಲ್ ಬುಕ್‌ನಲ್ಲಿ ಅವಳಿ ಜಿಲ್ಲೆಯ ಶ್ರೀಮಂತಿಕೆ ಅನಾವರಣ

    ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಸಾಮ್ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಕಾಫಿ ಟೇಬಲ್ ಬುಕ್‌ನ್ನು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ತಮ್ಮ ಕಚೇರಿಯಲ್ಲಿ ಗುರುವಾರ ಬಿಡುಗಡೆಗೊಳಿಸಿದರು.

    ಸ್ಮಯೋರ್(ಎಸ್‌ಎಂಐಒಆರ್‌ಇ) ಅಧ್ಯಕ್ಷ ಟಿ.ಆರ್.ರಘುನಂದನ್ ಮಾತನಾಡಿ, ಬಳ್ಳಾರಿ ಜಿಲ್ಲಾಡಳಿತ ಮತ್ತು ಸ್ಮಯೋರ್ ಕಂಪನಿ ಜಂಟಿಯಾಗಿ ಕಾಫಿ ಟೇಬಲ್ ಪುಸ್ತಕ ಸಿದ್ಧಪಡಿಸಿದ್ದು, ಬಳ್ಳಾರಿ ಮತ್ತು ವಿಜಯನಗರ ಪ್ರದೇಶದ ಶ್ರೀಮಂತ ಸಂಸ್ಕೃತಿಯ ಅನಾವರಣ, ಬ್ರಿಟಿಷ್ ವಸಾಹತುಶಾಹಿ, ಮಧ್ಯಯುಗದ ಪರಂಪರೆ, ಇತಿಹಾಸ, ಪ್ರಕೃತಿ, ಸಸ್ಯವರ್ಗ ಮತ್ತು ವಿಶಿಷ್ಟ ಪ್ರಾಣಿಸಂಕುಲಗಳ ಪರಿಚಯ, ಹಂಪಿಯ ಶಿಲ್ಪಕಲೆ ಮತ್ತು ಅವಶೇಷಗಳು ಸೇರಿ ವಿವಿಧ ಪ್ರಮುಖ ವಿಷಯಗಳು ಹಾಗೂ ಅತ್ಯಾಕರ್ಷಕ ಫೋಟೊಗುಚ್ಛಗಳ ಸಂಗ್ರಹವನ್ನು ಕಾಫಿ ಟೇಬಲ್ ಬುಕ್ ಒಳಗೊಂಡಿದೆ ಎಂದು ತಿಳಿಸಿದರು. ಹಿಂದಿನ ಡಿಸಿ ಎಸ್.ಎಸ್.ನಕುಲ್ ಪರಿಕಲ್ಪನೆ ಇದು. ಸಂಸ್ಥೆಯು ಇದನ್ನು ಪ್ರಾಯೋಜಿಸಲು ಒಪ್ಪಿಕೊಂಡಿತ್ತು. ಹಾಲಿ ಡಿಸಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಹೊರತರಲು ಸಾಧ್ಯವಾಯಿತು ಎಂದರು.

    ದಿ.ಎಂ.ವೈ.ಘೋರ್ಪಡೆ ಅವರ ಹೆಜ್ಜೆಗಳನ್ನು ಅನುಸರಿಸಿ, ಅವರ ಮೊಮ್ಮಗ ಬಹೀರ್ಜಿ ಘೋರ್ಪಡೆ ಅವರು ಸಂಡೂರು ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ಸುಕರಾಗಿದ್ದು, ಅಲ್ಲಿನ ಅದ್ಭುತ ಛಾಯಾಚಿತ್ರಗಳನ್ನು ನೀಡುವ ಮೂಲಕ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

    ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತ ಡಾ.ಆಕಾಶ್ ಶಂಕರ್, ಸ್ಮಯೋರ್ ನಿರ್ದೇಶಕ (ಗಣಿ) ಎಂ.ಡಿ.ಅಬ್ದುಲ್ ಸಲೀಮ್, ಖ್ಯಾತ ಛಾಯಾಗ್ರಾಹಕರು ಹಾಗೂ ವೈದ್ಯರಾದ ಡಾ.ಎಸ್.ಕೆ. ಅರುಣ, ಹಿರಿಯ ಪತ್ರಕರ್ತ ಎಂ.ಅಹಿರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts