More

    ಎಕ್ಸ್‌ಕ್ಲೂಸಿವ್ ಕಾಫಿ ಟೇಬಲ್ ಲೈಬ್ರರಿಯಲ್ಲಿ ಗ್ರಂಥ ಸಂಗ್ರಹ

    ಪ್ರಕಾಶ್ ಮಂಜೇಶ್ವರ, ಮಂಗಳೂರು
    ಪದಗಳಿಗೂ ಸಾವಿರ ಪಟ್ಟು ಅರ್ಥ ಧ್ವನಿಸುವ ಚಿತ್ರಗಳಿರುವ 3 ಸಾವಿರಕ್ಕೂ ಅಧಿಕ ಕಾಫಿ ಟೇಬಲ್ ಪುಸ್ತಕಗಳು, ಜಗತ್ತಿನ ಕಲೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ವಿಜ್ಞಾನ, ತತ್ವಜ್ಞಾನ, ವಾಸ್ತುಶಾಸ್ತ್ರ ಸಹಿತ ಸಮಗ್ರ ವಿಷಯಗಳ ಹೊಸ ಒಳನೋಟಗಳನ್ನು ಹೊಂದಿರುವ 8 ಸಾವಿರಕ್ಕೂ ಅಧಿಕ ಹೊತ್ತಗೆಗಳ ಅಪರೂಪದ ಸಂಗ್ರಹ…

    – ಇದು ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರ ಕಚೇರಿಯಲ್ಲಿ ಸಿದ್ಧಪಡಿಸಿದ ಕಾಫಿ ಟೇಬಲ್ ಎಕ್ಸ್‌ಕ್ಲೂಸಿವ್ ‘ವಿದ್ಯಾ ವಾರಿಧಿ’ ಗ್ರಂಥಾಲಯದ ವಿಶೇಷತೆ. ಕಾಫಿ ಟೇಬಲ್ ಹೊರತುಪಡಿಸಿದ ಪುಸ್ತಕಗಳೂ ದೊಡ್ಡ ಪ್ರಮಾಣದಲ್ಲಿವೆ.

    ಜಗತ್ತಿನ ಯಾವುದೇ ಮಾಹಿತಿಯನ್ನು ಇಂದು ಕ್ಷಣಾರ್ಧದಲ್ಲಿ ಅಂತರ್ಜಾಲದಲ್ಲಿ ಪಡೆಯಬಹುದು. ಆದರೆ ಪುಸ್ತಕ ಪರಾಂಬರಿಸುವ ಮತ್ತು ಓದುವ ಸುಖ ಏನು ಎನ್ನುವುದನ್ನು ಇಲ್ಲಿನ ಪುಸ್ತಕಗಳು ಸಹೃದಯ ಓದುಗನಿಗೆ ಒದಗಿಸುತ್ತದೆ.

    ಗ್ರಂಥಾಲಯದಲ್ಲಿರುವ ಗುಣಮಟ್ಟದ ಕಾಗದಗಳಲ್ಲಿ ಸಂಕ್ಷಿಪ್ತ ಪರಿಚಯ, ವಿಸ್ತಾರ ಹಾಗೂ ವಿಶ್ವದರ್ಜೆ ಗುಣಮಟ್ಟದ ಚಿತ್ರಗಳಿರುವ ಕಾಫಿ ಟೇಬಲ್ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅಪೂರ್ವ ಕೊಡುಗೆಯಾಗಬಹುದು. ನಿರ್ದಿಷ್ಟ ಸ್ಥಳಕ್ಕೆ ಭೇಟಿ ನೀಡಿದವರ ಕಣ್ಣುಗಳು ಗಮನಿಸಿರದ ವಿಶೇಷ ಫೋಟೋಗಳಿರುವ ಪುಸ್ತಕಗಳೂ ಇವೆ.
    2 ಸಾವಿರ ರೂ.ನಿಂದ 50 ಸಾವಿರ ರೂ.ತನಕ ಬೆಲೆಯುಳ್ಳ ಈ ಕಾಫಿ ಟೇಬಲ್ ಪುಸ್ತಕಗಳನ್ನು ಸಾರ್ವಜನಿಕರು ಇಲ್ಲಿ ಉಚಿತವಾಗಿ ಅಧ್ಯಯನ ಮಾಡಬಹುದು. ಸುಪ್ರಸಿದ್ಧ ವರ್ಣಚಿತ್ರಗಾರ ರಾಜಾರವಿವರ್ಮನ ಚಿತ್ರಗಳು, ಭಾರತದ ಪವಿತ್ರ ಸ್ಥಳಗಳು, ಸಮುದ್ರದ ಚಿಪ್ಪುಗಳು, ಜಗತ್ತಿನ ಅದ್ಭುತಗಳು, ಪ್ರಸಿದ್ಧ ವೈದ್ಯರು ಮೊದಲಾದ ವೈವಿಧ್ಯಮಯ ಪುಸ್ತಕಗಳು ಈ ಗ್ರಂಥಾಲಯಲ್ಲಿವೆ.

    ಐನ್‌ಸ್ಟೀನ್ ಕೈಬರಹದ ಪುಸ್ತಕ!: ವಿಶ್ವವಿಖ್ಯಾತ ಭೌತ ವಿಜ್ಞಾನಿ ಐನ್‌ಸ್ಟೀನ್ ಕೈಬರಹದಲ್ಲೇ ಇರುವ ‘ಉಐಘೆಖಉಐಘೆ’ಖ 1912 “EINSTEIN’S 1912 MANUSCRIPT ON THE SPECIAL THEORY OF RELATIVITY’ ಪುಸ್ತಕವೂ ಈ ಲೈಬ್ರರಿಯಲ್ಲಿದೆ. ಅದೆಷ್ಟೋ ವಿದ್ಯಾರ್ಥಿಗಳು ವಿಜ್ಞಾನಿಗಳು ಆಗಲು ಈ ಪುಸ್ತಕ ಪ್ರೇರೇಪಿಸಬಹುದು. ಬರಹದ ಜತೆಗಿರುವ ಅಡಿ ಗೆರೆ, ವಿವಿಧ ಸಾಂಕೇತಿಕ ಗುರುತುಗಳು ಅರ್ಧ ಶತಮಾನದ ಹಿಂದೆ ಬದುಕಿದ ಮಹಾವಿಜ್ಞಾನಿಯ ಸ್ವಭಾವವನ್ನು ನೆನಪಿಸಿ ವಿದ್ಯಾರ್ಥಿಗಳಲ್ಲಿ ಪುಳಕ ಹುಟ್ಟಿಸಬಹುದು! ಇನ್ನೊಂದೆಡೆ, ‘ಬರ್ಡ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಗುರುತಿಸಿಕೊಂಡ ಪಕ್ಷಿ ವಿಜ್ಞಾನಿ ಡಾ.ಸಲೀಂ ಆಲಿ ಅವರು ಪಕ್ಷಿಗಳ ಕುರಿತು ಬರೆದ ಸಮಗ್ರ ಸಂಪುಟವೂ ಇಲ್ಲಿದೆ. ಪಕ್ಷಿಗಳ ಬಗ್ಗೆ ಹೆಚ್ಚಿನ ಒಲವು ಬೆಳೆಸಿಕೊಂಡ ವಿದ್ಯಾರ್ಥಿ/ವಿದ್ಯಾರ್ಥಿನಿಯ ಬದುಕಿನ ದೃಷ್ಟಿಕೋನವನ್ನೇ ಈ ಪುಸ್ತಕ ಬದಲಿಸಬಹುದು. ಇಂಥ ಹಲವು ಪುಸ್ತಕಗಳನ್ನು ವಿದ್ಯಾರ್ಥಿಗಳು ಗಮನಿಸಲಿ ಎನ್ನುವುದು ಈ ಗ್ರಂಥಾಲಯ ಸ್ಥಾಪಕರ ಆಶಯ.

    ಕಪಾಟುಗಳಿಗೆ ಬೀಗವಿಲ್ಲ!: ಭಾರಿ ಬೆಲೆಬಾಳುವ ಪುಸ್ತಕಗಳಿರುವ ಈ ಗ್ರಂಥಾಲಯದ ಕಪಾಟುಗಳಿಗೆ ಬೀಗ ಹಾಕುವುದಿಲ್ಲ ಎನ್ನುವುದು ವಿಶೇಷ. ಪುಸ್ತಕ ಹುಡುಕಾಟ ನಡೆಸುವವರಿಗೆ ಅನುಕೂಲವಾಹಲಿ ಎಂದು ಪುಸ್ತಕಗಳನ್ನು ವಿಷಯವಾರು ಜೋಡಿಸಲಾಗಿದೆ. ಗ್ರಂಥಾಲಯ ನಿರ್ವಹಣೆಗಾಗಿಯೇ ಸಿಬ್ಬಂದಿಯನ್ನೂ ನೇಮಿಸಲಾಗಿದೆ.

    ಎಕ್ಸ್‌ಕ್ಲೂಸಿವ್ ಕಾಫಿ ಟೇಬಲ್ ಪುಸ್ತಕಗಳು ಗ್ರಂಥಾಲಯದ ವಿಶೇಷ. ಮಕ್ಕಳು ಯಾವ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು? ಆ ಮಾರ್ಗವನ್ನು ಕ್ರಮಿಸುವ ಬಗೆ ಹೇಗೆ ಎನ್ನುವ ವಿಷಯಕ್ಕೆ ಪೂರಕವಾಗಿ ಒಂದು ಜ್ಞಾನದ ಕಿಡಿ ಗೋಚರಿಸಲು ಈ ಗ್ರಂಥಾಲಯ ನೆರವಾಗಬಹುದು ಎನ್ನುವುದು ಸ್ಥಾಪಕರ ಆಶಯ. ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಮಕ್ಕಳನ್ನು ಶಾಲೆಗಳ ಮೂಲಕ ಆಹ್ವಾನಿಸುವ ಚಿಂತನೆ ಇದೆ.
    ಗುರುದತ್ ಬಾಳಿಗ ನಿರ್ದೇಶಕರು, ವಿಶ್ವ ಕೊಂಕಣಿ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts