More

    ಭುವನೇಶ್ವರಿ ಕಾಟಕ್ಕೆ ಕಾಫಿ ಬೆಳೆಗಾರರು ತತ್ತರ

    ಚಿಕ್ಕಮಗಳೂರು: ಕಾಫಿನಾಡಿಗೆ ಭುವನೇಶ್ವರಿ ಕಾಟ ಹೆಚ್ಚಾಗಿದೆ. ಇದು ತಾಯಿ ಭುವನೇಶ್ವರಿ ಅಲ್ಲ, ಭುವನೇಶ್ವರಿ ನೇತೃತ್ವದ ಆನೆಗಳ ಕಾಟ. ಈ ಆನೆಗಳ ತಂಡ ಇಡೀ ಕಾಫಿ ನಾಡನ್ನು ಹೆದರಿಸಿವೆ. ಪ್ರತಿದಿನ ಒಂದಲ್ಲ ಒಂದು ತೋಟಗಳ ಮೇಲೆ ದಾಳಿ ಮಾಡುತ್ತಿರುವ ಆನೆಗಳ ತಂಡ ಬೆಳೆಯನ್ನು ಸಂಪೂರ್ಣ ನಾಶ ಮಾಡುತ್ತಿವೆ. ಹೀಗಾಗಿ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
    ಆಲ್ದೂರು, ಕಂಚಿಕಲ್ ದುರ್ಗದಿಂದ ಅರೆನೂರು ಭಾಗದವರೆಗೂ ಸಂಚಾರ ಮಾಡುತ್ತಿರುವ ಈ ಆನೆಗಳು ಕಣತಿ, ಬಸರವಳ್ಳಿ ಭಾಗದಲ್ಲಿಯೂ ಹಾವಳಿ ಮಾಡುತ್ತಿವೆ. ಭುವನೇಶ್ವರಿ ಸೇರಿದಂತೆ ಏಳು ಆನೆಗಳಿರುವ ಈ ತಂಡ ತಮ್ಮ ಆಹಾರಕ್ಕಾಗಿ ಅವಲಂಬಿಸಿರುವುದು ಕಾಫಿ ತೋಟ ಹಾಗೂ ರೈತರ ಜಮೀನುಗಳನ್ನು. ಸಕಲೇಶಪುರ ಭಾಗದಿಂದ ಬಂದಿರುವ ಈ ಆನೆಗಳು ಮತ್ತೆ ಮರಳಿ ತಮ್ಮ ಮೂಲ ಸ್ಥಾನಕ್ಕೆ ಹೋಗಿಲ್ಲ. ಕಳೆದ ಎರಡು ತಿಂಗಳಿಂದಲೂ ಆಲ್ದೂರು ಭಾಗದಲ್ಲಿಯೇ ಬಿಡು ಬಿಟ್ಟಿರುವ ಈ ಆನೆಗಳ ಹಾವಳಿ ಹೇಳತೀರದಾಗಿದೆ.
    ಐದು ದೊಡ್ಡ ಆನೆಗಳು ಹಾಗೂ ಎರಡು ಮರಿ ಆನೆಗಳಿರುವ ಈ ಗುಂಪನ್ನು ಮರಳಿ ಸಕಲೇಶಪುರದತ್ತ ಓಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಬದಲಿಗೆ ಪ್ರತಿದಿನ ಒಂದೊಂದು ಊರಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಆನೆಗಳ ಸಂಚಾರ ಯಾರಿಗೂ ತಿಳಿಯದಂತಾಗಿದೆ.
    ಕಂಚಿಕಲ್ ದುರ್ಗದಿಂದ ಅರೆನೂರು ಭಾಗದವರೆಗೆ ಓಡಾಟ ನಡೆಸುತ್ತಿರುವ ಏಳು ಆನೆಗಳ ತಂಡದ ಮುಖ್ಯ ಆನೆ ಭುವನೇಶ್ವರಿಗೆ ನಾಲ್ಕು ವರ್ಷದ ಹಿಂದೆ ಜಿಪಿಆರ್‌ಎಸ್ ಅಳವಡಿಸಲಾಗಿದೆ. ಜಿಪಿಆರ್‌ಎಸ್ ಆಧಾರದ ಮೇಲೆ ಈ ಆನೆಗಳ ತಂಡ ಎಲ್ಲಿ ಸಂಚಾರ ನಡೆಸುತ್ತಿದೆ ಎನ್ನುವುದನ್ನು ತಿಳಿಯಲಾಗುತ್ತಿದೆ. ಜತೆಗೆ ಆನೆಗಳು ಇರುವ ಭಾಗದ ಜನರಿಗೆ ಮೊದಲೇ ಮಾಹಿತಿ ನೀಡಲಾಗುತ್ತಿದೆ. ಪ್ರತಿ ವರ್ಷ ಆಲ್ದೂರು ಭಾಗಕ್ಕೆ ಬರುತ್ತಿದ್ದ ಈ ಆನೆಗಳ ತಂಡ ಒಂದು ತಿಂಗಳೊಳಗೆ ವಾಪಸ್ ಹೋಗುತ್ತಿತ್ತು. ಆದರೆ ಈ ಬಾರಿ ಮಾತ್ರ ಕಾಫಿ ನಾಡಿನಲ್ಲೇ ಠಿಕಾಣಿ ಹೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts