More

     ಅರ್ಧ ಶತಕ ಬಾರಿಸಿದ ತೆಂಗಿನಕಾಯಿ!

    – ಹರೀಶ್ ಮೋಟುಕಾನ ಮಂಗಳೂರು
    ಕರಾವಳಿ ಮಾರುಕಟ್ಟೆಯಲ್ಲಿ ಎರಡು ವಾರಗಳಿಂದ ತೆಂಗಿನಕಾಯಿ ಬೆಲೆ ಏರುಗತಿಯಲ್ಲಿದ್ದು, ಅತ್ಯಧಿಕ ಧಾರಣೆ ಮಾರುಕಟ್ಟೆಯಲ್ಲಿದೆ. ಇದಕ್ಕೆ ಇದಕ್ಕೆ ಕಾರಣ, ಸ್ಥಳೀಯ ತೆಂಗಿನಕಾಯಿ ಪೂರೈಕೆ ಕಡಿಮೆಯಾಗಿರುವುದು. ಕರಾವಳಿಯಲ್ಲಿ ತೆಂಗು ಫಸಲು ಕಡಿಮೆಯಾದರೆ, ತೆಂಗು ಹೆಚ್ಚು ಬೆಳೆಯುವ ತುಮಕೂರು, ತಿಪಟೂರು, ಚಾಮರಾಜನಗರ ಮೊದಲಾದ ಕಡೆ ರೋಗಬಾಧೆ ತೊಂದರೆ ಮಾಡಿದೆ. ಇದರಿಂದಾಗಿ ಕರಾವಳಿ ಭಾಗಕ್ಕೆ ಪೂರೈಕೆ ಕಡಿಮೆಯಾಗಿದೆ. ಎಣ್ಣೆ ತಯಾರಿ, ದೇವಾಲಯಗಳಲ್ಲಿ ಹಣ್ಣುಕಾಯಿ ಸೇವೆ, ಸೀಯಾಳಕ್ಕೂ ಹೆಚ್ಚು ಬಳಕೆಯಾಗುವ ಕಾರಣ, ತೆಂಗಿನಕಾಯಿ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.

    ಮಂಗಳೂರಿನಲ್ಲಿ ಎರಡು ವಾರಗಳ ಹಿಂದೆ ಸ್ಥಳೀಯ ತೆಂಗಿನಕಾಯಿಯನ್ನು ಬೆಳೆಗಾರರಿಂದ 40 ರೂ.ಗೆ ಖರೀದಿಸುವ ವ್ಯಾಪಾರಿಗಳು 5 ರೂ. ಹೆಚ್ಚಿಸಿ ಮಾರಾಟ ಮಾಡುತ್ತಿದ್ದರು. ಈಗ 50 ರೂ.ಗೆ ಖರೀದಿಸಿ 55 ರೂ.ಗೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಯಲು ಸೀಮೆಯ ತೆಂಗಿನಕಾಯಿ ಇದಕ್ಕಿಂತ 5 ರೂ. ಕಡಿಮೆ ದರದಲ್ಲಿ ಲಭಿಸುತ್ತಿದೆ. ಉಡುಪಿ ಜಿಲ್ಲೆಯಲ್ಲೂ 1 ಕೆ.ಜಿ ತೆಂಗಿನಕಾಯಿ ಬೆಲೆ 50 ರೂಪಾಯಿ ತಲುಪಿದೆ. ಒಂದು ದೊಡ್ಡ ಗಾತ್ರದ ತೆಂಗಿನಕಾಯಿ ದರ 35 ರೂ. ಕಳೆದ ವರ್ಷ ತೆಂಗಿನಕಾಯಿ ಕೆ.ಜಿ ದರ 40 ರೂ. ಆಗಿತ್ತು. ಬೇಡಿಕೆಗೆ ತಕ್ಕಷ್ಟು ಫಸಲು ಇಲ್ಲದಿರುವುದು ಮತ್ತು ಪರ್ಯಾಯ ಬಳಕೆಯಿಂದ ತೆಂಗಿನಕಾಯಿ ದರ ಗಗನಕ್ಕೇರಿದೆ ಎನ್ನುತ್ತಾರೆ ವ್ಯಾಪಾರಿಗಳು.

    ಹಳ್ಳಿಗಳಲ್ಲೇ ಇಲ್ಲ: ಫಸಲು ಕಡಿಮೆಯಾಗಿರುವ ಕಾರಣ ಹೆಚ್ಚಾಗಿ ತೆಂಗು ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲೂ ಈಗ ತೆಂಗಿನಕಾಯಿಗೆ ಬರ. ಅಂಗಡಿಗಳಲ್ಲಿ ಮಾತ್ರವಲ್ಲ, ತೋಟದ ಮಾಲೀಕರನ್ನೇ ಕೇಳಿದರೂ ಇಲ್ಲ ಎನ್ನುವ ಉತ್ತರವೇ ಸಿಗುತ್ತಿದೆ. ತೆಂಗಿನಕಾಯಿ ಸಿಗದೆ ಹಲವು ಮನೆಗಳಲ್ಲಿ ಗೃಹಿಣಿಯರು ತಿಳಿಸಾರಿನ ಊಟಕ್ಕೆ ತೃಪ್ತಿ ಪಡುವಂತಾಗಿದೆ.

    ಎಳನೀರಿಗೆ ಡಿಮಾಂಡ್: ಕೃಷಿಕರು ಸೀಯಾಳದಲ್ಲಿ ಲಾಭ ಅಧಿಕ ಎಂಬ ಕಾರಣಕ್ಕೆ ಕಾಯಿ ಬಲಿಯುವ ಮುನ್ನವೇ ಮಾರಾಟ ಮಾಡುತ್ತಾರೆ. ಖರೀದಿಸುವವರು ತೋಟಕ್ಕೆ ಬಂದು ಕೊಂಡೊಯ್ಯುತ್ತಾರೆ. ಕರೊನಾ ಬಳಿಕ ತೆಂಗಿನೆಣ್ಣೆ ಬಳಕೆ ಹೆಚ್ಚಾಗಿದೆ. ಜನ ಆರೋಗ್ಯ ಕಾಳಜಿ ವಹಿಸುತ್ತಿರುವುದರಿಂದ ಹೆಚ್ಚಿನವರು ತೆಂಗಿನೆಣ್ಣೆ ಬಳಸುತ್ತಿದ್ದಾರೆ. ಸ್ಥಳೀಯ ತೆಂಗಿನಕಾಯಿ ಎಣ್ಣೆಗಾಗಿ ಮಿಲ್ ಪಾಲಾಗುತ್ತಿದೆ ಎಂದು ಸುಳ್ಯದ ತೆಂಗು ಕೃಷಿಕ ಉದಯ ಕಿರಣ್ ಹೇಳುತ್ತಾರೆ. ಕರಾವಳಿಯ ತೆಂಗು ಫಸಲು ಈ ವರ್ಷ ಕಡಿಮೆಯಾಗಿದೆ. ಬಯಲು ಸೀಮೆಯಿಂದಲೂ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಇದರಿಂದ ಸಹಜವಾಗಿ ದರ ಹೆಚ್ಚಳವಾಗಿದೆ ಎನ್ನುವುದು ಮಂಗಳೂರಿನ ತೆಂಗಿನಕಾಯಿ ವ್ಯಾಪಾರಿ ಮೊಹಮ್ಮದ್ ಹನೀಫ್ ಅಭಿಪ್ರಾಯ.

    ಗ್ರಾಮೀಣ ಪ್ರದೇಶಗಳಲ್ಲಿ ಮಂಗಗಳ ಕಾಟ: ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ಅರಣ್ಯ ಪ್ರದೇಶದ ಬಳಿ ಕೃಷಿಕರು ನೂರಾರು ತೆಂಗಿನಮರ ಹೊಂದಿದ್ದರೂ, ದಿನಬಳಕೆಗೆ ಅಂಗಡಿಯಿಂದ ತೆಂಗಿನಕಾಯಿ ತರುವ ಸ್ಥಿತಿ ಎದುರಾಗಿದೆ. ತೋಟಗಳಿಗೆ ಲಗ್ಗೆ ಇಡುವ ಕೋತಿಗಳ ಹಿಂಡು ಎಳೆ ಕಾಯಿಯನ್ನೇ ಕಿತ್ತು ತಿಂದು ಬಿಸಾಡುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಕೃಷಿಕರಿಗೆ ವಾರ್ಷಿಕ ಕೋಟ್ಯಂತರ ರೂ.ನಷ್ಟವಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಅಂದಾಜಿಸಿದ್ದಾರೆ.

    ಕರಾವಳಿಯ ತೆಂಗಿನಕಾಯಿ ಬಯಲು ಸೀಮೆಯ ಕಾಯಿಗಿಂತ ರುಚಿ ಹೆಚ್ಚು. ಇಲ್ಲಿನ ಕಾಯಿಯಲ್ಲಿ ಎಣ್ಣೆಯ ಅಂಶ ಹೆಚ್ಚು. ಆದುದರಿಂದ ಇತರ ರಾಜ್ಯ ಹಾಗೂ ಜಿಲ್ಲೆಗಳಿಗೆ ಪೂರೈಕೆಯಾಗುತ್ತಿದೆ. ಬಯಲು ಸೀಮೆಯಲ್ಲಿ ತೆಂಗು ರೋಗಕ್ಕೆ ತುತ್ತಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗಳಲ್ಲಿ ತೆಂಗಿನಕಾಯಿ ದರ ಹೆಚ್ಚಾಗಿದೆ.
    – ರವಿಕಿರಣ ಪುಣಚ, ಮುಖಂಡ, ರೈತ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts